ಕಳೆದ 24 ವರ್ಷಗಳಿಂದ ಬೋಫೋರ್ಸ್ ಗನ್ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆಗಾಗಿ ಕೇಂದ್ರೀಯ ತನಿಖಾ ಮಂಡಳಿ (ಸಿಬಿಐ) ವ್ಯಯಿಸಿದ್ದು ಬರೋಬ್ಬರಿ 250 ಕೋಟಿ ರೂಪಾಯಿ. ಹಗರಣದಲ್ಲಿ ಒಟ್ಟಾವಿಯೋ ಕ್ವಟ್ರೋಚಿ ವಿರುದ್ಧದ ಪ್ರಕರಣದ ತನಿಖೆ ಅಸಾಧ್ಯ ಎಂದು ಅದು ಶುಕ್ರವಾರ ನ್ಯಾಯಾಲಯದ ಅನುಮತಿ ಕೇಳಿದಾಗ, ಬಹುಶಃ ಈ ಅರ್ಜಿ ಸಲ್ಲಿಸುವ ಮೊದಲು ಭಾರತೀಯ ತೆರಿಗೆದಾರರ ಇಷ್ಟು ಹಣ ವ್ಯಯವಾಗಿರುವುದು ಅದರ ಗಮನಕ್ಕೆ ಬಂದಂತಿಲ್ಲ.
ರಾಜಕೀಯವಾಗಿ ಅತ್ಯಂತ ಕೋಲಾಹಲವೆಬ್ಬಿಸಿದ ಹಗರಣದ ಬದುಕುಳಿದಿರುವ ಏಕೈಕ ಆರೋಪಿ, ಇಟಲಿಯ ಉದ್ಯಮಿ ಕ್ವಟ್ರೋಚಿ. ಇಷ್ಟು ವರ್ಷ ಶ್ರಮ ಪಟ್ಟರೂ ಯಾವುದೇ ಫಲಿತಾಂಶ ಇಲ್ಲ ಎನ್ನುತ್ತಾ ಮುಖ್ಯ ಮೆಟ್ರೋಪಾಲಿಟನ್ ನ್ಯಾಯಾಧೀಶ ವಿನೋದ್ ಯಾದವ್ ಅವರು, ಸಾರ್ವಜನಿಕರ ಹಿತದೃಷ್ಟಿಯಿಂದ ಕೇಸನ್ನು ಮುಚ್ಚಿ ಹಾಕುವುದೇ ಸೂಕ್ತ ಎನ್ನುತ್ತಾ, ಕ್ವಟ್ರೋಚಿಯನ್ನು ಪ್ರಕರಣಗಳಿಂದ ಮುಕ್ತಗೊಳಿಸಲು ಸಮ್ಮತಿಸಿದರು.
1989ರಲ್ಲಿ ರಾಜೀವ್ ಗಾಂಧಿ ಸರಕಾರ ಪತನಕ್ಕೆ ಕಾರಣವಾಗಿದ್ದೇ ಈ ಹಗರಣ. ಆದರೆ ಇದೀಗ ಸ್ಥಳೀಯ ನ್ಯಾಯಾಲಯದ ತೀರ್ಮಾನವನ್ನು ಹೈಕೋರ್ಟಿನಲ್ಲಿ ಪ್ರಶ್ನಿಸುವುದಾಗಿ ತಿಳಿಸಿದ್ದಾರೆ ಅರ್ಜಿದಾರ ಅಜಯ್ ಅಗರ್‌ವಾಲ್.
41 ಕೋಟಿ ರೂಪಾಯಿ ಹಣವನ್ನು ಕ್ವಟ್ರೋಚಿ ಹಾಗೂ ಇನ್ನೊಬ್ಬ ಆರೋಪಿ, ದಿವಂಗತ ವಿನ್ ಛಡ್ಡಾರಿಗೆ ನೀಡಲಾಗಿತ್ತು. ಅದಕ್ಕೆ ತೆರಿಗೆ ಪಾವತಿಸದೇ ಇರುವುದು ಅಕ್ರಮ ಎಂದು ಆದಾಯ ತೆರಿಗೆ ಅಪಲೇಟ್ ಮಂಡಳಿಯು 2010ರ ಡಿ.31ರ ತನ್ನ ಆದೇಶದಲ್ಲಿ ತಿಳಿಸಿರುವುದರಿಂದ ಈ ಕೇಸು ಇನ್ನೂ ಪೂರ್ತಿಯಾಗಿ ಸತ್ತು ಹೋಗಿಲ್ಲ ಎಂಬುದು ಖಚಿತವಾಗುತ್ತದೆ.
