ಪ್ರಧಾನಿಯಾಗೋ ಕನಸಲ್ಲೇ ಇದ್ದ ಅಧಿಕಾರವೂ ಹೋಯ್ತು!:ನಿತೀಶ್
ಪಾಟ್ನಾ , ಸೋಮವಾರ, 28 ಮಾರ್ಚ್ 2011 (09:35 IST)
ತಾನು ದೇಶದ ಪ್ರಧಾನಿಯಾಗಬೇಕೆಂಬ ಮಹತ್ವಾಕಾಂಕ್ಷೆ ಹೊಂದಿಲ್ಲ ಎಂದು ಪುನರುಚ್ಚರಿಸಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ರಾಜ್ಯದ ಜನರು ನನಗೆ ಹೆಚ್ಚಿನ ಹೊಣೆಗಾರಿಕೆಯನ್ನು ನೀಡಿದ್ದಾರೆ. ಹಾಗಾಗಿ ಬಿಹಾರದ ಜನರ ಸೇವೆ ಮತ್ತು ಅಭಿವೃದ್ಧಿಯೇ ನನ್ನ ಆದ್ಯತೆಯಾಗಿದೆ ಎಂದು ತಿಳಿಸಿದ್ದಾರೆ.ಹಾಗಾಗಿ ಭವಿಷ್ಯದ ಪ್ರಧಾನಿ ಎಂಬ ಕನಸು ಕಂಡಿಲ್ಲ. ರಾಜ್ಯದ ಜನರು ನನ್ನ ಮೇಲೆ ವಿಶ್ವಾಸ ಇಟ್ಟು ಹೆಚ್ಚಿನ ಜವಾಬ್ದಾರಿ ನೀಡಿದ್ದಾರೆ. ಹಾಗಾಗಿ ನಾನು ಜನರ ಸೇವೆ ಮಾಡುವ ಮೂಲಕ ಬಿಹಾರದ ಅಭಿವೃದ್ಧಿ ಮಾಡಬೇಕಾಗಿದೆ ಎಂದು ಪಾಟ್ನಾದಲ್ಲಿ ಅತಿ ಹಿಂದುಳಿದ ಮುಸ್ಲಿಮ್ ಸಮುದಾಯದ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದರು.ಆದರೆ ಈ ದೇಶದ ಹಲವಾರು ಮುಖ್ಯಮಂತ್ರಿಗಳು ಪ್ರಧಾನಿ ಗದ್ದುಗೆ ಏರುವ ಮಹತ್ವಾಕಾಂಕ್ಷೆ ಇಟ್ಟುಕೊಂಡಿದ್ದ ಬಗ್ಗೆಯೂ ನನಗೆ ಗೊತ್ತಿದೆ. ಆದರೆ ದುರದೃಷ್ಟ ಕೊನೆಗೂ ಅವರ ಕನಸು ನೆರವೇರಲಿಲ್ಲ. ಜೊತೆಗೆ ಮುಖ್ಯಮಂತ್ರಿ ಗದ್ದುಗೆಯೂ ಕಳೆದುಕೊಳ್ಳುವಂತಾಯಿತು ಎಂದು ಲಾಲೂ ಪ್ರಸಾದ್ ಅವರ ಹೆಸರನ್ನು ಪ್ರಸ್ತಾಪಿಸದೆ ಟೀಕಿಸಿದರು.'
ಭವಿಷ್ಯದಲ್ಲಿ ಏನಾಗಲಿದೆ ಎಂಬುದು ಯಾರಿಗೂ ಗೊತ್ತಿರುವುದಿಲ್ಲ. ಏನೇ ಆಗಲಿ ನಾವು ಹಿಡಿದ ಸಾಧನೆ ಬಗ್ಗೆ ತಾರ್ಕಿಕ ಅಂತ್ಯ ಕಾಣಿಸುವವರೆಗೂ ಹೋರಾಟ ನಡೆಸಬೇಕಾಗಿದೆ. ಹಾಗಾಗಿ ನನಗೆ ಚೆನ್ನಾಗಿ ಗೊತ್ತಿದೆ. ನಾನು ಬಿಹಾರದ ಜನರ ಬಗ್ಗೆ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಹೇಳಿದರು. ಅಷ್ಟೇ ಅಲ್ಲ ನಾನು ಭವಿಷ್ಯದ ಪ್ರಧಾನಿ ಎಂದು ಬಿಂಬಿಸಿಕೊಳ್ಳುವ ಘೋಷಣೆಯ ಅಗತ್ಯವೂ ನನಗೆ ಬೇಕಾಗಿಲ್ಲ ಎಂದರು.ಆಡಳಿತಾರೂಢ ಕೇಂದ್ರ ಸರಕಾರ ಅಲ್ಪಸಂಖ್ಯಾತ ಸಮುದಾಯವನ್ನು ಮೇಲಕ್ಕೆತ್ತುವಲ್ಲಿ ಹೆಚ್ಚಿನ ಸಹಾಯ ನೀಡುತ್ತಿಲ್ಲ ಎಂದು ನಿತೀಶ್ ಕುಮಾರ್ ಈ ಸಂದರ್ಭದಲ್ಲಿ ಆರೋಪಿಸಿದರು. ಹಾಗಾಗಿ ರಾಜ್ಯದ ಅಲ್ಪಸಂಖ್ಯಾತ ಸಮುದಾಯದವರ ಏಳಿಗೆಗಾಗಿ ಕೇಂದ್ರದ ನೆರವಿಗಾಗಿ ಕೈಚಾಚುವುದು ಬೇಡ, ಅಲ್ಪಸಂಖ್ಯಾತ ಆರ್ಥಿಕ ಕಾರ್ಪೋರೇಷನ್ ಮೂಲಕ ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಸಮಾವೇಶದಲ್ಲಿಯೇ ಅಧಿಕಾರಿಗಳಿಗೆ ಸೂಚನೆ ನೀಡಿದರು.