Select Your Language

Notifications

webdunia
webdunia
webdunia
webdunia

ತೆಲಂಗಾಣ ಮಸೂದೆಗೆ ಆಗ್ರಹಿಸಿ ಪ್ರತಿಭಟನೆ, ಹಿಂಸಾಚಾರ

ಮಿಲಿಯನ್ ಮ್ಯಾನ್ ಮಾರ್ಚ್
ಹೈದರಾಬಾದ್ , ಗುರುವಾರ, 10 ಮಾರ್ಚ್ 2011 (16:32 IST)
ಇತ್ತೀಚಿನ ಕೈರೋ ಪ್ರತಿಭಟನೆಯನ್ನೇ ಮಾದರಿಯಾಗಿ ಪರಿಗಣಿಸಿರುವ ತೆಲಂಗಾಣ ಪರ ಹೋರಾಟಗಾರರು, ಪ್ರಸಕ್ತ ನಡೆಯುತ್ತಿರುವ ಸಂಸತ್ತಿನ ಅಧಿವೇಶನದಲ್ಲೇ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯ ಕುರಿತು ಮಸೂದೆ ಮಂಡಿಸಬೇಕು ಎಂದು ಒತ್ತಾಯಿಸಿ ನಡೆಸಿದ ಪ್ರತಿಭಟನೆ ಉಗ್ರ ಸ್ವರೂಪ ತಾಳಿರುವ ವರದಿಗಳು ಬಂದಿವೆ.

'ಹೈದರಾಬಾದ್‌ಗೆ ಮಿಲಿಯನ್ ಮಾರ್ಚ್' ಎಂಬ ಹೆಸರಿನಲ್ಲಿ ಗುರುವಾರ ನಡೆದ ಭಾರೀ ಪ್ರತಿಭಟನಾ ಮೆರವಣಿಗೆಯಲ್ಲಿ ಲಕ್ಷಾಂತರ ಮಂದಿ ತೆಲಂಗಾಣ ಪರ ಹೋರಾಟಗಾರರು ಭಾಗವಹಿಸಿದರು. ಈ ಸಂದರ್ಭದಲ್ಲಿ ಭಾರೀ ಹಿಂಸಾಚಾರಗಳು ನಡೆದವು. ಹಲವು ಕಡೆ ಬಸ್ಸುಗಳಿಗೆ ಬೆಂಕಿ ಹಚ್ಚಲಾಯಿತು ಮತ್ತು ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿ ಮಾಡಲಾಯಿತು.

ಬೆಳಗ್ಗೆಯಿಂದಲೇ ಸಂಚಾರ ನಿರ್ಬಂಧಗಳನ್ನು ಜಾರಿಗೆ ತರಲಾಗಿತ್ತು. ಇದರಿಂದಾಗಿ ಕಚೇರಿಗೆ ಮತ್ತು ಇತರ ಕಡೆ ತೆರಳುವ ಸಾರ್ವಜನಿಕರು ಭಾರೀ ತೊಂದರೆಗೀಡಾದರು. ಯೋಜನೆಯಂತೆ ಪ್ರತಿಭಟನೆ ಇಡೀ ದಿನ ನಡೆಯಬೇಕಿತ್ತು. ಆದರೆ ಶಾಲಾ ಪರೀಕ್ಷೆಗಳ ಹಿನ್ನೆಲೆಯಲ್ಲಿ ನಂತರ ಇದನ್ನು ಅಪರಾಹ್ನ ಒಂದರಿಂದ ನಾಲ್ಕು ಗಂಟೆಗೆ ಸೀಮಿತಗೊಳಿಸಲಾಯಿತು.

ಒಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಪೊಲೀಸರತ್ತ ವಿದ್ಯಾರ್ಥಿಗಳು ಕಲ್ಲು ತೂರಾಟ ನಡೆಸಿರುವುದು, ಪೊಲೀಸರು ಹಿಂಸಾಚಾರ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಆಶ್ರುವಾಯು ಸಿಡಿಸಿ ಚದುರಿಸಿರುವುದು, ಕಾಂಗ್ರೆಸ್ ಸಂಸದ ಕೇಶವ ರಾವ್, ನಿಜಾಮಾಬಾದ್ ಸಂಸದ ಮಧು ಗೌಡ್ ಯಕ್ಷಿ ಅವರ ವಾಹನಗಳ ಮೇಲೆ ದಾಳಿ ಮುಂತಾದ ಅಹಿತಕರ ಪ್ರಸಂಗಗಳು ನಡೆದಿವೆ.

ಆಂಧ್ರಪ್ರದೇಶದಿಂದ ತೆಲಂಗಾಣ ಪ್ರಾಂತ್ಯವನ್ನು ಪ್ರತ್ಯೇಕಗೊಳಿಸಿ ರಾಜ್ಯ ರಚಿಸುವ ಸಂಬಂಧ ಈಗ ನಡೆಯುತ್ತಿರುವ ಅಧಿವೇಶನದಲ್ಲೇ ಮಸೂದೆಯನ್ನು ಮಂಡಿಸಬೇಕು. ಆ ಮೂಲಕ ತಮ್ಮ ಬೇಡಿಕೆಯನ್ನು ಕೇಂದ್ರ ಈಡೇರಿಸಬೇಕು ಎಂದು ಒತ್ತಾಯಿಸಿ ನಡೆಸಲು ಉದ್ದೇಶಿಸಿದ್ದ ಪ್ರತಿಭಟನಾ ಮೆರವಣಿಗೆಗೆ ಹೈದರಾಬಾದ್ ಮತ್ತು ಸೈಬರಾಬಾದ್ ಪೊಲೀಸರು ಅವಕಾಶ ನಿರಾಕರಿಸಿದ್ದರು. ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಬಹುದು ಎಂಬ ಹಿನ್ನೆಲೆಯಲ್ಲಿ ನಿಷೇಧಾಜ್ಞೆಯನ್ನು ಕೂಡ ಹೇರಿದ್ದರು.

ಆದರೆ ಇವೆಲ್ಲವನ್ನೂ ಧಿಕ್ಕರಿಸಿದ ಪ್ರತಿಭಟನಾಕಾರರು, ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಾವಿರಾರು ಪ್ರತಿಭಟನಾಕಾರರು ಬಂಧನಕ್ಕೊಳಗಾದರು ಎಂದು ವರದಿಗಳು ಹೇಳಿವೆ.

Share this Story:

Follow Webdunia kannada