Select Your Language

Notifications

webdunia
webdunia
webdunia
webdunia

ಪ್ರಬಲರಾದ ಸಂಸದರು; ನಿಧಿ 2ರಿಂದ 5 ಕೋಟಿಗೆ ಏರಿಕೆ

ಪ್ರಣಬ್ ಮುಖರ್ಜಿ
ನವದೆಹಲಿ , ಶನಿವಾರ, 12 ಮಾರ್ಚ್ 2011 (09:08 IST)
PTI
ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಸಂಸತ್ ಸದಸ್ಯರಿಗೆ ತಮ್ಮ ಕ್ಷೇತ್ರಗಳಲ್ಲಿ ವಿನಿಯೋಗಿಸಲು ನೀಡಲಾಗುವ ಎರಡು ಕೋಟಿ ರೂಪಾಯಿಗಳ ನಿಧಿಯನ್ನು ಐದು ಕೋಟಿ ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ. ಏಪ್ರಿಲ್ ಒಂದರಿಂದಲೇ ಜಾರಿಗೆ ಬರುವಂತೆ ನಿಧಿಯನ್ನು ದುಪ್ಪಟ್ಟಿಗೂ ಹೆಚ್ಚುಗೊಳಿಸುವ ನಿರ್ಧಾರವನ್ನು ಕೇಂದ್ರ ವಿತ್ತ ಸಚಿವ ಪ್ರಣಬ್ ಮುಖರ್ಜಿ ಪ್ರಕಟಿಸಿದ್ದಾರೆ.

ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ (ಎಂಪಿಎಲ್ಎಡಿ) ಅಡಿಯಲ್ಲಿ ಇದುವರೆಗೆ ಲೋಕಸಭೆ ಮತ್ತು ರಾಜ್ಯಸಭೆಯ 797 ಸದಸ್ಯರು ಎರಡು ಕೋಟಿ ರೂಪಾಯಿಗಳನ್ನು ಪ್ರತಿವರ್ಷ ಪಡೆಯುತ್ತಿದ್ದರು. ಅದನ್ನೀಗ ಐದು ಕೋಟಿ ರೂಪಾಯಿಗಳಿಗೆ ಏರಿಸಲಾಗಿದೆ ಎಂದು 2011-12ನೇ ಸಾಲಿನ ಸಾಮಾನ್ಯ ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮುಖರ್ಜಿ ಹೇಳಿದರು.

ಸಂಸದರ ನಿಧಿಯನ್ನು ಹೆಚ್ಚಳ ಮಾಡಿರುವುದರಿಂದ ವರ್ಷಕ್ಕೆ 2,370 ಕೋಟಿ ರೂಪಾಯಿಗಳ ಹೆಚ್ಚುವರಿ ಅನುದಾನವನ್ನು ನೀಡಬೇಕಾಗುತ್ತದೆ. ಇದು ಏಪ್ರಿಲ್ ಒಂದರಿಂದಲೇ ಜಾರಿಗೆ ಬರುತ್ತದೆ. ಪಕ್ಷಾತೀತವಾಗಿ ಎಲ್ಲಾ ಸಂಸದರು ಎಂಪಿಎಲ್ಎಡಿ ನಿಧಿಯನ್ನು ಹೆಚ್ಚಳಗೊಳಿಸಲು ಬೇಡಿಕೆ ಮುಂದಿಟ್ಟಿದ್ದರು. ಇದೀಗ ಅದನ್ನು ಹೆಚ್ಚಳಗೊಳಿಸಲು ಸಂತೋಷವಾಗುತ್ತಿದೆ ಎಂದರು.

ಈ ಸಂಬಂಧ ಮಹಾಲೇಖಪಾಲರು ನೀಡಿರುವ ವರದಿಯನ್ನು ಈಗಷ್ಟೇ ಸ್ವೀಕರಿಸಲಾಗಿದೆ. ಶೀಘ್ರದಲ್ಲೇ ಸದನದಲ್ಲಿ ಮಂಡಿಸಲಾಗುತ್ತದೆ. ಅನುದಾನ ಹೆಚ್ಚಳ ಕುರಿತು ಮಾಡಿರುವ ಸಲಹೆಗಳನ್ನು, ಕಳವಳಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದರು.

ಎಂಪಿಎಲ್ಎಡಿ ಯೋಜನೆಯನ್ನು ಪಿ.ವಿ. ನರಸಿಂಹ ರಾವ್ ಅವರ ಸರಕಾರ 1993ರಲ್ಲಿ ಜಾರಿಗೆ ತಂದಿತ್ತು. ಆರಂಭದಲ್ಲಿ ಸಂಸದರಿಗೆ ವಾರ್ಷಿಕವಾಗಿ 50 ಸಾವಿರ ರೂಪಾಯಿಗಳನ್ನು ನೀಡಲಾಗುತ್ತಿತ್ತು. ಅದನ್ನು ತಮ್ಮ ಕ್ಷೇತ್ರದ ತುರ್ತು ಅವಶ್ಯಕತೆಗಳು ಮತ್ತು ಇತರ ಸಣ್ಣ ಪುಟ್ಟ ಅಭಿವೃದ್ಧಿ ಕಾರ್ಯಗಳಿಗಾಗಿ ಬಳಸಲು ಅವಕಾಶವಿದೆ. ಈ ಸಂಸದರ ನಿಧಿಯನ್ನು 1998ರಲ್ಲಿ ಎರಡು ಕೋಟಿ ರೂಪಾಯಿಗಳಿಗೆ ಏರಿಸಲಾಗಿತ್ತು.

ಈ ಸಂಸದರ ನಿಧಿಯಲ್ಲಿ ಭಾರೀ ಅಕ್ರಮಗಳು ನಡೆಯುತ್ತಿವೆ. ಸಂಸದರು ಅದನ್ನು ಕ್ಷೇತ್ರಗಳಿಗೆ ವಿನಿಯೋಗಿಸುವ ಬದಲು, ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಹಾಗಾಗಿ ಇದರ ನೀತಿಗಳನ್ನು ಕಠಿಣಗೊಳಿಸಬೇಕು ಎಂಬ ಒತ್ತಾಯಗಳು ತೀವ್ರಗೊಂಡಿವೆ.

Share this Story:

Follow Webdunia kannada