Select Your Language

Notifications

webdunia
webdunia
webdunia
webdunia

ಡಿಎಂಕೆ ಬೆಂಬಲ ಇರುವವರೆಗೆ ರಾಜಾಗೆ ಒತ್ತಾಸೆ: ಕನಿಮೋಳಿ

ಡಿಎಂಕೆ
ಚೆನ್ನೈ , ಶನಿವಾರ, 26 ಮಾರ್ಚ್ 2011 (16:01 IST)
ಡಿಎಂಕೆ ಬೆಂಬಲಿಸುವವರೆಗೆ ನಾನು ಮಾಜಿ ದೂರಸಂಪರ್ಕ ಸಚಿವ ಎ. ರಾಜಾ ಬೆನ್ನಿಗಿರುತ್ತೇನೆ ಎಂದು 2ಜಿ ತರಂಗಾಂತರ ಹಗರಣ ಸಂಬಂಧ ಇತ್ತೀಚೆಗಷ್ಟೇ ಸಿಬಿಐಯಿಂದ ವಿಚಾರಣೆಗೊಳಪಟ್ಟಿರುವ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಪುತ್ರಿ ಹೇಳಿಕೊಂಡಿದ್ದಾರೆ.

ರಾಜಾ ಜತೆ 'ಆಪ್ತ' ಸಂಬಂಧ ಹೊಂದಿರುವ ಕನಿಮೋಳಿಯನ್ನು ಇತ್ತೀಚೆಗಷ್ಟೇ ಸಿಬಿಐ ವಿಚಾರಣೆ ನಡೆಸಿತ್ತು. ಸಿಬಿಐ ಮುಂದೆ ಹಾಜರಾದ ಅನುಭವ ಕಠಿಣವಾಗಿತ್ತು ಎಂದಿರುವ ಆಕೆ, 2ಜಿ ಆರೋಪಗಳಲ್ಲಿ ಹುರುಳಿಲ್ಲ ಎಂದು ಇದೇ ಸಂದರ್ಭದಲ್ಲಿ ಪುನರುಚ್ಛರಿಸಿದ್ದಾರೆ.

ತನ್ನ ಪಕ್ಷವು ರಾಜಾ ಅವರನ್ನು ಬೆಂಬಲಿಸುವವರೆಗೆ, ತಾನು ಕೂಡ ರಾಜಾ ಅವರನ್ನು ಬೆಂಬಲಿಸುತ್ತೇನೆ ಎಂದಿರುವ ಕನಿಮೋಳಿ, ತನ್ನ ಮತ್ತು ರಾಜಾ ನಡುವಿನ ಗಾಳಿಸುದ್ದಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದರು.

ಕರುಣಾನಿಧಿ ಮೂರನೇ ಪತ್ನಿ ರಜತಿ ಅಮ್ಮಾಳ್ ಪುತ್ರಿಯಾಗಿರುವ 43ರ ಹರೆಯದ ಕನಿಮೋಳಿ ಮತ್ತು ರಾಜಾ ನಡುವೆ ಆಪ್ತ ಸಂಬಂಧವಿದೆ ಎಂದು ಆರೋಪಿಸಲಾಗುತ್ತಿದೆ.

1989ರಲ್ಲಿ ಶಿವಕಾಶಿಯ ಉದ್ಯಮಿ ಅತಿಬನ್ ಬೋಸ್ ಎಂಬವರನ್ನು ವಿವಾಹವಾಗಿದ್ದ ಕನಿಮೋಳಿ, ಅವರಿಗೆ 1997ರಲ್ಲಿ ವಿಚ್ಛೇದನ ನೀಡಿದ್ದರು. ಬಳಿಕ ಅದೇ ವರ್ಷ ಸಿಂಗಾಪುರದ ತಮಿಳು ಬರಹಗಾರ ಜಿ. ಅರವಿಂದನ್ ಅವರನ್ನು ಮದುವೆಯಾಗಿದ್ದರು. ಈ ಸಂಬಂಧವೂ ಕಡಿದು ಹೋಗಿದೆ ಎಂದು ಹೇಳಲಾಗುತ್ತಿದೆ.

