Select Your Language

Notifications

webdunia
webdunia
webdunia
webdunia

ದಾಂತೇವಾಡ: ಸ್ವಾಮಿ ಅಗ್ನಿವೇಶ್‌, ಪತ್ರಕರ್ತರಿಗೆ ಮೊಟ್ಟೆ ಏಟು

ದಾಂತೇವಾಡ
ರಾಯಪುರ , ಭಾನುವಾರ, 27 ಮಾರ್ಚ್ 2011 (14:08 IST)
PR
ಛತ್ತೀಸ್‌ಗಡದ ದಾಂತೇವಾಡ ಜಿಲ್ಲೆಯಲ್ಲಿ ಬುಡಕಟ್ಟು ಜನರ ಮನೆಗಳು ಬೆಂಕಿಗೆ ಆಹುತಿಯಾದ ದುರಂತದ ಬಗ್ಗೆ ಮಾಹಿತಿ ಸಂಗ್ರಹಿಸಲು ತೆರಳಿದ್ದ ಫಯರ್ ಬ್ರ್ಯಾಂಡ್ ಖ್ಯಾತಿಯ ಸ್ವಾಮಿ ಅಗ್ನಿವೇಶ್ ಮತ್ತು ಇತರ ಸಮಾಜ ಸೇವಾ ಕಾರ್ಯಕರ್ತರ ಮೇಲೆ ಸಲ್ವಾ ಜುಡೋಮ್ ಸಂಘಟನೆಯ ಸದಸ್ಯರು ಮೊಟ್ಟೆ ಮತ್ತು ಟೊಮ್ಯಾಟೋ ಎಸೆದ ಘಟನೆ ಶನಿವಾರ ನಡೆದಿದೆ.

ದಾಂತೇವಾಡ ಜಿಲ್ಲೆಯ ಟಾರ್ಮೆಟ್ಲಾ ಗ್ರಾಮದಲ್ಲಿನ ಸುಮಾರು 300 ಮನೆಗಳಿಗೆ ಸ್ಪೆಷಲ್ ಪೊಲೀಸ್ ಪಡೆ ಬೆಂಕಿ ಹಚ್ಚಿ ಸುಟ್ಟಿತ್ತು. ಈ ಘಟನೆಯಲ್ಲಿ ಮೂರು ಮಂದಿ ಸಾವನ್ನಪ್ಪಿದ್ದು, ಮೂರು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಲಾಗಿತ್ತು. ಸ್ಪೆಷಲ್ ಪೊಲೀಸ್ ಪಡೆ ಟಾರ್ಮೆಟ್ಲಾ, ಟಿಮಾಪುರಂ ಹಾಗೂ ಮೋರ್ಪಾಲ್ಲಿಯಲ್ಲಿ ಐದು ದಿನಗಳ ಕಾಲ ನಡೆಸಿದ ಮಾವೋ ವಿರೋಧಿ ಕಾರ್ಯಚರಣೆಯಲ್ಲಿ ಈ ದುಷ್ಕೃತ್ಯ ಎಸಗಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿತ್ತು.

ಆ ಹಿನ್ನೆಲೆಯಲ್ಲಿ ಶನಿವಾರ ಘಟನೆ ನಡೆದ ಸ್ಥಳಕ್ಕೆ ಸ್ವಾಮಿ ಅಗ್ನಿವೇಶ್ ಮತ್ತು ಅವರ ತಂಡ ಭೇಟಿ ನೀಡಿ, ಮನೆ-ಮಠ ಕಳೆದುಕೊಂಡವರಿಗೆ ಬಟ್ಟೆ, ಬ್ಲ್ಯಾಂಕೆಟ್ ಹಾಗೂ ಕೆಲವು ದಿನನಿತ್ಯದ ವಸ್ತುಗಳನ್ನು ವಿತರಿಸಿದ್ದರು. ಈ ಸಂದರ್ಭದಲ್ಲಿಯೇ ಸಲ್ವಾ ಜುಡೋಮ್ ಸಂಘಟನೆಯ ಸದಸ್ಯರು ಅಗ್ನಿವೇಶ್ ಮತ್ತು ತಂಡದ ಮೇಲೆ ಮೊಟ್ಟೆ, ಟೊಮ್ಯಾಟೋ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದರು.

ಇದಕ್ಕೂ ಮುನ್ನ ಅಗ್ನಿವೇಶ್ ಮತ್ತು ತಂಡ ಕಾರಿನಲ್ಲಿ ತೆರಳಿದ್ದ ಸಂದರ್ಭದಲ್ಲಿ ಅವರನ್ನು ದಾರಿಯಲ್ಲೇ ಅಡ್ಡಹಾಕಿದ ಸೆಲ್ವಾ ಜುಡೋಮ್ ಸಂಘಟನೆಯ ಸದಸ್ಯರು ಮೊಟ್ಟೆ, ಟೊಮ್ಯಾಟೋ ತೂರಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಸ್ವಾಮಿ ಹಾಗೂ ಪತ್ರಕರ್ತರನ್ನು ಕೂಡ ಥಳಿಸಿರುವುದಾಗಿ ಅಗ್ನಿವೇಶ್ ದೂರಿದ್ದಾರೆ.

ಅಷ್ಟೇ ಅಲ್ಲದೆ ತಾವು ಗುಡ್ಡಗಾಡು ಜನರಿಗೆ ನೀಡಿದ್ದ ಪರಿಹಾರ ವಸ್ತುಗಳನ್ನು ಎಸ್ಪಿಓ ಮತ್ತು ಸಲ್ವಾ ಜುಡೋಮ್ ಸದಸ್ಯರು ವಶಪಡಿಸಿಕೊಂಡಿರುವುದಾಗಿ ಆರೋಪಿಸಿದ್ದಾರೆ.

Share this Story:

Follow Webdunia kannada