ಮಕ್ಕಳು ನಾವು ತಿಳಿದವರಷ್ಟು ಚಿಕ್ಕವರಲ್ಲ! 11ರ ಹರೆಯದ ಪೋರನೊಬ್ಬ ಗೃಹ ದೌರ್ಜನ್ಯ ಕಾಯ್ದೆಯ "ಪರಿಪೂರ್ಣ" ಲಾಭ ಪಡೆದುಕೊಂಡು, ತಂದೆಯ ವಿರುದ್ಧವೇ ಕೇಸು ಹಾಕಿ, 18 ವರ್ಷವಾಗುವವರೆಗೂ ತನ್ನ ಶೈಕ್ಷಣಿಕ ಮತ್ತು ದೈನಂದಿನ ಖರ್ಚು ವೆಚ್ಚಗಳನ್ನು ನೋಡಿಕೊಳ್ಳಲೇಬೇಕೆಂದು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾನೆ.
ಈ ಕುರಿತು ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟರಾದ ಉಮೇಶಚಂದ್ರ ಮೋರೆ ಅವರು ಆದೇಶವೊಂದನ್ನು ನೀಡಿದ್ದು, ಬಾಲಕನ ತಂದೆಯು ಮಗನಿಗೆ 18 ವರ್ಷ ತುಂಬುವವರೆಗೂ ಅವನ ಶೈಕ್ಷಣಿಕ ಖರ್ಚು ವೆಚ್ಚಗಳಲ್ಲದೆ, ದೈನಂದಿನ ಖರ್ಚು ವೆಚ್ಚಗಳನ್ನೂ ಪಾವತಿಸಬೇಕು ಎಂದಿದ್ದಾರೆ. ಇದಕ್ಕಾಗಿ ಅವರು ಪ್ರತಿ ವರ್ಷ 12 ಸಾವಿರ ರೂಪಾಯಿಗಳನ್ನು ಬಾಲಕನ ಹೆಸರಿನ ಬ್ಯಾಂಕ್ ಖಾತೆಯಲ್ಲಿ ಠೇವಣಿ ಇಡಬೇಕು. ಜುಲೈ 5ರೊಳಗೆ ಇದು ಆರಂಭವಾಗಬೇಕು. ಈ ಹಣವು ಬಾಲಕನ ದೈನಂದಿನ ಖರ್ಚಿಗಾಗಿ. ಶಾಲಾ ಫೀಸು, ಪಠ್ಯ ಪುಸ್ತಕ, ಶಾಲಾ ಬಸ್, ಸಮವಸ್ತ್ರ ಮುಂತಾದ ಶೈಕ್ಷಣಿಕ ಖರ್ಚಿಗಾಗಿ ಹಣವನ್ನು ನೇರವಾಗಿ ಶಾಲೆಗೆ ಪಾವತಿಸಲು ಬಾಲಕನ ತಂದೆ ಒಪ್ಪಿದ್ದಾರೆ. 2010-11ರ ಶೈಕ್ಷಣಿಕ ವರ್ಷದಲ್ಲಿ ಈ ವೆಚ್ಚವೇ 23,800 ರೂಪಾಯಿಗಳಷ್ಟಾಗುತ್ತದೆ.
ಇಷ್ಟು ಮಾತ್ರವೇ ಅಲ್ಲ, ಈ ಬಾಲಕ 10 ಮತ್ತು 12ನೇ ತರಗತಿಗೆ ತಲುಪಿದಾಗ, ಅದು ಅತ್ಯಂತ ಪ್ರಮುಖ ಶೈಕ್ಷಣಿಕ ವರ್ಷಗಳಾಗಿರುವುದರಿಂದ, ಬಾಲಕನ ಟ್ಯೂಷನ್ ಶುಲ್ಕವನ್ನು ಕೊಡುವುದಕ್ಕೂ ತಂದೆ ಒಪ್ಪಿದ್ದಾರೆ.
