ಗೋಧ್ರಾದಲ್ಲಿ ಮಕ್ಕಳು, ಮಹಿಳೆಯರ ಸಹಿತ 59 ಮಂದಿ ಕರಸೇವಕರಿದ್ದ ರೈಲಿಗೆ ಬೆಂಕಿ ಹಚ್ಚಿ ನರಮೇಧ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಇಸ್ಮಾಯಿಲ್ ಯೂಸುಫ್ ಚುಂಗ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಗೋಧ್ರಾ ರೈಲ್ವೇ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
2002ರ ಫೆಬ್ರವರಿ 27ರಂದು ನಡೆದ ಘಟನೆಯ ಬಳಿಕ ತಲೆಮರೆಸಿಕೊಂಡಿದ್ದ ಈತನನ್ನು ಗುರುವಾರವೇ ಬಂಧಿಸಿದ್ದು, ಗುರುತು ಪತ್ತೆ ಹಚ್ಚುವ ಪೆರೇಡ್‌ಗಾಗಿ ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಗಿತ್ತು. ಸಾಬರಮತಿ ಎಕ್ಸ್‌ಪ್ರೆಸ್ ರೈಲಿನ ಎಸ್-6 ನಂಬರಿನ ಬೋಗಿಗೆ ಬೆಂಕಿ ಹಂಚ್ಚಿದವರಲ್ಲಿ ಇಸ್ಮಾಯಿಲ್ ಕೂಡ ಒಬ್ಬ. 16 ಮಂದಿ ತಲೆಮರೆಸಿಕೊಂಡಿದ್ದವರಲ್ಲಿ ಒಬ್ಬನಾಗಿರುವ ಈತನ ಬಂಧನವು ತನಿಖೆಯ ನಿಟ್ಟಿನಲ್ಲಿ ಗೋಧ್ರಾ ಪೊಲೀಸರ ಪ್ರಮುಖ ಯಶಸ್ಸು ಎಂದು ಹೇಳಲಾಗುತ್ತಿದೆ.
ಇದೊಂದು ಪೂರ್ವಯೋಜಿತ ಪಿತೂರಿ ಎಂಬ ವಾದವನ್ನು ಒಪ್ಪಿದ ನ್ಯಾಯಾಲಯವು ಕಳೆದ ಮಂಗಳವಾರವಷ್ಟೇ 11 ಮಂದಿಗೆ ಗಲ್ಲು ಶಿಕ್ಷೆ ಹಾಗೂ 20 ಮಂದಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು.