Select Your Language

Notifications

webdunia
webdunia
webdunia
webdunia

ಗೇಮ್ಸ್ ಫಜೀತಿಗೆ ಶೀಲಾ ದೀಕ್ಷಿತ್ ಕಾರಣ; ಸಂಸತ್ತಲ್ಲಿ ಗದ್ದಲ

ಶುಂಗ್ಲು ವರದಿ
ನವದೆಹಲಿ , ಶುಕ್ರವಾರ, 25 ಮಾರ್ಚ್ 2011 (16:19 IST)
ದೆಹಲಿ ಕಾಮನ್‌ವೆಲ್ತ್ ಗೇಮ್ಸ್ ಅವ್ಯವಸ್ಥೆಗಳಿಗೆ ದೆಹಲಿ ಸರಕಾರವೇ ಕಾರಣ. ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ಯಾವುದೇ ಪೂರ್ವ ಸಿದ್ಧತೆ ಹೊಂದಿರುವ ಪುರಾವೆಗಳು ಸಿಕ್ಕಿಲ್ಲ. ಇದರಿಂದಾಗಿ 900 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಶುಂಗ್ಲು ವರದಿ ಚಾಟಿ ಬೀಸಿದೆ. ಆದರೂ ಇದನ್ನು ಮಂಡಿಸಲು ಹಿಂದೆ ಮುಂದೆ ನೋಡುತ್ತಿರುವ ಸರಕಾರದ ವಿರುದ್ಧ ಪ್ರತಿಪಕ್ಷಗಳು ಭಾರೀ ಕೋಲಾಹಲ ಎಬ್ಬಿಸಿವೆ.

ಗೇಮ್ಸ್ ಹರಾಜು ಪ್ರಕ್ರಿಯೆಗಳು ಪಾರದರ್ಶಕವಾಗಿರಲಿಲ್ಲ ಮತ್ತು ವೆಚ್ಚಗಳನ್ನು ಕೂಡ ಹೆಚ್ಚು ಮಾಡಲಾಗಿತ್ತು. ನಿರ್ಮಾಣ ಕಾಮಗಾರಿಗಳ ಒಪ್ಪಂದಗಳಿಗಾಗಿ ಸಾಕಷ್ಟು ಮಂದಿ ಬಿಡ್ ಕೂಡ ಮಾಡಿರಲಿಲ್ಲ. ದೊಡ್ಡ ಗುತ್ತಿಗೆದಾರರು ಹರಾಜು ಪ್ರಕ್ರಿಯೆಯಿಂದ ಹೊರಗುಳಿದಿದ್ದರು. ಆದರೆ ಸಣ್ಣ ಪುಟ್ಟ ಗುತ್ತಿಗೆದಾರರು 1,000 ಕೋಟಿ ರೂಪಾಯಿಗಳ ಒಪ್ಪಂದಗಳನ್ನು ಗಿಟ್ಟಿಸಿಕೊಂಡಿದ್ದರು ಎಂದು ವರದಿ ಹೇಳಿದೆ.

ಗೇಮ್ಸ್ ಅವ್ಯವಹಾರಗಳ ಕುರಿತು ತನಿಖೆ ನಡೆಸಿರುವ ಮಾಜಿ ಮಹಾಲೇಖಪಾಲ ವಿ.ಕೆ. ಶುಂಗ್ಲು ನೇತೃತ್ವದ ದ್ವಿಸದಸ್ಯ ಸಮಿತಿಯ ವರದಿ ಮಾಧ್ಯಮಗಳ ಮೂಲಕ ಬಹಿರಂಗವಾಗಿದೆ.

ಈ ವರದಿಯ ಉದ್ದಕ್ಕೂ ದೆಹಲಿಯ ಕಾಂಗ್ರೆಸ್ ಸರಕಾರದ ವಿರುದ್ಧ ಹಲವು ಟೀಕೆಗಳನ್ನು ಮಾಡಲಾಗಿದೆ. 2003ರಿಂದ 2006ರ ನಡುವೆ ಸರಕಾರವು ಸಂಪೂರ್ಣ ನಿಷ್ಕ್ರಿಯವಾಗಿತ್ತು ಎಂದು ಕೂಡ ಹೇಳಿದೆ.

'ನಗರದ ರೂಪುರೇಷೆಗಳನ್ನು ರೂಪಿಸುವ ಅಭಿವೃದ್ಧಿ ಯೋಜನೆಗಳು ಸೇರಿದಂತೆ, ದುಬಾರಿಯಾಗಿರುವ ಬಹುತೇಕ ನಿರ್ಧಾರಗಳ ಜವಾಬ್ದಾರಿಯನ್ನು ಶೀಲಾ ದೀಕ್ಷಿತ್ ಹೊರ ಬೇಕಾಗಿದೆ. ಅವೆಲ್ಲದರ ಸಂಪೂರ್ಣ ಕೀರ್ತಿ ಮುಖ್ಯಮಂತ್ರಿಗೆ ಸಲ್ಲಬೇಕು'

ವರದಿ ಮಂಡಿಸದ ಸರಕಾರ...
ಮಾಧ್ಯಮಗಳಲ್ಲಿ ಬಹಿರಂಗವಾದ ನಂತರ ಶುಂಗ್ಲು ವರದಿ ಬಿಡುಗಡೆಯಾದರೂ, ಅದನ್ನು ಸಂಸತ್ತಿನಲ್ಲಿ ಸರಕಾರ ಮಂಡಿಸಲಿಲ್ಲ. ಇದರಿಂದ ತೀವ್ರ ನಿರಾಸೆಗೊಂಡ ಪ್ರತಿಪಕ್ಷ ಬಿಜೆಪಿ ಸರಕಾರದ ನಿರ್ಧಾರವನ್ನು ಪ್ರತಿಭಟಿಸಿತು.

ಕಾಮನ್‌ವೆಲ್ತ್ ಗೇಮ್ಸ್ ಅವ್ಯವಹಾರಗಳ ಕುರಿತು ತನಿಖೆ ನಡೆಸಲು ನೇಮಕಗೊಂಡಿದ್ದ ಶುಂಗ್ಲು ಸಮಿತಿಯ ವರದಿಯನ್ನು ತಕ್ಷಣವೇ ಮುಂದಿಡಬೇಕು ಎಂದು ಲೋಕಸಭೆಯಲ್ಲಿ ಬಿಜೆಪಿ ಆಗ್ರಹಿಸಿತು.

ಶುಂಗ್ಲು ಸಮಿತಿಯು ತನ್ನ ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ ಎಂದು ಮಾಧ್ಯಮ ವರದಿಗಳು ಬಂದಿವೆ. ಹಾಗಾಗಿ ಶುಕ್ರವಾರವೇ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಬೇಕು. ಸಾಧ್ಯವಾದರೆ, ಆ ಕುರಿತು ಚರ್ಚೆ ನಡೆಸಬೇಕು ಎಂದು ಬಿಜೆಪಿ ವರಿಷ್ಠ ಎಲ್.ಕೆ. ಆಡ್ವಾಣಿ ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಂಸದೀಯ ವ್ಯವಹಾರಗಳ ಸಚಿವ ಪವನ್ ಕುಮಾರ್ ಭನ್ಸಾಲ್, ಶುಂಗ್ಲು ಸಮಿತಿಯ ವರದಿಯನ್ನು ಸರಕಾರ ಇನ್ನಷ್ಟೇ ಗಮನಿಸಬೇಕಿದೆ ಎಂದರು.

Share this Story:

Follow Webdunia kannada