Select Your Language

Notifications

webdunia
webdunia
webdunia
webdunia

ಬಸವಳಿದ ಪ್ರತಿಭಟನಾಕಾರರಿಗೆ ಬಾರ್ ಬಾಲೆಯರ 'ಉಪಚಾರ'

ಬಾರ್ ಗರ್ಲ್ಸ್
ಲಕ್ನೋ , ಸೋಮವಾರ, 14 ಮಾರ್ಚ್ 2011 (12:41 IST)
ಸರಕಾರಗಳ ಗಮನ ಸೆಳೆಯಲು ನಡೆಸುತ್ತಿರುವ ಪ್ರತಿಭಟನೆಗಳು ವಿಚಿತ್ರ ತಿರುವು ಪಡೆಯುತ್ತಿರುವುದು ಹೊಸತೇನಲ್ಲ. ಪ್ರತಿಭಟನೆಯ ಹೆಸರಿನಲ್ಲಿ ಮೋಜು-ಗೌಜಿ ಮಾಡುವುದು, ಕುಣಿದು ಕುಪ್ಪಳಿಸುವುದು, ಚೆಂಡೆ-ವಾದ್ಯ ಬಾರಿಸುವುದು-ನುಡಿಸುವುದು ಮುಂತಾದುವುಗಳನ್ನು ನೋಡಿದ್ದೇವೆ. ಈಗ ಬಾರ್ ಬಾಲೆಯರ ಜತೆಗಿನ ಕುಣಿತವೂ ಇದಕ್ಕೆ ಸೇರ್ಪಡೆಗೊಂಡಿದೆ. ಅದು ಪ್ರತಿಭಟನಾಕಾರರ ಸುಸ್ತನ್ನು ಹೋಗಲಾಡಿಸಲು ಎನ್ನುವುದು ಮತ್ತೊಂದು ವಿಶೇಷ!

ಇದು ನಡೆದಿರುವುದು ಉತ್ತರ ಪ್ರದೇಶದ ಅಮೋರಾ ಜಿಲ್ಲೆಯಲ್ಲಿ. ಉತ್ತರ ರೈಲ್ವೆಯಲ್ಲಿ ಕೇಂದ್ರ ಸರಕಾರವು ಜಾತ್ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂದು ಕಳೆದ ಹತ್ತು ದಿನಗಳಿಂದ ಮೊರದಾಬಾದ್-ದೆಹಲಿ ರೈಲು ನಿಲ್ದಾಣದಲ್ಲಿ ಆ ಸಮುದಾಯದ ಮಂದಿ ಪ್ರತಿಭಟನೆ ನಡೆಸುತ್ತಿದ್ದು, ಅವರಿಗೆ ಬಾರ್ ಹುಡುಗಿಯರು ಮನರಂಜನೆ ನೀಡುತ್ತಿದ್ದಾರೆ. ತಮ್ಮ ವಯ್ಯಾರ ಭರಿತ ಕುಣಿತದ ಮೂಲಕ ಸುಸ್ತಾದವರನ್ನು ತಣಿಸುತ್ತಿದ್ದಾರೆ.

ಜಾತ್ ಸಮುದಾಯದವರು ರೈಲು ಹಳಿಗಳ ಮೇಲೆಯೇ ತಮ್ಮ ತಾತ್ಕಾಲಿಕ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಅಲ್ಲೇ ಅಡುಗೆ ಮಾಡುತ್ತಿದ್ದಾರೆ, ಮಲಗುತ್ತಿದ್ದಾರೆ. ಜಾತ್ ಮಹಿಳೆಯರು ರೈಲು ಹಳಿಗಳ ಮೇಲೆಯೇ ಕಾವಲಿಯಿಟ್ಟು ಚಪಾತಿ ಮಾಡುತ್ತಿದ್ದರೆ, ಪುರುಷರು ಆರಾಮವಾಗಿ ಹುಕ್ಕಾ ಸೇದುತ್ತಿದ್ದಾರೆ.

