Select Your Language

Notifications

webdunia
webdunia
webdunia
webdunia

ದಾವೂದ್ ಇಬ್ರಾಹಿಂನಿಂದ ಸಿಬಿಐ ಕಚೇರಿಗೆ ದಾಳಿ ಬೆದರಿಕೆ?

ಸಿಬಿಐ
ನವದೆಹಲಿ , ಬುಧವಾರ, 23 ಮಾರ್ಚ್ 2011 (13:01 IST)
2ಜಿ ತರಂಗಾಂತರ ಹಂಚಿಕೆ ಹಗರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಹಗರಣದಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾತ್ರವಿದೆ ಎಂಬ ಸುಳಿವಿನ ಹಿನ್ನೆಲೆಯಲ್ಲಿ ತನಿಖೆಗೆ ಮುಂದಾಗಿರುವ ಸಿಬಿಐ ಸ್ವತಃ ಈಗ ಬೆದರಿಕೆ ಎದುರಿಸುತ್ತಿದೆ. ಸಿಬಿಐ ಪ್ರಧಾನ ಕಚೇರಿ ಮೇಲೆ ದಾವೂದ್ ದಾಳಿ ಮಾಡಿಸಲಿದ್ದಾನೆ ಎಂಬ ಮಾಹಿತಿಗಳು ಬಂದಿವೆ.

2ಜಿ ಹಗರಣಕ್ಕೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ನಾಶ ಮಾಡುವ ಯತ್ನದ ಅಂಗವಾಗಿ ದೆಹಲಿಯಲ್ಲಿನ ಸಿಬಿಐ ಕಚೇರಿಯ ಮೇಲೆ ದಾವೂದ್ ಇಬ್ರಾಹಿಂನ ಕುಖ್ಯಾತ 'ಡಿ-ಕಂಪನಿ' ದಾಳಿ ನಡೆಸಲು ಯೋಜನೆ ರೂಪಿಸುತ್ತಿದೆ ಎಂಬ ಮಾಹಿತಿ ಮುಂಬೈಯಲ್ಲಿನ ಸಿಬಿಐ ಅಧಿಕಾರಿಗಳಿಗೆ ಸಿಕ್ಕಿದೆ. ತಕ್ಷಣವೇ ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ಇದನ್ನು ಮುಟ್ಟಿಸಲಾಗಿದೆ.

ಬೆದರಿಕೆ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿನ ಸಿಬಿಐ ಕಚೇರಿಗೆ ಭಾರೀ ಭದ್ರತೆ ಒದಗಿಸಲಾಗಿದೆ. 2ಜಿ ಹಗರಣಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಇಡಲಾಗಿರುವ ಕಟ್ಟಡಕ್ಕೆ ಸರ್ಪಗಾವಲು ಹಾಕಲಾಗಿದೆ. ಬೆದರಿಕೆ ಇರುವ ಬಗ್ಗೆ ಗೃಹ ಸಚಿವಾಲಯ ಮತ್ತು ರಾಷ್ಟ್ರೀಯ ತನಿಖಾ ದಳಕ್ಕೂ ಮಾಹಿತಿ ನೀಡಲಾಗಿದೆ.

ಮೂಲಗಳ ಪ್ರಕಾರ ಈ ಮಾಹಿತಿಯನ್ನು ಮುಂಬೈ ಸಿಬಿಐ ಕಚೇರಿಯು ಪ್ರಧಾನ ಕಚೇರಿಗೆ ನೀಡಿರುವುದು ಮೂರು ವಾರಗಳ ಹಿಂದೆ. ಆತನ ಡಿ-ಕಂಪನಿಯು ಸಿಬಿಐ ಪ್ರಧಾನ ಕಚೇರಿಯಲ್ಲಿನ ದಾಖಲೆಗಳ ಕೊಠಡಿಗೆ ದಾಳಿ ಮಾಡಬಹುದು ಎಂದು ಈ ಮಾಹಿತಿ ಹೇಳಿತ್ತು.

ಗುಪ್ತಚರ ಇಲಾಖೆಗಳ ಪ್ರಕಾರ ದಾವೂದ್ ಇಬ್ರಾಹಿಂ ಭಾರತದ ಕೆಲವು ದೂರವಾಣಿ ಕಂಪನಿಗಳ 2ಜಿ ತರಂಗಾಂತರ ಖರೀದಿಯಲ್ಲಿ ಬೇನಾಮಿ ಹೆಸರಲ್ಲಿ ಪಾಲ್ಗೊಂಡಿದ್ದಾನೆ. ಶಾಹಿದ್ ಬಲ್ವಾ ನೇತೃತ್ವದ ಸ್ವಾನ್ ಟೆಲಿಕಾಂ ಕಂಪನಿಯಲ್ಲಿ ಈತನ ಪಾಲು ಇರಬಹುದು ಎಂದು ಶಂಕಿಸಲಾಗಿದೆ.

2ಜಿ ಹಗರಣ ಸಂಬಂಧ ಫೆಬ್ರವರಿ 8ರಂದು ಶಾಹಿದ್ ಬಲ್ವಾ‌ನನ್ನು ಸಿಬಿಐ ಬಂಧಿಸಿತ್ತು. ಪ್ರಸಕ್ತ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ. ಬಲ್ವಾನಿಗೆ ದಾವೂದ್ ಲಿಂಕ್ ಇರುವ ಕುರಿತು ಸಾಕಷ್ಟು ಮಾಹಿತಿಗಳು ಸಿಕ್ಕಿವೆ. ಸಿಬಿಐ ಕಚೇರಿ ಮೇಲೆ ದಾಳಿ ಮಾಡುವ ಬೆದರಿಕೆ ಇರುವುದು ಕೂಡ ಹೌದು. ಈ ಕುರಿತು ತನಿಖೆ ನಡೆಸುತ್ತಿದ್ದೇವೆ. ಭದ್ರತೆ ಬಿಗಿಗೊಳಿಸಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಸಿಬಿಐ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.

Share this Story:

Follow Webdunia kannada