Select Your Language

Notifications

webdunia
webdunia
webdunia
webdunia

ಗುಜರಾತಿನ ಪ್ರತಿ ಹಳ್ಳಿಗೆ ವಿದ್ಯುತ್- ಗಾಂಧಿ ತಾತಂಗೇ ಹೆಮ್ಮೆ: ಮೋದಿ

ಗೋಧ್ರಾ ರೈಲು ಹತ್ಯಾಕಾಂಡ 9ನೇ ವರ್ಷ
ಅಹಮದಾಬಾದ್ , ಮಂಗಳವಾರ, 1 ಮಾರ್ಚ್ 2011 (12:38 IST)
PTI
ಗಾಂಧೀಜಿಯವರೇ ನಿಜವಾದ ಮತ್ತು ದೂರದೃಷ್ಟಿಯ ಚಿಂತಕ ಎಂದು ಶ್ಲಾಘಿಸಿದ, ಗಾಂಧಿ ನಾಡಾಗಿರುವ ಗುಜರಾತ್‌ನ ಮುಖ್ಯಮಂತ್ರಿ ನರೇಂದ್ರ ಮೋದಿ, ತಾವು ಗಾಂಧೀಜಿಯವರ ಕನಸುಗಳಲ್ಲಿ ಕೆಲವನ್ನು ನನಸಾಗಿಸಿರುವ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಗೋಧ್ರಾದಲ್ಲಿ ಹಿಂದೂಗಳ ಹತ್ಯಾಕಾಂಡ ಸಂಭವಿಸಿದ ದುರಂತ ಪ್ರಕರಣಕ್ಕೆ ಫೆ.28ರಂದು 9 ವರ್ಷ ತುಂಬಿದ್ದು, ಇದರ ಸಂಸ್ಮರಣಾರ್ಥ ಏರ್ಪಡಿಸಲಾಗಿದ್ದ ಸಮಾರಂಭವೊಂದರಲ್ಲಿ ಮಾತನಾಡುತ್ತಿದ್ದ ಮೋದಿ, "ಗುಜರಾತಿನ ಪ್ರತಿ ಹಳ್ಳಿಯೂ ವಿದ್ಯುದೀಕರಣಗೊಂಡಿದೆ ಎಂಬುದನ್ನು ತಿಳಿದರೆ ಗಾಂಧೀಜಿಗೆ ಅದೆಷ್ಟು ಹೆಮ್ಮೆಯಾಗಬಹುದು! ನಾನು ಮುಖ್ಯಮಂತ್ರಿಯಾಗಿದ್ದಾಗ, ಕನಿಷ್ಠ ರಾತ್ರಿ ಊಟದ ಸಮಯದಲ್ಲಾದರೂ ಲೋಡ್ ಶೆಡ್ಡಿಂಗ್ ಮಾಡಬೇಡಿ ಅಂತ ಜನರು ಕೇಳಿಕೊಳ್ಳುತ್ತಿದ್ದರು" ಎಂದು ಹೇಳಿದರು.

ಗಾಂಧಿ ಹಿಂದ್ ಸ್ವರಾಜ್ ಸಂಘಟನೆಯು ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರು ಕೂಡ ವೇದಿಕೆಯಲ್ಲಿದ್ದರು.

ಅದುವರೆಗೆ ಗುಜರಾತ್ ರಾಜ್ಯವನ್ನು ಆಳುತ್ತಾ, ಅಭಿವೃದ್ಧಿ ಕಾರ್ಯವನ್ನು ನಿರ್ಲಕ್ಷಿಸಿದ್ದ ಕಾಂಗ್ರೆಸ್ ಮೇಲೆ ಕಿಡಿಕಾರುತ್ತಾ ಮೋದಿ, "ಕೆಲವರು ಗಾಂಧೀಜಿ ಬಗ್ಗೆ ಕೇವಲ ಮಾತನಾಡುತ್ತಾರಷ್ಟೇ. ಆದರೆ ನಾವು ಸರಕಾರಿ ಕಾರ್ಯಕ್ರಮಗಳಲ್ಲಿ, ನಮ್ಮ ಪಕ್ಷದ ಕಾರ್ಯಕರ್ತರಲ್ಲಿ ಖಾದಿ ಬಳಕೆ ಉತ್ತೇಜಿಸುವ ಮೂಲಕ ನಾವು ಖಾದಿಯ ಮಾರಾಟದಲ್ಲಿ ಶೇ.40ರಷ್ಟು ಪ್ರಗತಿ ಸಾಧಿಸುವಂತೆ ಮಾಡಿ ತೋರಿಸಿದ್ದೇವೆ" ಎಂದರು.

