Select Your Language

Notifications

webdunia
webdunia
webdunia
webdunia

ಗುಜರಾತ್‌ ಮೇಲೆ ಐಟಿ ಕೆಂಗಣ್ಣು; ಕಾಂಗ್ರೆಸ್ ಕುತಂತ್ರ ಆರೋಪ

ಆದಾಯ ತೆರಿಗೆ ಇಲಾಖೆ
ಗಾಂಧಿನಗರ , ಬುಧವಾರ, 16 ಮಾರ್ಚ್ 2011 (09:49 IST)
ಕೇಂದ್ರ ಸರಕಾರವು ತನ್ನ ತನಿಖಾ ಸಂಸ್ಥೆಗಳನ್ನು ರಾಜಕೀಯ ಎದುರಾಳಿಗಳ ವಿರುದ್ಧ ಬಳಸುತ್ತಿದೆ ಎಂಬ ಆರೋಪಗಳು ಬರುತ್ತಿರುವ ನಡುವೆಯೇ ಗುಜರಾತ್ ಮೇಲೆ ಆದಾಯ ತೆರಿಗೆ ಇಲಾಖೆ ಕೆಂಗಣ್ಣು ಬೀರಿದೆ. ಹಲವು ದಾಖಲೆಗಳನ್ನು ಐಟಿ ಕೇಳಿದೆ. ಇದು ಕಾಂಗ್ರೆಸ್ ಕುತಂತ್ರ ಎಂದು ನರೇಂದ್ರ ಮೋದಿ ನೇತೃತ್ವದ ಸರಕಾರವು ನೇರವಾಗಿ ವಾಗ್ದಾಳಿ ನಡೆಸಿದೆ.

ಮುಖ್ಯಮಂತ್ರಿ ನರೇಂದ್ರ ಮೋದಿ ಬಂಡವಾಳಿಗರನ್ನು ರಾಜ್ಯಕ್ಕೆ ಸೆಳೆಯುವ ಸಲುವಾಗಿ ಮಹತ್ವಾಕಾಂಕ್ಷೆಯಿಂದ ಹಮ್ಮಿಕೊಂಡು ಯಶಸ್ವಿಯಾಗಿದ್ದ ಉದ್ಯಮ ಸಮ್ಮೇಳನದ ಕುರಿತು ದಾಖಲೆಗಳನ್ನು ಒದಗಿಸುವಂತೆ ಆದಾಯ ತೆರಿಗೆ ಇಲಾಖೆ ಕೇಳಿದೆ ಎಂದು ಗುಜರಾತ್ ವಿಧಾನಸಭೆಯಲ್ಲಿ ರಾಜ್ಯ ಕೈಗಾರಿಕಾ ಸಚಿವ ಸೌರಭ್ ಪಟೇಲ್ ತಿಳಿಸಿದರು.

ಇತ್ತೀಚೆಗಷ್ಟೇ ನಡೆದಿದ್ದ 'ವೈಬ್ರಂತ್ ಗುಜರಾತ್ ಶೃಂಗ-2011' ಮತ್ತು 'ವೈಬ್ರಂತ್ ಗುಜರಾತ್ ಶೃಂಗ-2009'ದಲ್ಲಿನ ಬಂಡವಾಳ ಹೂಡಿಕೆಗೆ ಸಂಬಂಧಪಟ್ಟಂತೆ ಮಾಡಿಕೊಳ್ಳಲಾಗಿರುವ ಎಲ್ಲಾ ಒಪ್ಪಂದಗಳ ವಿವರಗಳನ್ನು ನೀಡುವಂತೆ ಐಟಿ ಕೇಳಿ ಪತ್ರ ಬರೆದಿದೆ ಎಂದಿರುವ ಸಚಿವರು, ಇದರ ಹಿಂದೆ ಕಾಂಗ್ರೆಸ್ ಇದೆ ಎಂದು ಆರೋಪಿಸಿದರು.

ಗುಜರಾತ್ ಪ್ರಗತಿಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಅಡ್ಡಗಾಲು ಹಾಕುತ್ತಿದೆ, ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ ಎಂಬ ಬಗ್ಗೆ ಪುರಾವೆಗಳಿವೆ ಎಂದೂ ಸಚಿವ ಪಟೇಲ್ ಆಪಾದಿಸಿದರು.

