ಪುರಾತನ ದೇಗುಲಕ್ಕೆ ಹಾನಿಯಾಗುತ್ತಿದೆ ಎಂಬ ಭಾರತೀಯ ಪುರಾತತ್ವ ಮತ್ತು ಸರ್ವೇಕ್ಷಣಾ ಇಲಾಖೆಯು ನೀಡಿದ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ಸರ್ವೋಚ್ಚ ನ್ಯಾಯಾಲಯವು, ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿನ ಎಂಟು ಗಣಿಗಳನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಆದೇಶ ನೀಡಿದೆ.
ಗಣಿಗಾರಿಕೆ ನಡೆಸುತ್ತಿರುವುದರಿಂದ ಪಕ್ಕದಲ್ಲಿನ ಪುರಾತನ ಜಂಬುನಾಥೇಶ್ವರ ದೇಗುಲಕ್ಕೆ ಹಾನಿಯಾಗುತ್ತಿದೆ ಎಂದು ಬಳ್ಳಾರಿ ನಿವಾಸಿ ಎ. ಗುರುಪ್ರಸಾದ್ ರಾವ್ ಆರೋಪಿಸಿದ್ದರು. ಅವರ ವಾದವನ್ನು ಕರ್ನಾಟಕ ಹೈಕೋರ್ಟ್ ತಳ್ಳಿ ಹಾಕಿತ್ತು. ಆದರೆ ಸುಪ್ರೀಂ ಕೋರ್ಟ್ ಅರ್ಜಿದಾರರ ವಾದವನ್ನು ಎತ್ತಿ ಹಿಡಿದಿದೆ.
ನ್ಯಾಯಮೂರ್ತಿ ಜಿ.ಎಸ್. ಸಿಂಘ್ವಿ ಮತ್ತು ಎ.ಕೆ. ಗಂಗೂಲಿ ಅವರನ್ನೊಳಗೊಂಡ ಪೀಠವು ಈ ತೀರ್ಪು ನೀಡಿದೆ. ಭಾರತೀಯ ಪುರಾತತ್ವ ಮತ್ತು ಸರ್ವೇಕ್ಷಣಾ ಇಲಾಖೆಯ ವರದಿಯನ್ನು ಪಡೆದ ನಂತರ ಸುಪ್ರೀಂ ಕೋರ್ಟ್ ಈ ಮಹತ್ವದ ನಿರ್ಧಾರಕ್ಕೆ ಬಂದಿದೆ. ದೇಗುಲದ ಸುತ್ತ ಇರುವ ಎಲ್ಲಾ ಎಂಟು ಗಣಿಗಳಲ್ಲಿ ತಕ್ಷಣದಿಂದಲೇ ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಆದೇಶ ನೀಡಿದೆ.
ಪ್ರಾಚೀನ ಜಂಬುನಾಥೇಶ್ವರ ದೇವಸ್ಥಾನವನ್ನು ಗಣಿಗಾರಿಕೆಯಿಂದ ಆಗುವ ಹಾನಿಯಿಂದ ರಕ್ಷಿಸಬೇಕು ಎಂಬ ಅರ್ಜಿದಾರರ ಮೇಲ್ಮನವಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿದ್ದ ಸುಪ್ರೀಂ ಕೋರ್ಟ್, 2010ರಲ್ಲಿ ಕರ್ನಾಟಕ ರಾಜ್ಯ ಸರಕಾರ, ಕೇಂದ್ರ ಸರಕಾರ ಮತ್ತು ಆರ್ಪೀ ಐರನ್ ಓರ್ ಮೈನ್ಸ್ ಕಂಪನಿಗೆ (Aarpee Iron Ore Mines) ನೋಟಿಸ್ ಜಾರಿಗೊಳಿಸಿತ್ತು.
ಹೊಸಪೇಟೆ-ಬಳ್ಳಾರಿ ರಸ್ತೆಯಲ್ಲಿ ಸಿಗುವ ಜಂಬುನಾಥ ಬೆಟ್ಟದ ಸುಮಾರು 500 ವರ್ಷ ಹಳೆಯದಾದ ಜಂಬುನಾಥ ಸ್ವಾಮಿ ದೇಗುಲದ ಸುತ್ತ ಸ್ಫೋಟಕಗಳನ್ನು ಸಿಡಿಸಿ ಗಣಿಗಾರಿಕೆ ನಡೆಸುವುದರಿಂದ ದೇವಸ್ಥಾನದ ಗೋಡೆ ಮತ್ತು ಇಡೀ ಕಟ್ಟಡ ಹಾನಿಯಾಗುತ್ತಿದೆ.
ಕ್ರಿ.ಶ.1540ರ ಆಸುಪಾಸಿನಲ್ಲಿ ಕಟ್ಟಿರಬಹುದಾದ ದೇಗುಲ ಮತ್ತು ಪ್ರಾಚೀನ ಸ್ಮಾರಕ ಎಂದು ರಾಜ್ಯ ಸರಕಾರ ಘೋಷಿಸಿತ್ತು. ಅದರ ಪ್ರಕಾರ ಯಾವುದೇ ಸ್ಮಾರಕದ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸಬಾರದು. ಇದನ್ನು ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ಗುರುಪ್ರಸಾದ್ ಆರೋಪಿಸಿದ್ದರು.
ಗಣಿಗಾರಿಕಾ ಕಂಪನಿಯು ದೇಗುಲದ 200 ಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸುತ್ತಿದೆ. ಇದರಿಂದ ದೇಗುಲದ ಪ್ರಾಚೀನತೆ ನಶಿಸುತ್ತಿದೆ. ಆವರಣದಲ್ಲಿನ ಪವಿತ್ರ ಕೆರೆ ಸಂಪೂರ್ಣವಾಗಿ ಮಲಿನವಾಗಿದೆ. ಗಣಿಗಾರಿಕೆ ನಿಲ್ಲಿಸದೇ ಇದ್ದರೆ, ಇಡೀ ದೇವಸ್ಥಾನ ನಾಶವಾಗುತ್ತದೆ. ಅದನ್ನು ಮತ್ತೆ ಸರಿಪಡಿಸಲು ಸಾಧ್ಯವಿಲ್ಲ ಎನ್ನುವುದು ಅರ್ಜಿದಾರರ ವಾದವಾಗಿತ್ತು.