ಗಾಂಧೀಜಿಯವರು ಅದೊಮ್ಮೆ ಕುಷ್ಠ ರೋಗ ಚಿಕಿತ್ಸಾ ಆಸ್ಪತ್ರೆಯನ್ನು ಉದ್ಘಾಟಿಸಲು ನಿರಾಕರಿಸಿದ ಸಂದರ್ಭವನ್ನು ನೆನಪಿಸಿಕೊಂಡ ಮೋದಿ, "ಕುಷ್ಠ ರೋಗ ಆಸ್ಪತ್ರೆಯನ್ನು ಮುಚ್ಚುವ ಸಂದರ್ಭಕ್ಕೆ ನನ್ನನ್ನು ಕರೆಯಿರಿ" ಎಂದು ಗಾಂಧೀಜಿ ಅವರು ಮಾರ್ಮಿಕವಾಗಿ ಹೇಳಿರುವುದನ್ನು ಮತ್ತೊಮ್ಮೆ ನೆನಪಿಸಿಕೊಂಡರಲ್ಲದೆ, ಕುಷ್ಠ ರೋಗ ನಿರ್ಮೂಲನೆಯಾಗುವ ಮೂಲಕ ಕುಷ್ಠ ರೋಗದ ಆಸ್ಪತ್ರೆಯೇ ಇಲ್ಲದಂತಾಗುವ ಗಾಂಧೀಜಿ ಕನಸನ್ನು ನನಸಾಗಿರುವ ತೃಪ್ತಿ ತನಗಿದೆ ಎಂದರು.

ಮೋದಿ ಬಳಿಕ ಮಾತನಾಡಿದ ಭಾಗ್ವತ್, ಜನರು ಗಾಂಧೀಜಿಯವರ ನೈಜ ಆಕಾಂಕ್ಷೆಗಳನ್ನು ತಿಳಿದುಕೊಳ್ಳುವುದು ಅತ್ಯಗತ್ಯ ಎಂದರು. "ಈ ದಿನಗಳಲ್ಲಿ ಜನರು ಕೇವಲ ಗಾಂಧೀಜಿ ಬಗ್ಗೆ ಪೊಳ್ಳು ಜ್ಞಾನ ಹೊಂದಿದ್ದಾರೆ ಮತ್ತು ತಮಗನ್ನಿಸಿದಂತೆ ಅದನ್ನು ವ್ಯಾಖ್ಯಾನಿಸುತ್ತಾರೆ" ಎಂದು "ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್ಸನ್ನು ವಿಸರ್ಜಿಸಬೇಕು" ಎಂಬ ಗಾಂಧೀಜಿ ನುಡಿಯನ್ನು ಪರೋಕ್ಷವಾಗಿ ಉಲ್ಲೇಖಿಸುತ್ತಾ ನುಡಿದರು.

ಗೋಧ್ರಾದಲ್ಲಿ ಹಿಂದೂಗಳಿದ್ದ ರೈಲಿಗೆ ಬೆಂಕಿ ಹಚ್ಚಿ 59 ಮಂದಿ ಕರಸೇವಕರನ್ನು ಜೀವಂತವಾಗಿ ಸುಟ್ಟು ಹಾಕಿದ ನರಮೇಧ ಸಂಭವಿಸಿ 9 ವರ್ಷದ ಬಳಿಕ ಇದೀಗ ನ್ಯಾಯಾಲಯದ ತೀರ್ಪು ಹೊರಬಿದ್ದಿದ್ದು, 11 ಮಂದಿಗೆ ಗಲ್ಲು ಶಿಕ್ಷೆ ಹಾಗೂ 20 ಮಂದಿಗೆ ಜೀವಾವಧಿ ಶಿಕ್ಷೆ ಘೋಷಣೆಯಾಗಿದೆ. ಇದಕ್ಕೆ ಸಂಬಂಧಿಸಿ 63 ಮಂದಿ ಖುಲಾಸೆಗೊಂಡಿದ್ದರು.

Share this Story:

Follow Webdunia kannada