ಡಿಎಂಕೆ ಪಕ್ಷದ ಬೆದರಿಕೆಗೆ ಮಣಿಯುವುದಿಲ್ಲ: ಪ್ರಣಬ್ ಮುಖರ್ಜಿ
ದೆಹಲಿ , ಸೋಮವಾರ, 7 ಮಾರ್ಚ್ 2011 (09:35 IST)
ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷದ ಬೇಡಿಕೆಯಂತೆ ಹೆಚ್ಚಿನ ಕ್ಷೇತ್ರಗಳನ್ನು ನೀಡಬೇಕು ಎಂದು ಕೇಂದ್ರ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜ, ಮುಖ್ಯಮಂತ್ರಿ ಕರುಣಾನಿಧಿಯವರನ್ನು ಒತ್ತಾಯಿಸಿದ್ದಾರೆ.ಯುಪಿಎ ಮೈತ್ರಿಕೂಟದಿಂದ ಡಿಎಂಕೆ ಹೊರಬರಲಿದೆ ಎನ್ನುವ ಡಿಎಂಕೆ ಪಕ್ಷದ ಬೆದರಿಕೆಯಿಂದ ಕಾಂಗ್ರೆಸ್ ಪಕ್ಷ ವಿಚಲಿತವಾಗಿಲ್ಲ ಎಂದು ಮುಖರ್ಜಿ ಸ್ಪಷ್ಟಪಡಿಸಿದ್ದಾರೆ. ತಮಿಳುನಾಡಿನ ಕಾಂಗ್ರೆಸ್ ಪಕ್ಷದ ಘಟಕ ಆಯ್ದ ಕ್ಷೇತ್ರಗಳಲ್ಲಿ 63 ಸೀಟುಗಳನ್ನು ನೀಡುವಂತೆ ಪಟ್ಟು ಹಿಡಿದಿದೆ.ಡಿಎಂಕೆ ಪಕ್ಷ ಯುಪಿಎ ಮೈತ್ರಿಕೂಟದಲ್ಲಿ ಮುಂದುವರಿಯಬೇಕಾದಲ್ಲಿ ಕಾಂಗ್ರೆಸ್ ಪಕ್ಷದ ಬೇಡಿಕೆಯನ್ನು ಈಡೇರಿಸಬೇಕಾಗಿದೆ.ಈಗಾಗಲೇ, 22 ಸಂಸದರನ್ನು ಹೊಂದಿರುವ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್, ಯುಪಿಎ ಸರಕಾರಕ್ಕೆ ಬಾಹ್ಯ ಬೆಂಬಲ ನೀಡುವುದಾಗಿ ಘೋಷಿಸಿದ್ದರಿಂದ, ಡಿಎಂಕೆ ಬೆದರಿಕೆಯನ್ನು ಎದುರಿಸಲು ಕಾಂಗ್ರೆಸ್ ಹೈಕಮಾಂಡ್ ಸಜ್ಜಾಗಿದೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಬ್ಬರು ಮಾತನಾಡಿ, ಎಐಎಡಿಎಂಕೆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಗಳು ಮುಕ್ತವಾಗಿವೆ. ಜಯಲಲಿತಾ ನೇತೃತ್ವದ ಪಕ್ಷ 9 ಸಂಸದರನ್ನು ಹೊಂದಿದೆ.ಡಿಎಂಕೆ ಯುಪಿಎ ಮೈತ್ರಿಕೂಟದಿಂದ ಹೊರಬಂದಲ್ಲಿ ಎಐಎಡಿಎಂಕೆ ಬೆಂಬಲ ಸೂಚಿಸಲು ಸದಾ ಸಿದ್ಧವಾಗಿದೆ ಎಂದು ಹೇಳಿದ್ದಾರೆ.ಡಿಎಂಕೆ ಪಕ್ಷದ ನಾಯಕ ಟಿಆರ್ ಬಾಲು, ಇಂದು 11 ಗಂಟೆಗೆ ಪ್ರಧಾನಿಯವರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ. ಒಂದು ವೇಳೆ ಮಾತುಕತೆಗಳು ಫಲಪ್ರದವಾಗದಿದ್ದಲ್ಲಿ ಡಿಎಂಕೆ ಪಕ್ಷದ 6 ಮಂದಿ ಕೇಂದ್ರ ಸಚಿವರು ರಾಜೀನಾಮೆ ನೀಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.