'ವೈಬ್ರಂತ್ ಗುಜರಾತ್ ಶೃಂಗ-2011'ರ ಕುರಿತ ತನಿಖೆ ಬಾಕಿ ಉಳಿದಿದೆ ಮತ್ತು ಗುಜರಾತ್ ಸರಕಾರದ ಜತೆ ಹಲವು ಕಾರ್ಪೊರೇಟ್ ಸಂಸ್ಥೆಗಳು ಮಾಡಿಕೊಂಡಿರುವ ಒಪ್ಪಂದಗಳ ವಿವರಗಳ ಕುರಿತು ಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ಆದಾಯ ತೆರಿಗೆ ಇಲಾಖೆಯು ತನ್ನ ಪತ್ರದಲ್ಲಿ ನಮೂದಿಸಿದೆ.

ಫೆಬ್ರವರಿ 17ರಂದು ಆದಾಯ ತೆರಿಗೆ ಇಲಾಖೆಯ ಉಪ ನಿರ್ದೇಶಕ (ತನಿಖೆಗಳು) ಅನುರಾಗ್ ಶರ್ಮಾ ಬರೆದಿರುವ ಪತ್ರದಲ್ಲಿ, ಗುಜರಾತ್ ಸರಕಾರದ ಉದ್ಯಮ ಒಪ್ಪಂದಗಳ ಕುರಿತು ಆದಾಯ ತೆರಿಗೆ ಇಲಾಖೆ ಕಾಯ್ದೆ 131(1ಎ) ಅಡಿಯಲ್ಲಿ ತನಿಖೆ ನಡೆಸಲಾಗುತ್ತದೆ ಎಂದೂ ಹೇಳಿದ್ದಾರೆ.

ಗುಜರಾತ್ ಜನತೆಗೆ ಮಾಡಿದ ಅನ್ಯಾಯ...
ಪ್ರತಿಪಕ್ಷದ (ಕಾಂಗ್ರೆಸ್) ನಾಯಕ ಶಕ್ತಿಸಿನ್ಹ ಗೋಹಿಲ್ ಅವರ ಧೋರಣೆ ಮತ್ತು ಅವರು ಕೇಂದ್ರ ಸರಕಾರಕ್ಕೆ ನಿರಂತರವಾಗಿ ದೂರುಗಳನ್ನು ನೀಡಿದ ಕಾರಣದಿಂದ ನಮಗೆ ಆದಾಯ ತೆರಿಗೆ ಇಲಾಖೆಯು ನೊಟೀಸ್ ರವಾನಿಸಿದೆ. ವೈಬ್ರಂಟ್ ಗುಜರಾತ್ ಶೃಂಗವನ್ನು ಇಡೀ ದೇಶ ಮತ್ತು ವಿಶ್ವವೇ ಮೆಚ್ಚಿದೆ. ಇದರ ಕುರಿತು ತನಿಖೆ ನಡೆಸಲು ಆದಾಯ ತೆರಿಗೆ ಇಲಾಖೆ ಹೊರಟಿರುವುದು ದುರದೃಷ್ಟಕರ ಎಂದು ಸಚಿವ ಪಟೇಲ್ ವಿಧಾನಸಭೆಯ ಹೊರಗಡೆ ಅಭಿಪ್ರಾಯಪಟ್ಟರು.

ಇದು ಗುಜರಾತಿಗೆ ಮತ್ತು ರಾಜ್ಯದ ಜನತೆಗೆ ಎಸಗಲಾಗುತ್ತಿರುವ ಅನ್ಯಾಯ. ಈ ರೀತಿಯಾಗಿ ಹೂಡಿಕೆ ಪ್ರಸ್ತಾವನೆಗಳ ಕುರಿತು ತನಿಖೆ ನಡೆಸಲು ಗುಜರಾತನ್ನು ವಿಶೇಷ ಎಂದು ಪರಿಗಣಿಸಲಾಗಿದೆಯೇ ಅಥವಾ ಎಲ್ಲಾ ರಾಜ್ಯಗಳಿಗೂ ಪತ್ರ ಕಳುಹಿಸಲಾಗಿದೆಯೇ ಎಂದು ಕೇಂದ್ರ ಸರಕಾರವನ್ನು ಪ್ರಶ್ನಿಸಲು ಬಯಸುತ್ತಿದ್ದೇನೆ ಎಂದರು.

ಇದೇ ವರ್ಷದ ಜನವರಿ 12-13ರಂದು ಗುಜರಾತಿನಲ್ಲಿ ನಡೆದಿದ್ದ ಈ ಬಂಡವಾಳ ಸಮ್ಮೇಳನದಲ್ಲಿ 20.83 ಲಕ್ಷ ಕೋಟಿ ರೂಪಾಯಿ ಮೊತ್ತದ 7,0936 ಒಡಂಬಡಿಕೆಗಳಿಗೆ ನೂರಾರು ಕಂಪನಿಗಳು ಸಹಿ ಹಾಕಿದ್ದವು.

Share this Story:

Follow Webdunia kannada