Select Your Language

Notifications

webdunia
webdunia
webdunia
webdunia

ನನ್ನ ವಜಾ ತೀರ್ಪು ಮರು ಪರಿಶೀಲಿಸಿ; ಥಾಮಸ್ ಮೊಂಡುತನ

ಪಿಜೆ ಥಾಮಸ್
ನವದೆಹಲಿ , ಶನಿವಾರ, 12 ಮಾರ್ಚ್ 2011 (18:31 IST)
ಕೇಂದ್ರ ಜಾಗೃತ ಆಯುಕ್ತ (ಸಿವಿಸಿ) ಸ್ಥಾನದಿಂದ ವಜಾಗೊಳಿಸಿರುವ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಒಪ್ಪಿಕೊಳ್ಳಲು ನಿರಾಕರಿಸಿರುವ ಕಳಂಕಿತ ಸಿವಿಸಿ ಪಿ.ಜೆ. ಥಾಮಸ್, ಅದನ್ನು ಮರು ಪರಿಶೀಲನೆ ನಡೆಸಲು ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ. ಈ ವಿಚಾರವನ್ನು ಥಾಮಸ್ ವಕೀಲರು ಖಚಿತಪಡಿಸಿದ್ದಾರೆ.

ಸಿವಿಸಿ ನೇಮಕಾತಿಯನ್ನು ರದ್ದುಪಡಿಸಿರುವ ಸುಪ್ರೀಂ ಕೋರ್ಟ್ ತೀರ್ಪನ್ನು ಮರು ಪರಿಶೀಲನೆ ನಡೆಸುವಂತೆ ಥಾಮಸ್ ಮನವಿ ಸಲ್ಲಿಸಲಿದ್ದಾರೆ. ಮುಂದಿನ ವಾರ ಅವರು ಈ ಕ್ರಮಕ್ಕೆ ಮುಂದಾಗಲಿದ್ದಾರೆ ಎಂದು ಅವರ ವಕೀಲರು ತಿಳಿಸಿದ್ದಾರೆ.

ಉನ್ನತ ತನಿಖಾ ಸಂಸ್ಥೆ ಸಿವಿಸಿ ನೇಮಕಾತಿ ಕ್ರಮಬದ್ಧವಾಗಿ ನಡೆದಿಲ್ಲ ಎಂದು ಹೇಳಿದ್ದ ಸುಪ್ರೀಂ ಕೋರ್ಟ್, ಥಾಮಸ್ ನೇಮಕಾತಿಯನ್ನು ರದ್ದುಗೊಳಿಸಿತ್ತು. ಈ ಸಂಬಂಧ ನಡೆದಿರುವ ತಪ್ಪನ್ನು ಒಪ್ಪಿಕೊಂಡಿದ್ದ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್, ಸ್ವತಃ ಸಂಸತ್ತಿನಲ್ಲಿ ಹೇಳಿಕೆ ನೀಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದರು.

ಭ್ರಷ್ಟಾಚಾರ ವಿರುದ್ಧ ಹೋರಾಡುವ ಜಾಗೃತ ದಳಕ್ಕೆ ಕೇರಳದ ಪಾಮೋಲಿನ್ ಆಮದು ಪ್ರಕರಣಕ್ಕೆ ಸಂಬಂಧಿಸಿದಂತೆ ಕಳಂಕಿತರಾಗಿದ್ದ ಮತ್ತು ಚಾರ್ಜ್ ಶೀಟ್ ದಾಖಲು ಮಾಡಲ್ಪಟ್ಟಿರುವ ಥಾಮಸ್ ಅವರನ್ನು ನೇಮಿಸಿರುವುದು ಅಸಿಂಧು ಮತ್ತು ಕಾನೂನು ಬಾಹಿರ ಎಂದು ಹೇಳಿದ್ದ ಸುಪ್ರೀಂ, 2010ರ ಸೆಪ್ಟೆಂಬರ್ 3ರಂದು ಹೊರಡಿಸಲಾದ ಆದೇಶವನ್ನೇ ರದ್ದು ಮಾಡಿತ್ತು.

ಅಲ್ಲದೆ, ಭವಿಷ್ಯದಲ್ಲಿ ಇಂತಹ ಹುದ್ದೆಗಳಿಗೆ ನೇಮಕಾತಿ ಮಾಡುವಾಗ ಕಠಿಣ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸುವಂತೆಯೂ ಆದೇಶಿಸಿತ್ತು. ನ್ಯಾಯಾಲಯವು ತೀಕ್ಷ್ಣ ಶಬ್ದಗಳಲ್ಲಿ ಕೇಂದ್ರದ ಈ ನೇಮಕಾತಿ ನಿರ್ಧಾರವನ್ನು ಟೀಕಿಸಿತ್ತು. ಸಹಜವಾಗಿಯೇ ಪ್ರಧಾನಿ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ತೀವ್ರ ಮುಜುಗರಕ್ಕೊಳಗಾಗಿದ್ದರು.

ಸಿವಿಸಿ ನೇಮಕಾತಿ ಸಮಿತಿಯಲ್ಲಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್, ಗೃಹಸಚಿವ ಪಿ. ಚಿದಂಬರಂ ಮತ್ತು ಲೋಕಸಭೆಯ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರಿದ್ದರು. ನೇಮಕಾತಿಯನ್ನು ಸುಷ್ಮಾ ವಿರೋಧಿಸಿದ್ದರೂ, ಬಹುಮತ ಸರಕಾರದ ಪರವಿದ್ದ ಕಾರಣ ಅವರ ಆಕ್ಷೇಪವನ್ನು ನಿರ್ಲಕ್ಷ್ಯ ಮಾಡಲಾಗಿತ್ತು. ಇದು ಭಾರೀ ಟೀಕೆಗೂ ಕಾರಣವಾಗಿತ್ತು.

Share this Story:

Follow Webdunia kannada