ವಕೀಲರು ಹೇಳುವಂತೆ, ಗೃಹ ಹಿಂಸಾಚಾರದ ವಿರುದ್ಧ ಮಹಿಳಾ ರಕ್ಷಣಾ ಕಾಯ್ದೆ-2005 ಇದು ಮಹಿಳೆಯರಿಗೆ ಮಾತ್ರ ಸೀಮಿತವಾದುದಲ್ಲ. ಕುಟುಂಬದೊಳಗೆ ಅಪ್ರಾಪ್ತರ ಮೇಲೆ ನಡೆಯುವ ದೌರ್ಜನ್ಯ ಅಥವಾ ಹಕ್ಕುಗಳ ನಿರಾಕರಣೆಯೂ ಇದರ ವ್ಯಾಪ್ತಿಯಲ್ಲಿ ಬರುತ್ತದೆ. ಇದಕ್ಕೆ ಲಿಂಗಭೇದವಿಲ್ಲ. ಸಾಮಾನ್ಯವಾಗಿ ಮಹಿಳೆಯರು ಮಾತ್ರ ಈ ಕಾಯ್ದೆಯಡಿ ಕೇಸು ದಾಖಲಿಸುತ್ತಾರೆ. ಆದರೆ, ಬಹುಶಃ ಪುರುಷ (ಹುಡುಗ) ಈ ಕಾಯ್ದೆ ಪ್ರಯೋಗಿಸಿರುವುದು ಇದೇ ಮೊದಲು ಎನ್ನತ್ತಾರೆ ಬಾಲಕನ ಪರವಾಗಿ ವಾದಿಸಿದ ವಕೀಲ ಅಸೀಂ ಸರೋಡೆ.
ಬಾಲಕನ ದೂರಿನ ಪ್ರಕಾರ, 2002ರಿಂದೀಚೆಗೆ ಆತನ ಹೆತ್ತವರ ನಡುವಿನ ಸಂಬಂಧ ಬಿಗಡಾಯಿಸಿತ್ತು. 2005ರಲ್ಲಿ ಅವರಿಬ್ಬರೂ ಕೌಟುಂಬಿಕ ನ್ಯಾಯಾಲಯದ ಮೂಲಕ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆದುಕೊಂಡರು. ಆ ಬಳಿಕ ಇಬ್ಬರೂ ಕೂಡ ಮರು-ಮದುವೆಯಾದರು. ಮಗ ಮಾತ್ರ ತಾಯಿಯ ಜತೆಯಲ್ಲೇ ಉಳಿದ. ಬಾಲಕನ ಖರ್ಚಿಗಾಗಿ ತಂದೆಯು ತಿಂಗಳಿಗೆ 500 ರೂ. ನೀಡಬೇಕು ಎಂದು ವಿಚ್ಛೇದನ ಪ್ರಕ್ರಿಯೆ ವೇಳೆ ನಿರ್ಧರಿಸಲಾಗಿತ್ತು.
ಆದರೆ, ತಂದೆಯು ಮಾಸಿಕವಾಗಿ ನಿಗದಿಪಡಿಸಿದ ಹಣ ನೀಡುವಲ್ಲಿ ನಿಯಮಿತತೆ ತೋರಲಿಲ್ಲ. ಬಾಲಕನ ಖರ್ಚಿನ ಬಗ್ಗೆ ಇಬ್ಬರು ಪೋಷಕರಲ್ಲೂ ಮತ್ತೆ ತಗಾದೆಯೆದ್ದಿತು. ಹೀಗಾಗಿ ಅವರು ಮತ್ತೆ ಕೋರ್ಟಿಗೆ ಹೋದರು. ತಾಯಿಯ ಮೂಲಕ ಈ ಬಾಲಕ ಕೋರ್ಟಿನಲ್ಲಿ ದಾವೆ ದಾಖಲಿಸಿದ್ದ. ಆರಂಭದಲ್ಲಿ ಆರೋಪಗಳನ್ನು ನಿರಾಕರಿಸಿದ ತಂದೆಯು, ಇದೀಗ ಮಗನ ಶೈಕ್ಷಣಿಕ ವೆಚ್ಚವೆಲ್ಲವನ್ನೂ ಭರಿಸಲು ಒಪ್ಪಿಕೊಂಡಿದ್ದಾರೆ. ಈ ಕಾಯ್ದೆಯು 18 ವರ್ಷದೊಳಗಿನ ದತ್ತು ಮಕ್ಕಳಿಗೆ ಅಥವಾ ಮಲಮಕ್ಕಳಿಗೂ ಅನ್ವಯಿಸುತ್ತದೆ.