ಕ್ವಟ್ರೋಚಿ ವಿರುದ್ಧ ಕೇಸು ಹಿಂತೆಗೆದುಕೊಳ್ಳುವಂತೆ ಒಂದುವರೆ ವರ್ಷದ ಹಿಂದೆ ಸಿಬಿಐ ಅರ್ಜಿ ಸಲ್ಲಿಸಿತ್ತು. ಮಲೇಷ್ಯಾ ಮತ್ತು ಅರ್ಜೆಂಟೀನಾದಿಂದ ಕ್ವಟ್ರೋಚಿಯನ್ನು ಗಡೀಪಾರು ಮಾಡಿಸಲು ತಾನು ವಿಫಲವಾಗಿದ್ದು, ಪ್ರಕರಣ ಮುಚ್ಚಿಹಾಕಲು ಅನುಮತಿ ನೀಡಬೇಕೆಂದು ಅದು ಕೋರಿತ್ತು.
ಸಿಬಿಐಗೆ ಈಗ ಅನುಮತಿ ಕೊಡುವುದಕ್ಕೆ ಪ್ರಮುಖ ಕಾರಣವೇ ಭಾರೀ ಮೊತ್ತವಾದ 250 ಕೋಟಿ ರೂಪಾಯಿ ಹಣವು ತನಿಖೆಗಾಗಿ ವ್ಯಯವಾಗಿರುವುದು. ಇಷ್ಟು ಖರ್ಚಾದರೂ, ಕಾನೂನುಬದ್ಧವಾಗಿ ಸೂಕ್ತ ಸಾಕ್ಷ್ಯಾಧಾರ ಸಂಗ್ರಹಿಸಲು ಸಿಬಿಐಗೆ ಸಾಧ್ಯವಾಗಿಲ್ಲ. ಇದರಿಂದ ಸಾರ್ವಜನಿಕರ ಹಣ ಪೋಲಾಗುತ್ತಿದೆಯಷ್ಟೇ ಎಂಬುದು ನ್ಯಾಯಾಧೀಶರ ಕಳವಳ. ಭಾರತದ ಆಮ್ ಆದ್ಮೀ ಪರಿಶ್ರಮ ಪಟ್ಟು ಸಂಪಾದಿಸಿ ತೆರಿಗೆ ಕಟ್ಟಿದ ಹಣವನ್ನು ಈ ರೀತಿ ಪೋಲು ಮಾಡುವುದು ನ್ಯಾಯವೇ ಎಂದವರು ತಮ್ಮ 73 ಪುಟಗಳ ಆದೇಶದಲ್ಲಿ ಪ್ರಶ್ನಿಸಿದ್ದಾರೆ.
ಇಷ್ಟಾದರೂ, ಕೇಸು ಹಿಂತೆಗೆದುಕೊಂಡಿರುವುದು ಮಾತ್ರ ದೇಶದ ಪ್ರಮುಖ ತನಿಖಾ ಸಂಸ್ಥೆಯಾದ ಸಿಬಿಐಯ ವೈಫಲ್ಯವನ್ನು ಜಾಗತಿಕವಾಗಿ ಬಟಾಬಯಲಾಗಿಸಿರುವುದು ಮಾತ್ರ ಅಷ್ಟೇ ದುರಂತದ ಸಂಗತಿ.
ಆಡಳಿತಕ್ಕೇನಾಗಿದೆ?....
ನಾವೆಲ್ಲಾ ಸೆನ್ಸೆಕ್ಸ್ ಕುಸಿತ, ಹಗರಣಗಳು ಮುಂತಾದವುಗಳ ಬಗ್ಗೆ ಸುಮ್ಮನೇ ಚರ್ಚೆ ಮಾಡುತ್ತಿದ್ದರೆ, ಭಾರತದ ಬಡವರು ಇನ್ನೂ ಬದುಕುಳಿಯಲು ಹೆಣಗಾಡುತ್ತಿದ್ದಾರೆ. ಇದೆಂಥಾ ಆಡಳಿತ ನಮ್ಮದು? ದೇಶದ ಕೆಲವೆಡೆ ರಸ್ತೆ, ವಿದ್ಯುತ್, ನೀರಿನ ಸೌಲಭ್ಯವೇ ಇಲ್ಲ. ಆಡಳಿತಕ್ಕೇನಾಗಿದೆ ಎಂದು ಕೇಂದ್ರ ಸರಕಾರವನ್ನು ನೇರವಾಗಿಯೇ ಪ್ರಶ್ನಿಸಿದ್ದಾರೆ ನ್ಯಾಯಾಧೀಶರು.
ಉತ್ತರ ಕೊಡುವವರು ಯಾರು?