ಜಪಾನ್ ಸುನಾಮಿ ಭಾರತದಲ್ಲಿ ಸಂಭವಿಸುತ್ತಿದ್ದರೆ...?
ನವದೆಹಲಿ , ಶನಿವಾರ, 12 ಮಾರ್ಚ್ 2011 (16:48 IST)
ನಿನ್ನೆಯ ದಿನ ಜಪಾನ್‌ನಲ್ಲಿ ಸಂಭವಿಸಿದ ಸುನಾಮಿ ಭಾರತಕ್ಕೆ ಅಪ್ಪಳಿಸಿದ್ದಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು? ಹೀಗೊಂದು ಅವಲೋಕನಕ್ಕಿಳಿದರೆ, ಭಾರತದ ಜನಸಂಖ್ಯೆ, ತಂತ್ರಜ್ಞಾನ, ಮೂಲಭೂತ ಸೌಕರ್ಯ, ಪ್ರಕೃತಿ ವಿಕೋಪದ ಕುರಿತ ಅರಿವು, ನಮ್ಮ ಪರಿಸ್ಥಿತಿ, ಅದಕ್ಕೂ ಹೆಚ್ಚಾಗಿ ನಾವು ಕಾನೂನುಗಳನ್ನು ಪಾಲಿಸುವ ರೀತಿಯನ್ನು ಗಂಭೀರವಾಗಿ ಪರಿಗಣಿಸಿದರೆ, ಲಕ್ಷಾಂತರ ಮಂದಿಯ ಆಹುತಿ ನಡೆಯುತ್ತಿತ್ತು ಎನ್ನುವುದು ನಿರ್ವಿವಾದವಾಗಿ ಸಿಗುವ ಸುಲಭ ಉತ್ತರ!ಅದೆಷ್ಟೇ ಬಾಂಬ್ ದಾಳಿ, ಪ್ರಕೃತಿ ವಿಕೋಪಗಳು ಎದುರಾದರೂ ಏನೂ ಆಗದಂತೆ ಸುಧಾರಿಸಿಕೊಂಡು ನಡೆದುಕೊಂಡು ಬಂದಿರುವ, ತಂತ್ರಜ್ಞಾನ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಉಳಿಸಿಕೊಂಡಿರುವ ದೇಶ ಜಪಾನ್. ಅಂತಹ ದೇಶವೇ ನಿನ್ನೆಯ ದಿನ ಸುನಾಮಿಯ ರೌದ್ರಾವತಾರಕ್ಕೆ ತತ್ತರಿಸಿದೆ. ಆದರೆ, ಹೆಚ್ಚಿನ ಪ್ರಾಣಾಪಾಯಗಳು ಆಗದಂತೆ ಅದು ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕೆಲವೇ ಸಾವಿರಕ್ಕೆ ಸಾವಿನ ಸಂಖ್ಯೆ ಸೀಮಿತಗೊಂಡಿದೆ. ಇದಕ್ಕೆ ಕಾರಣಗಳು ಹಲವು.ಮೊದಲನೆಯದಾಗಿ ಆ ದೇಶದಲ್ಲಿನ ಜನಸಂಖ್ಯೆ; ಜಪಾನಿಗರ ಸಾಕ್ಷರತೆಯ ಪ್ರಮಾಣ; ತಂತ್ರಜ್ಞಾನ ಮತ್ತು ಅದರ ಬಗ್ಗೆ ಇರುವ ಅರಿವು; ಸರಕಾರದ ಕಾನೂನುಗಳನ್ನು ಪಾಲಿಸುವ, ಆದೇಶಗಳನ್ನು ಗೌರವಿಸುವ ರೀತಿ- ಇವೆಲ್ಲವೂ ಸಾವಿನ ಸಂಖ್ಯೆಯನ್ನು ಕೆಲವೇ ಸಾವಿರಗಳಿಗೆ ಸೀಮಿತಗೊಳಿಸುವಲ್ಲಿ ಕಾರಣಗಳಾಗಿವೆ.
(ಸುದ್ದಿ-ಚಿತ್ರಗಳು ಮುಂದಿನ ಪುಟಗಳಲ್ಲಿ ಮುಂದುವರಿದಿವೆ)
ಗಂಟೆಯೊಳಗೆ ವಿಮಾನ ನಿಲ್ದಾಣ ಓಪನ್...ಸೆಂಡಾಯ್ ವಿಮಾನ ನಿಲ್ದಾಣಕ್ಕೆ ಸುನಾಮಿ ನುಗ್ಗಿ ನಡೆದ ಆವಾಂತರಗಳ ಚಿತ್ರಗಳನ್ನು ಎಲ್ಲರೂ ನೋಡಿರುತ್ತೀರಿ. ವಿಮಾನಗಳು, ಕಾರುಗಳು, ಅವಶೇಷಗಳೆಡೆಯಲ್ಲಿ ಬಿದ್ದಿರುವುದನ್ನು ಗಮನಿಸಿರುತ್ತೀರಿ. ಇದೆಲ್ಲ ನಡೆಯುತ್ತಿದ್ದಂತೆ ಜಪಾನ್ ಕರಾವಳಿಯ ಬಹುತೇಕ ವಿಮಾನ ನಿಲ್ದಾಣಗಳು, ಬಂದರುಗಳು, ರೈಲ್ವೇ ನಿಲ್ದಾಣಗಳು ತಮ್ಮ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದವು. ಕೆಲವೇ ಕ್ಷಣಗಳೊಳಗೆ ಅವುಗಳಲ್ಲಿ ಬಹುತೇಕವಾದುವು ಕೊಚ್ಚಿ ಹೋಗಿದ್ದವು.ಅಚ್ಚರಿಯ ವಿಚಾರವೆಂದರೆ, ಸುನಾಮಿ ಬಂದು ಹೋದ ಗಂಟೆಗಳೊಳಗೆ ಹಾನಿಗೊಂಡ ಹಲವು ವಿಮಾನ ನಿಲ್ದಾಣಗಳು ಮರು ಕಾರ್ಯಾಚರಣೆ ಆರಂಭಿಸಿರುವುದು. ಇದನ್ನು ಸ್ವತಃ ಜಪಾನ್ ಟಿವಿ ಚಾನೆಲ್‌ಗಳು ಖಚಿತಪಡಿಸಿವೆ.