Select Your Language

Notifications

webdunia
webdunia
webdunia
webdunia

ದೇಹ ಸುಖ ಕೊಡದ ಪತ್ನಿಗೆ ವಿಚ್ಛೇದನ: ಹೈಕೋರ್ಟ್ ಅಸ್ತು

ಸೆಕ್ಸ್ ನಿರಾಕರಣೆ
ನವದೆಹಲಿ , ಶನಿವಾರ, 26 ಮಾರ್ಚ್ 2011 (13:37 IST)
ವೈವಾಹಿಕ ಬದ್ಧತೆಗಳಲ್ಲಿ ಒಂದಾಗಿರುವ ದೈಹಿಕ ಸುಖವನ್ನು ಗಂಡನಿಗೆ ನೀಡಲು ನಿರಾಕರಿಸಿರುವ ಆಧಾರದ ಮೇಲೆ ವಿವಾಹ ವಿಚ್ಛೇದನ ಕೊಡಬೇಕು ಎಂಬ ಗಂಡನೊಬ್ಬನ ವಾದವನ್ನು ದೆಹಲಿ ಉಚ್ಚ ನ್ಯಾಯಾಲಯ ಪುರಸ್ಕರಿಸಿದೆ.

ರಮೇಶ್ (ಹೆಸರು ಬದಲಾವಣೆ ಮಾಡಲಾಗಿದೆ) ಎಂಬ ಗಂಡ ತನ್ನ ಪತ್ನಿ ಸ್ಮಿತಾ (ಹೆಸರು ಬದಲಾವಣೆ ಮಾಡಲಾಗಿದೆ) ಎಂಬಾಕೆಯಿಂದ ವಿಚ್ಛೇದನ ಕೊಡಬೇಕು ಎಂದು ಪ್ರಕರಣ ದಾಖಲಿಸಿದ್ದರು. ವಾದ ಆಲಿಸಿದ ನ್ಯಾಯಮೂರ್ತಿ ಕೈಲಾಸ್ ಗಂಭೀರ್, ಪತ್ನಿಯಿಂದ ವಿಚ್ಛೇದನ ಒದಗಿಸಿ ಆದೇಶ ಹೊರಡಿಸಿದರು.

ಪತ್ನಿ ಲೈಂಗಿಕ ಸುಖ ನಿರಾಕರಿಸುತ್ತಿರುವುದು ಮಾನಸಿಕ ಕ್ರೌರ್ಯ ಎಂದು ರಮೇಶ್ ವಾದಿಸಿದ್ದ ಹೊರತಾಗಿಯೂ, ಈ ಆಧಾರದಲ್ಲಿ ವಿವಾಹ ವಿಚ್ಛೇದನಕ್ಕೆ ಆಧೀನ ನ್ಯಾಯಾಲಯ ನಿರಾಕರಿಸಿತ್ತು. ಇದನ್ನು ದೆಹಲಿ ಹೈಕೋರ್ಟಿನಲ್ಲಿ ರಮೇಶ್ ಪ್ರಶ್ನಿಸಿದ್ದರು.

ಮದುವೆಯಾಗಿತ್ತು, ಮಕ್ಕಳಾಗಿರಲಿಲ್ಲ...
ರಮೇಶ್ ಮತ್ತು ಸ್ಮಿತಾ 1990ರಲ್ಲಿ ಮದುವೆಯಾಗಿದ್ದರು. ಆದರೆ ಈ ಸಂಬಂಧದಿಂದ ಮಕ್ಕಳು ಹುಟ್ಟಿರಲಿಲ್ಲ. ವಾಸ್ತವದಲ್ಲಿ ರಮೇಶ್ ಜತೆ ದೈಹಿಕ ಸಂಪರ್ಕಕ್ಕೆ ಸ್ಮಿತಾ ಒಪ್ಪುತ್ತಿರಲಿಲ್ಲ. ಇದರಿಂದಾಗಿ ಮದುವೆಯಾದ ಆರಂಭದಿಂದಲೇ ರಮೇಶ್ ಚಿತ್ರಹಿಂಸೆ ಅನುಭವಿಸಿದರು. ವೈವಾಹಿಕ ಜವಾಬ್ದಾರಿಯನ್ನು ಆಕೆ ನಿರ್ವಹಿಸಲು ನಿರಾಕರಿಸುತ್ತಳೇ ಬಂದಳು.

ನಂತರ 2005ರಲ್ಲಿ ರಮೇಶ್‌ರನ್ನು ತೊರೆದ ಸ್ಮಿತಾ, ನಂತರ ವಾಪಸ್ ಬರಲೇ ಇಲ್ಲ. ಇದನ್ನೇ ಮುಂದಿಟ್ಟುಕೊಂಡ ರಮೇಶ್ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರು. ಲೈಂಗಿಕ ಸುಖ ನಿರಾಕರಿಸುವ ಮೂಲಕ ವೈವಾಹಿಕ ಕರ್ತವ್ಯ ನೆರವೇರಿಸದೇ ಇರುವುದು ಮತ್ತು ತನ್ನನ್ನು ತೊರೆದಿರುವುದನ್ನು ಆಧಾರವಾಗಿಟ್ಟುಕೊಂಡು ಬೇರೆಯಾಗಲು ಅನುಮತಿ ನೀಡಬೇಕು ಎಂದು ಪ್ರಕರಣ ದಾಖಲಿಸಿದ್ದರು.

ರಮೇಶ್ ವಾದ ಕೆಳಗಿನ ನ್ಯಾಯಾಲಯದಲ್ಲಿ ತಿರಸ್ಕೃತಗೊಂಡಿತ್ತು. ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದ ಆರಂಭದಲ್ಲಿ ಪರಸ್ಪರ ಒಪ್ಪಿಗೆಯಂತೆ ವಿಚ್ಛೇದನಕ್ಕೆ ಸ್ಮಿತಾ ಒಪ್ಪಿಗೆ ಸೂಚಿಸಿದ್ದಳು. ಆದರೆ ಈ ಸಂಬಂಧ ಪ್ರಕ್ರಿಯೆಗಳಿಗೆ ನ್ಯಾಯಾಲಯಕ್ಕೆ ಬರಲು ನಂತರದ ದಿನಗಳಲ್ಲಿ ನಿರಾಕರಿಸಿದಳು.

ಕೊನೆಗೆ ವಿಚ್ಛೇದನ ಪ್ರಕರಣದ ವಿಚಾರಣೆಗೂ ನ್ಯಾಯಾಲಯಕ್ಕೆ ಸ್ಮಿತಾ ಬರಲಿಲ್ಲ. ಹಾಗಾಗಿ ರಮೇಶ್ ವಾದವನ್ನು ಎತ್ತಿ ಹಿಡಿದ ನ್ಯಾಯಾಲಯ, ವಿಚ್ಛೇದನಕ್ಕೆ ಅಸ್ತು ಎಂದಿದೆ.

'ಪತ್ನಿಗೆ ತನ್ನ ಗಂಡನ ಜತೆ ಸಹಬಾಳ್ವೆಯನ್ನು ಮತ್ತೆ ಆರಂಭಿಸಬೇಕು ಎಂಬ ಉದ್ದೇಶ ಇದ್ದಿದ್ದೇ ಆದರೆ, ಆಕೆ ಕನಿಷ್ಠ ವಿವಾಹ ವಿಚ್ಛೇದನ ಅರ್ಜಿಯ ವಿರುದ್ಧ ಮನವಿ ಮಾಡುತ್ತಿದ್ದಳು. ಆದರೆ ಆಕೆ ಇದಕ್ಕೆ ಪೂರಕವಾಗಿ ವರ್ತಿಸಿಲ್ಲ. ಮರು ಬಾಳ್ವೆ ನಡೆಸುವುದು ಶಾಶ್ವತವಾಗಿ ಕೊನೆಗೊಂಡಿದೆ ಎಂಬುದಕ್ಕೆ ಸಾಕಷ್ಟು ಆಧಾರಗಳು ಆಕೆಯ ವರ್ತನೆಯಿಂದಲೇ ಲಭಿಸಿದೆ' ಎಂದು ನ್ಯಾಯಮೂರ್ತಿ ತನ್ನ ಆದೇಶದಲ್ಲಿ ತಿಳಿಸಿದ್ದಾರೆ.

Share this Story:

Follow Webdunia kannada