Select Your Language

Notifications

webdunia
webdunia
webdunia
webdunia

ಥ್ಯಾಂಕ್ಸ್ ಬ್ರದರ್- ಚಿದಂಬರಂಗೆ ಪಾಕ್ ಸಚಿವ ಮಲಿಕ್

ರೆಹಮಾನ್ ಮಲಿಕ್
ನವದೆಹಲಿ , ಬುಧವಾರ, 30 ಮಾರ್ಚ್ 2011 (11:43 IST)
ನಿನ್ನೆ ದೆಹಲಿಯಲ್ಲಿ ಮುಕ್ತಾಯಗೊಂಡ ಭಾರತ ಮತ್ತು ಪಾಕಿಸ್ತಾನಗಳ ಗೃಹ ಕಾರ್ಯದರ್ಶಿಗಳ ಮಟ್ಟದ ಮಾತುಕತೆ ಸಫಲವಾಗಿರುವುದಕ್ಕೆ ಭಾರತದ ಗೃಹಸಚಿವ ಪಿ. ಚಿದಂಬರಂ ಅವರಿಗೆ ಪಾಕಿಸ್ತಾನದ ಆಂತರಿಕ ಸಚಿವ ರೆಹಮಾನ್ ಮಲಿಕ್ ವಿಶೇಷವಾಗಿ ಅಭಿನಂದನೆ ಸಲ್ಲಿಸಿದ್ದಾರೆ.

ಸಾಮಾಜಿಕ ಸಂಪರ್ಕ ತಾಣ ಟ್ವಿಟ್ಟರಿನಲ್ಲಿ ಈ ಸಂದೇಶವನ್ನು ಮಲಿಕ್ ರವಾನಿಸಿದ್ದಾರೆ. ಅದರಲ್ಲಿ ಚಿದಂಬರಂ ಅವರನ್ನು 'ಸಹೋದರ' ಎಂದೇ ಮಲಿಕ್ ನಮೂದಿಸಿ ಅಚ್ಚರಿಗೆ ಕಾರಣರಾಗಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ಗೃಹ ಕಾರ್ಯದರ್ಶಿನಗಳ ನಡುವಿನ ಮಾತುಕತೆ ಅತ್ಯುತ್ತಮವಾಗಿ ನಡೆದಿದೆ. ಉಭಯ ತಂಡಗಳಿಗೂ ನನ್ನ ಅಭಿನಂದನೆಗಳು. ಚಿದಂಬರಂ ಜತೆ ನನ್ನ ಮಾತುಕತೆಯ ನಂತರ ನಡೆದಿರುವ ಅವರ ಮೊದಲ ಸಮಾಲೋಚನೆಯಿದು. ಸಹೋದರ ಚಿದಂಬರಂ ಅವರಿಗೂ ನನ್ನ ಅಭಿನಂದನೆಗಳು ಎಂದು ತಿಳಿಸಿದ್ದಾರೆ.

ಭಾರತದ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ನೇತೃತ್ವದ ತಂಡ ಮತ್ತು ಪಾಕಿಸ್ತಾನದ ಆಂತರಿಕ ಕಾರ್ಯದರ್ಶಿ ಖಮರ್ ಜಮಾನ್ ಚೌದರಿ ನೇತೃತ್ವದ ತಂಡಗಳು ಸೋಮವಾರ ಮತ್ತು ಮಂಗಳವಾರ ಎರಡು ದಿನಗಳ ಕಾಲ ದೆಹಲಿಯಲ್ಲಿ ಮಾತುಕತೆ ನಡೆಸಿದ್ದವು. ಉಭಯ ರಾಷ್ಟ್ರಗಳ ನಡುವಿನ ವಿಶ್ವಾಸ ಕೊರತೆಯನ್ನು ನೀಗಿಸುವುದು ಮತ್ತು ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕೆ ಬದ್ಧರಾಗಿ ಉಳಿಯುವ ಕುರಿತು ಈ ಸಂದರ್ಭದಲ್ಲಿ ಚರ್ಚೆಗಳು ನಡೆದಿದ್ದವು.

ಮುಂಬೈ ದಾಳಿ ಸಂಬಂಧ ಪಾಕಿಸ್ತಾನದ ಜೈಲಿನಲ್ಲಿರುವ ಶಂಕಿತ ಭಯೋತ್ಪಾದಕರನ್ನು ವಿಚಾರಣೆ ನಡೆಸುವ ಕುರಿತು ಕೂಡ ಇದೇ ಮಾತುಕತೆ ಸಂದರ್ಭದಲ್ಲಿ ಪಾಕ್ ಅನುಮತಿ ನೀಡಿದೆ. ಹಾಗಾಗಿ ಭಾರತವು ತನ್ನ ತನಿಖಾದಳದ ಅಧಿಕಾರಿಗಳನ್ನು ಅಲ್ಲಿಗೆ ಕಳುಹಿಸಿ, ದಾಳಿಯ ಕುರಿತು ಇನ್ನಷ್ಟು ಮಾಹಿತಿಗಳನ್ನು ಸಂಗ್ರಹಿಸುವ ಅವಕಾಶ ಪಡೆದಿದೆ.

Share this Story:

Follow Webdunia kannada