ತಮಿಳುನಾಡು-ಹಣದ ಹೊಳೆಗೆ ಕಡಿವಾಣ ಹಾಕಲು ಸಜ್ಜು!
ಚೆನ್ನೈ , ಭಾನುವಾರ, 6 ಮಾರ್ಚ್ 2011 (09:32 IST)
ತಮಿಳುನಾಡಿನಲ್ಲಿ ಏಪ್ರಿಲ್ 13ರಂದು ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮತದಾರರನ್ನು ಓಲೈಸಲು ರಾಜಕೀಯ ಪಕ್ಷಗಳು ಹರಿಸುವ ಹಣದ ಹೊಳೆಯ ಮೇಲೆ ನಿಗಾ ಇಡಲು ಚುನಾವಣಾ ಆಯೋಗ, ಆದಾಯ ತೆರಿಗೆ ಇಲಾಖೆಯ ಸಹಯೋಗದೊಂದಿಗೆ ಕಾರ್ಯಪ್ರವೃತ್ತವಾಗಲು ನಿರ್ಧರಿಸಿದೆ.ಆದಾಯ ತೆರಿಗೆ ಇಲಾಖೆಯ ತನಿಖಾ ತಂಡ ಈಗಾಗಲೇ ರಾಜ್ಯದ ಪ್ರತಿ ಜಿಲ್ಲಾವಾರು ತನ್ನ ತಂಡಗಳನ್ನು ನೇಮಕ ಮಾಡಿದ್ದು, ಅವರು ಕಣದಲ್ಲಿರುವ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳು ಮಾಡುವ ಚುನಾವಣಾ ಖರ್ಚಿನ ಮೇಲೆ ಕಣ್ಣಿಡುತ್ತವೆ.ಮೊದಲ ಬಾರಿಗೆ ಬಿಹಾರ ಚುನಾವಣೆಯಲ್ಲಿ ಚುನಾವಣಾ ಆಯೋಗ, ಆದಾಯ ತೆರಿಗೆ ಇಲಾಖೆಯ ನೆರವನ್ನು ಇದೇ ಸಂಬಂಧದಲ್ಲಿ ಬಳಸಿಕೊಂಡಿತ್ತು. ಅಲ್ಲಿ ಚುನಾವಣಾ ಖರ್ಚಿನ ಬಗ್ಗೆ ತೀವ್ರ ನಿಗಾ ವಹಿಸಿದ್ದರಿಂದ ಆಯೋಗದ ಯೋಜನೆ ಫಲ ನೀಡಿತ್ತು. ಆ ನಿಟ್ಟಿನಲ್ಲಿ ಇದೀಗ ತಮಿಳುನಾಡಿನಲ್ಲಿಯೂ ಆದಾಯ ತೆರಿಗೆ ಇಲಾಖೆಯನ್ನು ಬಳಸಿಕೊಳ್ಳಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.ಹಣ, ವಸ್ತುಗಳ ಹಂಚಿಕೆ ಇತ್ಯಾದಿಗಳ ಬಗ್ಗೆ ಆದಾಯ ತೆರಿಗೆ ತನಿಖಾ ದಳ ನೀಡುವ ವರದಿಯ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದೆ. ಆದರೆ ಈ ಬಾರಿ ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆ ಮತ್ತು ಪ್ರಮುಖ ಪ್ರತಿಪಕ್ಷವಾಗಿರುವ ಎಐಎಡಿಎಂಕೆ ಜಿದ್ದಾಜಿದ್ದಿನ ಹಣಾಹಣಿಗೆ ಇಳಿಯಲಿದೆ. ಪ್ರಸಕ್ತ ಚುನಾವಣೆಯಲ್ಲಿ ಕೋಟ್ಯಂತರ ರೂಪಾಯಿ ಹಣವನ್ನು ರಾಜಕೀಯ ಪಕ್ಷಗಳು ವ್ಯಯಿಸಲಿವೆ ಎಂಬ ಮಾತು ಕೇಳಿಬರುತ್ತಿದೆ. ಹಾಗಾಗಿ ಆಯೋಗದ ಕ್ರಮ ಎಷ್ಟರ ಮಟ್ಟಿಗೆ ಹಣದ ಹೊಳೆಗೆ ಕಡಿವಾಣ ಹಾಕಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.