ಆಂಧ್ರಪ್ರದೇಶ ರಾಜ್ಯಪಾಲರಾಗಿದ್ದ ಸಂದರ್ಭದಲ್ಲಿ ರಾಸಲೀಲೆಯಿಂದ ಭಾರೀ ಸುದ್ದಿಯಾಗಿದ್ದ ಕಾಂಗ್ರೆಸ್ ಹಿರಿಯ ನಾಯಕ ಎನ್.ಡಿ. ತಿವಾರಿ ಅವರಿಗೆ ಸರ್ವೋಚ್ಚ ನ್ಯಾಯಾಲಯವೂ ನಿರಾಳತೆ ಒದಗಿಸಲು ನಿರಾಕರಿಸಿದೆ. ಪಿತೃತ್ವ ವಿವಾದ ಪ್ರಕರಣದಲ್ಲಿ ಡಿಎನ್‌ಎ ಪರೀಕ್ಷೆಗೆ ಕಡ್ಡಾಯವಾಗಿ ಒಳಪಡುವಂತೆ ಅದು ಆದೇಶ ನೀಡಿದೆ.
ತಿವಾರಿ ಡಿಎನ್ಎ ಪರೀಕ್ಷೆಗೊಳಪಡಬೇಕು. ಆದರೆ, ಈ ಪರೀಕ್ಷೆಯ ಫಲಿತಾಂಶವನ್ನು ಪಿತೃತ್ವ ವಿವಾದ ಪ್ರಕರಣ ಇತ್ಯರ್ಥವಾಗುವವರೆಗೆ ಮತ್ತು ನ್ಯಾಯಾಲಯವು ಅಗತ್ಯ ಎಂದು ಪರಿಗಣಿಸುವವರೆಗೆ ಬಹಿರಂಗ ಮಾಡಬಾರದು ಎಂದು ನ್ಯಾಯಮೂರ್ತಿ ಅಫ್ತಾಬ್ ಆಲಮ್ ಮತ್ತು ಆರ್.ಎಂ. ಲೋಧಾ ಅವರನ್ನೊಳಗೊಂಡ ಪೀಠವು ತೀರ್ಪು ನೀಡಿದೆ.
ರೋಹಿತ್ ಶೇಖರ್ ಎಂಬ ವ್ಯಕ್ತಿ ತಾನು ತಿವಾರಿಯವರ ಜೈವಿಕ ಪುತ್ರ ಎಂದು ಘೋಷಿಸುವಂತೆ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ತಿವಾರಿಯವರು ಶೇಖರ್ ತನ್ನ ಮಗನೆಂದು ಒಪ್ಪಿಕೊಳ್ಳಲು ನಿರಾಕರಿಸಿದ್ದರು. ಈ ಸಂಬಂಧ ತಿವಾರಿ ಡಿಎನ್ಎ ಪರೀಕ್ಷೆಗೊಳಪಡಬೇಕು ಎಂದು ಹೈಕೋರ್ಟ್ ಆದೇಶ ನೀಡಿತ್ತು. ಇದನ್ನು ತಿವಾರಿಯವರು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿದ್ದರು.
ಆದರೆ ತಿವಾರಿಯವರಿಗೆ ಸುಪ್ರೀಂ ಕೂಡ ಹೈಕೋರ್ಟ್ ಮಾತನ್ನೇ ಪುನರುಚ್ಛರಿಸಿದೆ. ನಿಮಗೆ 85 ವರ್ಷವಾಗಿರುವುದರಿಂದ, ವ್ಯಕ್ತಿಯೊಬ್ಬರು ಹೇಳುತ್ತಿರುವಂತೆ ನೀವು ಡಿಎನ್ಎ ಪರೀಕ್ಷೆಗೆ ಶೀಘ್ರದಲ್ಲೇ ಒಳಪಡಬೇಕು. ಶುಕ್ರವಾರದೊಳಗೆ ನೀವು ಡಿಎನ್ಎಯ ಯಾವ ಪರೀಕ್ಷೆಗೆ ಸಿದ್ಧ ಎಂಬುದನ್ನು ತಿಳಿಸಬೇಕು. ಪರೀಕ್ಷೆಯ ವರದಿ ಮುಚ್ಚಿದ ಲಕೋಟೆಯಲ್ಲಿರುತ್ತದೆ ಎಂದು ಆದೇಶ ನೀಡಿದೆ.
