Select Your Language

Notifications

webdunia
webdunia
webdunia
webdunia

ನಾಣ್ಯ ಕರಗಿಸಿದ್ರೆ ಏಳು ವರ್ಷ ಜೈಲು; ಹೊಸ ಕಾನೂನು

ನಾಣ್ಯ
ನವದೆಹಲಿ , ಶುಕ್ರವಾರ, 25 ಮಾರ್ಚ್ 2011 (18:07 IST)
ಚಲಾವಣೆಯಲ್ಲಿರುವ ನಾಣ್ಯಗಳನ್ನು ಕರಗಿಸುವುದು ಅಥವಾ ನಾಶ ಮಾಡುವುದನ್ನು ಉದ್ಯೋಗವನ್ನಾಗಿಸಿಕೊಂಡಿರುವ ಅಥವಾ ರೂಢಿ ಮಾಡಿಕೊಂಡವರಿಗೆ ಕಠಿಣ ಶಿಕ್ಷೆ ಕಾದಿದೆ. ಇನ್ನು ಮುಂದೆ ಇಂತಹ ತಪ್ಪು ಮಾಡಿರುವುದು ಸಾಬೀತಾದಲ್ಲಿ ಅಂತವರು ಏಳು ವರ್ಷಗಳವರೆಗೆ ಜೈಲಿನಲ್ಲಿರಬೇಕಾಗುತ್ತದೆ.

ಇದಕ್ಕೆ ಸಂಬಂಧಪಟ್ಟ 'ನಾಣ್ಯ ಮಸೂದೆ'ಯನ್ನು ಲೋಕಸಭೆಯು ಶುಕ್ರವಾರ ಅಂಗೀಕರಿಸಿದೆ. 2009ರಲ್ಲಿ ಸದನದಲ್ಲಿ ಮಂಡಿಸಲ್ಪಟ್ಟಿದ್ದ ಈ ಕಾಯ್ದೆಗೆ ಚರ್ಚೆ ನಡೆಯದೆ ಇಂದು ಅಂಗೀಕಾರ ದೊರಕಿತು. ಹಣಕಾಸು ಸಚಿವ ಪ್ರಣಬ್ ಮುಖರ್ಜಿಯವರಿಂದ ಇದು ಮಂಡಿಸಲ್ಪಟ್ಟಿತು.

1906ರ ಭಾರತೀಯ ನಾಣ್ಯ ಕಾಯ್ದೆ, 1971ರ ಸಣ್ಣ ನಾಣ್ಯಗಳ (ಅಪರಾಧಗಳು) ಕಾಯ್ದೆ, 1889ರ ಲೋಹದ ಟೋಕನ್ ಕಾಯ್ದೆ, 1918ರ ಕಂಚಿನ ನಾಣ್ಯ ಕಾಯ್ದೆ ಕಾನೂನುಗಳ ವಿಸ್ತೃತ ಪಟ್ಟಿಗೆ ಈ ಹೊಸ ಕಾನೂನು ಸೇರ್ಪಡೆಗೊಂಡಿದೆ.

ನಾಣ್ಯಗಳನ್ನು ನಾಶ ಮಾಡುವುದು ಅಥವಾ ರೂಪಗೆಡಿಸುವುದು ಅಥವಾ ಕರಗಿಸುವವರಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಬೇಕು ಎಂದು ವಿತ್ತ ಸಚಿವಾಲಯದ ಸಂಸದೀಯ ಸ್ಥಾಯಿ ಸಮಿತಿ ಶಿಫಾರಸು ಮಾಡಿತ್ತು. ಆದರೆ ಇದನ್ನು ಏಳು ವರ್ಷಗಳಿಗೆ ಕೇಂದ್ರ ಸಂಪುಟವು ಇಳಿಕೆ ಮಾಡಿತ್ತು.

ಎರಡು ವಾರಗಳ ಹಿಂದಷ್ಟೇ ಇದನ್ನು ಸಂಪುಟದಲ್ಲಿ ಮಂಡಿಸಲಾಗಿತ್ತು. ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಮುಖರ್ಜಿ ಮಸೂದೆಯನ್ನು ಮಂಡಿಸಿದ್ದರು.

ಬೆಳ್ಳಿ, ನಿಕಲ್ ಉಕ್ಕು, ತಾಮ್ರ ಅಥವಾ ಕಂಚಿನಿಂದ ತಯಾರಿಸಿದ ನಾಣ್ಯಗಳು ಚಲಾವಣೆಯಲ್ಲಿ ಇಲ್ಲದೇ ಇರುವ ಕಾರಣ, ಇತರ ಲೋಹಗಳು ಅಥವಾ ಮಿಶ್ರಣಗೊಂಡ ಲೋಹಗಳ ನಾಣ್ಯಗಳನ್ನು ಕಾನೂನು ವ್ಯಾಪ್ತಿಗೊಳಪಡಿಸಲು ಕಾನೂನು ಜಾರಿಗೆ ತರುವ ನಿರ್ಧಾರಕ್ಕೆ ಬರಲಾಗಿತ್ತು.

25 ಪೈಸೆ ಮತ್ತು ಅದಕ್ಕಿಂತ ಕಡಿಮೆ ಮೌಲ್ಯದ ನಾಣ್ಯಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಿಷೇಧ ಮಾಡಿದ್ದು, ಇದನ್ನು ಜೂನ್ 30ರಿಂದ ಸಂಗ್ರಹಿಸುವ ಕಾರ್ಯ ನಡೆಯಲಿದೆ. ಪ್ರಸಕ್ತ 50 ಪೈಸೆ, 1, 2, 5 ಮತ್ತು 10 ರೂಪಾಯಿಗಳ ನಾಣ್ಯಗಳು ಚಲಾವಣೆಯಲ್ಲಿವೆ.

Share this Story:

Follow Webdunia kannada