ತಮ್ಮ ಜಾನುವಾರುಗಳನ್ನು ಕೂಡ ರೈಲ್ವೆ ಹಳಿಗಳಿಗೆ ಅವರು ಕಟ್ಟಿದ್ದಾರೆ. ಈ ಪ್ರತಿಭಟನೆಗೆ ಭಾನುವಾರ ಒಂಬತ್ತು ದಿನ ತುಂಬಿದೆ. ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರವಾಗಲಿ, ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿಯಾಗಲಿ ಇದನ್ನು ಗಂಭೀರವಾಗಿ ಪರಿಗಣಿಸದೇ ಇರುವುದರಿಂದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುವ ಎಲ್ಲಾ ಲಕ್ಷಣಗಳೂ ತೋರಿಸುತ್ತಿವೆ. ಈ ನಡುವೆ ನಡೆದ ಆವಾಂತರ ಬಾರ್ ಬಾಲೆಯರ ಕುಣಿತ.

ಪ್ರತ್ಯಕ್ಷದರ್ಶಿಗಳು ಮತ್ತು ಇತರರ ಪ್ರಕಾರ, ಬಾರ್ ಬಾಲೆಯರ ನೃತ್ಯ ಮತ್ತು ಹಾಡುಗಳ ಕಾರ್ಯಕ್ರಮಗಳನ್ನು ಆಯೋಜಿಸಿರುವುದರ ಹಿಂದಿನ ಉದ್ದೇಶ, ಪ್ರತಿಭಟನಾಕಾರರನ್ನು ರಂಜಿಸುವುದು. ಅದರಲ್ಲೂ ಹಲವು ದಿನಗಳ ಕಾಲ ಯುವಕರನ್ನು ಪ್ರತಿಭಟನಾ ಸ್ಥಳದಲ್ಲಿ ಉಳಿಸಿಕೊಳ್ಳುವುದು ಸವಾಲಿನ ಕೆಲಸವಾಗಿರುವುದರಿಂದ ಹೀಗೆ ಮಾಡಲಾಗಿದೆಯಂತೆ.

ಪ್ರತಿಭಟನಾಕಾರರು ಸ್ಥಳ ಬಿಟ್ಟು ಹೋಗಬಾರದು. ಪ್ರತಿಭಟನಾಕಾರರ ಸಾಮರ್ಥ್ಯ ಕುಗ್ಗಬಾರದು. ಸಂಖ್ಯಾಬಲ ಕಡಿಮೆಯಾಗಬಾರದು. ಆ ಕಾರಣಕ್ಕಾಗಿ ಬಾರ್ ಬಾಲೆಯರನ್ನು ಕರೆಸಿ ಕುಣಿಸಲಾಗುತ್ತಿದೆ. ಜಾನಪದ ಗೀತೆಗಳನ್ನು ಕೂಡ ಇಲ್ಲಿ ಸ್ಥಳೀಯ ಹಾಡುಗಾರರು ಹಾಡುತ್ತಾರೆ. ದೇಸೀ ಸಂಗೀತ ಪರಿಕರಗಳನ್ನು ಬಳಸಿ ಈ ರಂಜನೆ ನೀಡಲಾಗುತ್ತದೆ ಎಂದು ಇನ್ನು ಕೆಲವರು ಹೇಳಿಕೊಂಡಿದ್ದಾರೆ.

ತಮ್ಮ ಪ್ರತಿಭಟನೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸದೇ ಇದ್ದರೆ, ಇನ್ನಷ್ಟು ಅತಿರೇಕದ ಅಸ್ತ್ರಗಳು ತಮ್ಮಲ್ಲಿವೆ. ದೆಹಲಿಗೆ ಹಾಲು ಕಳುಹಿಸುವುದಿಲ್ಲ, ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತೇವೆ ಎಂದು ಈ ನಡುವೆ ಪ್ರತಿಭಟನಾಕಾರರಿಂದ ಬೆದರಿಕೆಯೂ ಬಂದಿದೆ.

Share this Story:

Follow Webdunia kannada