ತಿವಾರಿ ಮತ್ತು ನನ್ನ ತಾಯಿ ಉಜ್ವಲಾ ಶರ್ಮಾ ಅವರ ಅಕ್ರಮ ಸಂಬಂಧದಿಂದ ನಾನು ಹುಟ್ಟಿದ್ದು, ಇದನ್ನು ಅಧಿಕೃತವಾಗಿ ಘೋಷಿಸಬೇಕೆಂದು ಕಾನೂನು ಪದವೀಧರರಾಗಿರುವ ರೋಹಿತ್ ಶೇಖರ್ ನ್ಯಾಯಾಲಯದ ಮೊರೆ ಹೋಗಿದ್ದರು.
ಜೊಲ್ಲು ಪರೀಕ್ಷೆ ಸಾಧ್ಯತೆ...
ರೋಹಿತ್ ಶೇಖರ್ ತಂದೆ ಯಾರು ಎಂಬುದನ್ನು ಪತ್ತೆ ಹಚ್ಚುವ ಸಲುವಾಗಿ ತಿವಾರಿಯವರು ಡಿಎನ್ಎ ಪರೀಕ್ಷೆಗೆ ಒಳಪಡುವುದು ಈಗ ಅನಿವಾರ್ಯ. ಅವರಿಗೆ ಬೇರೆ ಮಾರ್ಗವೇ ಇಲ್ಲ. ಅವರನ್ನು ಜೊಲ್ಲು ಪರೀಕ್ಷೆಗೆ ಒಳಪಡಿಸುವ ಸಾಧ್ಯತೆಗಳೇ ಹೆಚ್ಚು ಎಂದು ಹೇಳಲಾಗುತ್ತಿದೆ.
ಡಿಎನ್ಎ ಪರೀಕ್ಷೆಗೆ ತಾನು ಸಿದ್ಧನಿಲ್ಲ ಎಂಬ ತಿವಾರಿಯವರ ವಾದವನ್ನು ಖಾರವಾಗಿ ಪ್ರಶ್ನಿಸಿರುವ ನ್ಯಾಯಾಲಯವು, ನೀವು ಯಾಕೆ ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದೀರಿ? ಇದಕ್ಕಿರುವ ಒಂದೇ ಒಂದು ಕಾರಣವನ್ನು ನೀಡಿ. ಆ ಮೂಲಕ ಪ್ರಕರಣವನ್ನು ಮುಕ್ತಾಯಗೊಳಿಸಿ ಎಂದಿತು.
ಡಿಎನ್ಎ ಪರೀಕ್ಷೆಗಳು ಸಮರ್ಪಕವಲ್ಲ. ಅಲ್ಲದೆ ಅದು ತಮ್ಮ ಕಕ್ಷಿಗಾರನ ಖಾಸಗಿತನವನ್ನು ಭಂಗ ಮಾಡುತ್ತದೆ ಎಂದು ತಿವಾರಿಯವರ ವಕೀಲರು ನ್ಯಾಯಾಲಯದಲ್ಲಿ ವಾದಿಸಿದ್ದರು.
ತಿವಾರಿಯವರನ್ನು ಡಿಎನ್ಎ ಪರೀಕ್ಷೆಗೆ ಒಳಪಡಿಸುವುದು ಖಚಿತ. ಆದರೆ ಇಲ್ಲಿ ಜೊಲ್ಲನ್ನು ಪರೀಕ್ಷೆಗೊಳಪಡಿಸಲಾಗುತ್ತದೆಯೋ ಅಥವಾ ಕೂದಲಿನ ಕೋಶಗಳನ್ನು ಸಂಗ್ರಹಿಸಲಾಗುತ್ತದೆಯೋ ಎಂಬುದನ್ನು ನ್ಯಾಯಾಲಯವು ಶುಕ್ರವಾರ ನಿರ್ಧರಿಸಲಿದೆ.