Select Your Language

Notifications

webdunia
webdunia
webdunia
webdunia

ಬಾಚಾ ಪೋಸ್ಟ್ ಮಾರ್ಟಂ ಮಾಡಿದ ವೈದ್ಯ ರಾಜೀನಾಮೆ

ಸಾಧಿಕ್ ಬಾಚಾ
ಚೆನ್ನೈ , ಸೋಮವಾರ, 21 ಮಾರ್ಚ್ 2011 (15:06 IST)
ದೂರಸಂಪರ್ಕ ಖಾತೆ ಮಾಜಿ ಸಚಿವ ರಾಜಾ ಆಪ್ತ, 2ಜಿ ತರಂಗಾಂತರ ಹಂಚಿಕೆ ಹಗರಣದಲ್ಲಿ ಸಿಬಿಐಯಿಂದ ವಿಚಾರಣೆಗೊಳಗಾಗಿದ್ದ ಸಾಧಿಕ್ ಬಾಚಾ ಆತ್ಮಹತ್ಯೆ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಅವರ ಶವದ ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯ ಡಾ. ವಿ. ದೇಕಲ್ ರಾಜೀನಾಮೆ ಸಲ್ಲಿಸಿದ್ದಾರೆ.

39ರ ಹರೆಯದ ಸಾಧಿಕ್ ಬಾಚಾ ಕಳೇಬರ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಕಳೆದ ಬುಧವಾರ (ಮಾರ್ಚ್ 16) ಚೆನ್ನೈಯ ಅವರ ನಿವಾಸದಲ್ಲಿ ಪತ್ತೆಯಾಗಿತ್ತು. ಈ ಅನಿರೀಕ್ಷಿತ ಸಾವು ಭಾರೀ ನಿಗೂಢತೆಗೂ ಕಾರಣವಾಗಿತ್ತು. ಬಾಚಾರದ್ದು ಆತ್ಮಹತ್ಯೆಯಲ್ಲ ಎಂದು ಸುಬ್ರಮಣ್ಯನ್ ಸ್ವಾಮಿ, ಜಯಲಲಿತಾ ಸೇರಿದಂತೆ ಹಲವು ಮಂದಿ ಶಂಕೆ ವ್ಯಕ್ತಪಡಿಸಿದ್ದರು.

ಚೆನ್ನೈಯನ ರಾಯ್‌ಪೇಟದಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಫಾರೆನ್ಸಿಕ್ ವೈದ್ಯಕೀಯ ವಿಭಾಗದ ಸಹಾಯಕ ಪ್ರೊಫೆಸರ್ ಆಗಿದ್ದ ದೇಕಲ್ ರಾಜೀನಾಮೆ ಸಲ್ಲಿಸಿರುವುದು ಭಾರೀ ಕುತೂಹಲ ಕೆರಳಿಸಿದೆ. ಅಲ್ಲದೆ, ರಾಜೀನಾಮೆಗೂ ಬಾಚಾ ಸಾವಿಗೂ ಯಾವುದೇ ಸಂಬಂಧ ಇಲ್ಲ ಎಂಬುದನ್ನು ರುಜುವಾತು ಪಡಿಸುವ ಯತ್ನಗಳು ನಡೆದಿವೆ.

ಮೊದಲನೆಯದಾಗಿ ಡಾ. ದೇಕಲ್ ಅವರು ಮಾರ್ಚ್ 3ರಂದೇ ರಾಜೀನಾಮೆ ಸಲ್ಲಿಸಿರುವುದು. ಅಂದರೆ ಬಾಚಾ ಆತ್ಮಹತ್ಯೆ ಮಾಡಿಕೊಳ್ಳುವ ಹದಿನೈದು ದಿನಗಳ ಮೊದಲೇ ರಾಜೀನಾಮೆ ನೀಡಿದ್ದರು. ಎರಡನೆಯದಾಗಿ ಅವರು ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿರುವುದು.

ಈ ಬಗ್ಗೆ ಮಾತನಾಡಿರುವ ದೇಕಲ್, ನನಗೆ ಇನ್ನಷ್ಟೇ ಸೇವೆಯಿಂದ ಬಿಡುಗಡೆ ಪತ್ರ ಸಿಗಬೇಕಿದೆ. ಅದು ಬಂದ ನಂತರ ನಾನು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದಿದ್ದಾರೆ.

ಡಿಎಂಕೆ ಕಟ್ಟಾ ಬೆಂಬಲಿಗರೊಬ್ಬರ ಪುತ್ರ ಡಾ. ದೇಕಲ್ ಎಂದು ವರದಿಗಳು ಹೇಳಿವೆ.

ಬಾಚಾ ಶವ ಮರಣೋತ್ತರ ವರದಿ ಬಗ್ಗೆ ಹೆಚ್ಚೇನೂ ವಿವರವನ್ನು ಬಿಟ್ಟು ಕೊಡದ ವೈದ್ಯರು, ಸಾವು ಉಸಿರುಗಟ್ಟಿದ ನಂತರ ಸಂಭವಿಸಿದೆ ಎಂದು ಕೆಲ ದಿನಗಳ ಹಿಂದೆ ಹೇಳಿದ್ದರು. ಈ ಕುರಿತ ವಿಸ್ತೃತ ವರದಿ ಪ್ರಯೋಗಾಲಯದಿಂದ ಇನ್ನಷ್ಟೇ ಬರಬೇಕಿದೆ.

Share this Story:

Follow Webdunia kannada