ನವದೆಹಲಿ: ಯುಪಿಎಯ ಎರಡನೇ ಅತಿದೊಡ್ಡ ಪಾಲುದಾರ ಪಕ್ಷ ಡಿಎಂಕೆ, ಕೇಂದ್ರ ಸರಕಾರದಿಂದ ಹೊರಗೆ ಬರುವುದನ್ನು ಘೋಷಿಸಿದಂದಿನಿಂದ ಮಾತುಕತೆಗಳು ಭರ್ಜರಿ ಪ್ರಮಾಣದಲ್ಲೇ ನಡೆಯುತ್ತಿದ್ದು, ಸೋಮವಾರವೂ ಬಿರುಸಿನ ಮಾತುಕತೆ, ಕಾಲೆಳೆದಾಟ, ಬ್ಲ್ಯಾಕ್‌ಮೇಲ್ ಮಾತುಕತೆಗಳೆಲ್ಲ ನಡೆಯಿತು. ಮಾತುಕತೆಯ ಫಲವಾಗಿ 6 ಸಚಿವರು ಸರಕಾರದಿಂದ ಹೊರಬರುವ ನಿರ್ಧಾರವನ್ನು ಡಿಎಂಕೆ ನಾಳೆಗೆ ಮುಂದೂಡಿದೆ.
ಡಿಎಂಕೆ ಹೊರಬಂದರೂ ಕೇಂದ್ರ ಸರಕಾರ ಉರುಳುವುದಿಲ್ಲ ಎಂಬುದು ಅದಕ್ಕೂ ಗೊತ್ತಿದೆ. ಹತಾಶಗೊಂಡ ಕಾಂಗ್ರೆಸ್ ಏನಾದರೂ ತಮ್ಮ ಬದ್ಧಪ್ರತಿಸ್ಪರ್ಧಿ, ಜಯಲಲಿತಾ ಅವರ ಎಐಎಡಿಎಂಕೆ ಜತೆ ಮೈತ್ರಿ ಮಾಡಿಕೊಂಡರೆ ಎಂಬ ಆತಂಕವೂ ಅದಕ್ಕೆ ಕಾಡದೇ ಇರಲಿಲ್ಲ. ಬಡಪೆಟ್ಟಿಗೆ ಕಾಂಗ್ರೆಸ್ ಬಗ್ಗುವುದಿಲ್ಲ ಎಂಬುದನ್ನು ಅರಿತುಕೊಂಡ ತಮಿಳುನಾಡು ಮುಖ್ಯಮಂತ್ರಿ ಅವರ ಡಿಎಂಕೆ, ಸ್ವಲ್ಪ ಮೆತ್ತಗಾದಂತೆ ಕಂಡುಬರುತ್ತಿದೆ.
ಸೋಮವಾರ ಸಂಜೆ ರಾಜೀನಾಮೆ ಕೊಟ್ಟೇಬಿಡುತ್ತಾರೆ ಎಂದು ಕಾದಿದ್ದವರಿಗೆಲ್ಲ ಡಿಎಂಕೆ ನಾಯಕ, ಕರುಣಾನಿಧಿ ಪುತ್ರ ಎಂ.ಕೆ.ಸ್ಟಾಲಿನ್ "ಕಾಂಗ್ರೆಸ್ ಪಕ್ಷವು ಇನ್ನೂ ಒಂದು ದಿನ ಕಾಲಾವಕಾಶ ಕೇಳಿದೆ" ಎಂದು ಹೇಳಿ, ಈ ವಿವಾಹವು ಇನ್ನೂ ಮುರಿದುಬಿದ್ದಿಲ್ಲ ಎಂಬುದರ ಸುಳಿವು ನೀಡಿದರು.
ತಮಿಳುನಾಡು ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸುವ ನಿಟ್ಟಿನಲ್ಲಿ ಕೇವಲ 3 ಸೀಟಿಗಾಗಿ ಕಾಂಗ್ರೆಸ್-ಡಿಎಂಕೆ ನಡುವೆ ಜಗಳ ಏರ್ಪಟ್ಟಿದೆ. ಕಾಂಗ್ರೆಸ್ 63 ಕೇಳುತ್ತಿದ್ದರೆ, ಡಿಎಂಕೆ ತಾನು ಕೇವಲ 60 ಮಾತ್ರ ಕೊಡುತ್ತೇನೆ ಎಂದು ಪಟ್ಟು ಹಿಡಿದಿರುವುದು ವಿವಾದಕ್ಕೆ ಕಾರಣ.
ಕೇಂದ್ರ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಅವರು ಡಿಎಂಕೆ ನಾಯಕ ದಯಾನಿಧಿ ಮಾರನ್ ಜೊತೆ ಮಾತುಕತೆ ನಡೆಸಿದ ಬಳಿಕ, ದೂರವಾಣಿ ಮೂಲಕ ಕರುಣಾನಿಧಿ ಜೊತೆಗೂ ಮಾತನಾಡಿದ್ದಾರೆ. ಈ ಕುರಿತು ಕೇಳಿದಾಗ, ಪ್ರತಿಯೊಂದು ವಿಷಯವನ್ನೂ ನಾವು ಬಹಿರಂಗಪಡಿಸುವಂತಿಲ್ಲ ಎಂದಿದ್ದಾರೆ ಕರುಣಾನಿಧಿ ಪುತ್ರಿ, ಸಂಸದೆ ಕನಿಮೋಳಿ.
6 ಮಂದಿ ಸಚಿವರ ಸಹಿತ ಡಿಎಂಕೆಯ 18 ಸಂಸದರು ಕೇಂದ್ರದ ಯುಪಿಎ ಮೈತ್ರಿಕೂಟದಲ್ಲಿದ್ದಾರೆ.