Select Your Language

Notifications

webdunia
webdunia
webdunia
webdunia

ಪದ್ಮ ವಿಭೂಷಣ ಗೌರವ ಬೇಡವೆಂದ ಗಾಂಧಿವಾದಿ ಕುಟುಂಬ

ಗಾಂಧಿವಾದಿ
ನವದೆಹಲಿ , ಶುಕ್ರವಾರ, 25 ಮಾರ್ಚ್ 2011 (13:33 IST)
ಸಂತಾ ಸಿಂಗ್ ಛತ್ವಾಲ್ ಅವರಂತಹ ಕಳಂಕಿತರಿಗೆ ರಾಷ್ಟ್ರದ ಅತ್ಯುನ್ನತ ಗೌರವಗಳು ಸಲ್ಲುತ್ತಿರುವ ಮಧ್ಯೆಯೂ ಸ್ವಾತಂತ್ರ್ಯ ಹೋರಾಟಗಾರ, ಗಾಂಧಿವಾದಿ ಎಲ್.ಸಿ. ಜೈನ್ ಅವರಿಗೆ ಮರಣೋತ್ತರವಾಗಿ ಪ್ರಕಟಿಸಲಾಗಿದ್ದ ಪದ್ಮ ವಿಭೂಷಣ ಗೌರವವನ್ನು ಅವರ ಕುಟುಂಬ ತಿರಸ್ಕರಿಸಿರುವ ಸುದ್ದಿ ಬಂದಿದೆ.

ರಾಷ್ಟ್ರದ ಎರಡನೇ ಅತ್ಯುನ್ನತ ಗೌರವವನ್ನು ಜೈನ್ ಅವರ ಕುಟುಂಬ ನಿರಾಕರಿಸಿದೆ ಎಂದು ಜೈನ್ ಕುಟುಂಬದ ಮೂಲಗಳು ಖಚಿತಪಡಿಸಿವೆ.

13-12-1925ರಂದು ರಾಜಸ್ಥಾನದಲ್ಲಿ ಜನಿಸಿದ್ದ ಲಕ್ಷ್ಮಿ ಚಂದ್ ಜೈನ್ ಎಲ್.ಸಿ. ಜೈನ್ ಎಂದೇ ಪ್ರಸಿದ್ಧರಾಗಿದ್ದವರು. ಸ್ವಾತಂತ್ರ್ಯ ಹೋರಾಟಗಾರನಾಗಿ, ಗಾಂಧಿವಾದಿಯಾಗಿ ಗುರುತಿಸಿಕೊಂಡಿದ್ದ ಅವರು ಈ ಹಿಂದೆ ಮ್ಯಾಗ್ಸಸೇ ಪ್ರಶಸ್ತಿಗೆ ಪುರಸ್ಕೃತರಾಗಿದ್ದರು.

ಆದರೆ ಕೇಂದ್ರ ಸರಕಾರ ನೀಡುವ ಪದ್ಮ ವಿಭೂಷಣವನ್ನು ಅವರ ಕುಟುಂಬ ತಿರಸ್ಕರಿಸಿದೆ. ಮೂಲಗಳ ಪ್ರಕಾರ, ಜೈನ್ ಅವರು ರಾಷ್ಟ್ರ ಗೌರವಗಳನ್ನು ವಿರೋಧಿಸುತ್ತಿದ್ದುದರಿಂದ ಕುಟುಂಬವು ಈ ನಿರ್ಧಾರಕ್ಕೆ ಬಂದಿದೆ.

ರಾಷ್ಟ್ರಪತಿ ಪ್ರತಿಭಾ ದೇವಿ ಸಿಂಗ್ ಪಾಟೀಲ್ ಅವರು ಗುರುವಾರ ಸಂಜೆ ರಾಷ್ಟ್ರಪತಿ ಭವನದಲ್ಲಿ 61 ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಉಳಿದ 66 ಪುರಸ್ಕೃತರಿಗೆ ಏಪ್ರಿಲ್ 1ರಂದು ಇನ್ನೊಂದು ಕಾರ್ಯಕ್ರಮದಲ್ಲಿ ಗೌರವಗಳನ್ನು ಪ್ರದಾನ ಮಾಡಲಾಗುತ್ತದೆ ಎಂದು ರಾಷ್ಟ್ರಪತಿ ಭವನದ ಮೂಲಗಳು ಹೇಳಿವೆ.

ನಿನ್ನೆಯ ಕಾರ್ಯಕ್ರಮದಲ್ಲಿ ಜೈನ್ ಕುಟುಂಬವು ಪಾಲ್ಗೊಂಡಿರಲಿಲ್ಲ. ಅಲ್ಲದೆ, 2010ರ ನವೆಂಬರ್ 14ರಂದು ಇಹಲೋಕ ತ್ಯಜಿಸಿದ್ದ ಜೈನ್ ಪರವಾಗಿ ಪದ್ಮ ವಿಭೂಷಣ ಸ್ವೀಕರಿಸಲು ಹಲವು ಸರಕಾರೇತರ ಸಂಸ್ಥೆಗಳೂ ವಿರೋಧ ವ್ಯಕ್ತಪಡಿಸಿದ್ದವು.

Share this Story:

Follow Webdunia kannada