ಅಜ್ಮೀರ್ ಶರೀಫ್, ಮೆಕ್ಕಾ ಮಸೀದಿ ಮತ್ತು ಸಂಜೋತಾ ಎಕ್ಸ್‌ಪ್ರೆಸ್ ಮುಂತಾದ ಸ್ಫೋಟಗಳ ಹಿಂದಿನ ನೈಜ ರೂವಾರಿ ಯಾರೆಂಬುದು ಬಹಿರಂಗವಾಗಿದೆ. ಅಲೋಕ್ ಕುಮಾರ್ ಎಂಬಾತನೇ ಈ ಬಲಪಂಥೀಯ ಭಯೋತ್ಪಾದನೆಯ ಬಯಲಾಗಿರುವ ಮುಖ ಎಂದು ಸುದ್ದಿವಾಹಿನಿಯೊಂದು ವರದಿ ಮಾಡಿದೆ.
ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್, ಸ್ವಾಮಿ ಅಸೀಮಾನಂದ್ ಮತ್ತು ಸುನಿಲ್ ಜೋಷಿ ಮುಂತಾದವರನ್ನೊಳಗೊಂಡ, ದೇಶದಾದ್ಯಂತ ಸ್ಫೋಟಗಳನ್ನು ನಡೆಸಬೇಕು ಎಂದು ಯೋಜನೆ ಹಾಕಿಕೊಂಡಿದ್ದ, ಹಲವು ಕಡೆ ವಿಧ್ವಂಸಕ ಕೃತ್ಯಗಳನ್ನು ನಡೆಸಿದ್ದ ತಂಡವನ್ನು ಮುನ್ನಡೆಸಿದ್ದು ಅಲೋಕ್ ಕುಮಾರ್ ಎಂದು 'ಜೀ ನ್ಯೂಸ್' ತನಿಖಾ ವರದಿ ಪ್ರಸಾರ ಮಾಡಿದೆ.
ಪ್ರಸಕ್ತ ಬಂಧನದಲ್ಲಿರುವ ಅಸೀಮಾನಂದ್ ಮೊದಲು ಭೇಟಿ ಮಾಡಿದ ವ್ಯಕ್ತಿ ಅಲೋಕ್ ಕುಮಾರ್ ಎಂದು ಹೇಳಲಾಗಿದೆ. ಗುಜರಾತಿನ ಡಂಗ್ ಜಿಲ್ಲೆಯಲ್ಲಿ 2005ರಲ್ಲಿ ಸ್ಫೋಟಕ್ಕೆ ಯೋಜನೆ ರೂಪಿಸುವ ಸಲುವಾಗಿ ಈ ಭೇಟಿ ನಡೆದಿತ್ತು.ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗುವ ಬಲಪಂಥೀಯ ಗುಂಪಿಗೆ ತಕ್ಷಣಕ್ಕೆ ನಾರ್ತರ್ನ್ ಕಮಾಂಡರ್ ಆಗುವ ತರಾತುರಿಯಿದ್ದ ಕುಮಾರ್‌ಗೆ ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ರಾಜಸ್ತಾನ, ಪಂಜಾಪ್, ದೆಹಲಿ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸುವ ಹೊಣೆಗಾರಿಕೆಯನ್ನು ವಹಿಸಲಾಗಿತ್ತು.ಹಿಮಾಚಲ ಪ್ರದೇಶ, ಮಧ್ಯಪ್ರದೇಶ ಮತ್ತು ದೆಹಲಿಗಳಲ್ಲಿ ಯುವಕರನ್ನು ನೇಮಕಾತಿ ಮಾಡಿಕೊಂಡದ್ದ ಅಲೋಕ್ ಕುಮಾರ್, ಸ್ವತಃ ತರಬೇತಿ ನೀಡಿದ್ದಲ್ಲದೆ ಮಧ್ಯಪ್ರದೇಶದ ಪಂಚಮಾರಿಯಲ್ಲಿ ನಡೆಸಿದ ತರಬೇತಿ ಶಿಬಿರದಲ್ಲಿ ಮೆಕ್ಕಾ ಮಸೀದಿ ಸ್ಫೋಟದ ಆರೋಪಿ ಕರ್ನಲ್ ಪುರೋಹಿತ್ ಭಾಗವಹಿಸಿರುವ ಶಂಕೆಯನ್ನು ವರದಿ ವ್ಯಕ್ತಪಡಿಸಿದೆ.ನೇಪಾಳದಲ್ಲಿನ ಅಲೋಕ್ ಸಹಚರನ ಮೂಲಕ ವಿದೇಶಿ ನಿಧಿಯನ್ನು ಕೂಡ ಈ ಬಲಪಂಥೀಯ ಭಯೋತ್ಪಾದನಾ ಗುಂಪು ಸ್ವೀಕರಿಸಿತ್ತು. ಅಸೀಮಾನಂದ್ ಜಾಲಕ್ಕೆ ಸ್ಥಳೀಯವಾಗಿ ಹಣ ಸಂಗ್ರಹ ಮಾಡಲಾಗಿತ್ತು ಎಂದು ಕೂಡ ಆರೋಪಿಸಲಾಗಿದೆ.