2ಜಿ ಹಗರಣದಲ್ಲಿ ವಿಚಾರಣೆಗೊಳಗಾದ ನಂತರ ಆತ್ಮಹತ್ಯೆ ಮಾಡಿಕೊಂಡಿರುವ ಸಾಧಿಕ್ ಬಾಚಾ ಕುರಿತು ಮಾತನಾಡಿದ ಕನಿಮೋಳಿ, ಸಾವಿಗೆ ಅಚ್ಚರಿ ವ್ಯಕ್ತಪಡಿಸಿದರು. ಅಲ್ಲದೆ, ಬಾಚಾ ಬಗ್ಗೆ ತನಗೆ ಹೆಚ್ಚಿನ ಮಾಹಿತಿಗಳಿಲ್ಲ ಮತ್ತು ಆತನಿಂದ ಯಾವುದೇ ಹಣವನ್ನು ಸ್ವೀಕರಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಕಲೈಂಞಾರ್ ಟಿವಿಯಲ್ಲಿ ಕನಿಮೋಳಿ ಮತ್ತು ದಯಾಳು ಅಮ್ಮಾಳ್ ಇಬ್ಬರು ಒಟ್ಟಾಗಿ ಶೇ.80ರ ಶೇರುಗಳನ್ನು ಹೊಂದಿದ್ದಾರೆ. ರಾಜಾ ಜೈಲು ಸೇರಲು ಕಾರಣವಾಗಿರುವ 2ಜಿ ಹಗರಣದಲ್ಲಿ ಈ ಟಿವಿ ಚಾನೆಲ್ ಪಾತ್ರವೂ ಮಹತ್ವದ್ದು ಎಂದು ಆರೋಪಿಸಲಾಗುತ್ತಿದೆ. 214 ಕೋಟಿ ರೂಪಾಯಿಗಳು ಈ ಚಾನೆಲ್‌ಗೆ ಸಂದಾಯವಾಗಿರುವುದೇ ಇದಕ್ಕೆ ಸಿಕ್ಕಿರುವ ಸುಳಿವು.

ಪ್ರಸಕ್ತ ದಾವೂದ್ ಇಬ್ರಾಹಿಂ ಜತೆ ಸಂಬಂಧ ಹೊಂದಿದ್ದಾನೆ ಎಂದು ಬಹಿರಂಗವಾಗಿರುವ ಶಾಹಿದ್ ಬಲ್ವಾ ನಿರ್ದೇಶಕನಾಗಿರುವ ಕಂಪನಿ ಸೇರಿದಂತೆ ಇತರ ಕಂಪನಿಗಳಿಗೆ ಕಡಿಮೆ ಬೆಲೆಗೆ ದುಬಾರಿ ತರಂಗಾಂತರಗಳನ್ನು ಹಂಚಿಕೆ ಮಾಡಿದ್ದ ರಾಜಾಗೆ 214 ಕೋಟಿ ರೂಪಾಯಿಗಳು ಸಂದಾಯವಾಗಿದ್ದವು. ಇದು ನೇರವಾಗಿ ಪಾವತಿಯಾಗುವ ಬದಲು, ಮುಂಬೈಯ ಸಿನಿಯುಗ್ ಫಿಲ್ಮ್ ಕಂಪನಿಯಿಂದ ಕಲೈಂಞರ್ ಟಿವಿಗೆ ಸಂದಾಯವಾಗಿತ್ತು ಎಂದು ಆರೋಪಿಸಲಾಗಿದೆ.

ಆದರೆ ಇದನ್ನು ಕನಿಮೋಳಿ ಮತ್ತು ಟಿವಿ ಚಾನೆಲ್ ಆಡಳಿತ ಮಂಡಳಿಯು ನಿರಾಕರಿಸಿದೆ. ನಾವು ಪಡೆದಿರುವುದು ಸಾಲ ಮತ್ತು ಅದನ್ನು 30 ಕೋಟಿ ರೂಪಾಯಿ ಬಡ್ಡಿ ಸಮೇತ ವಾಪಸ್ ನೀಡಲಾಗಿದೆ ಎಂದು ಹೇಳಿಕೊಳ್ಳುತ್ತಿದೆ.

Share this Story:

Follow Webdunia kannada