Select Your Language

Notifications

webdunia
webdunia
webdunia
webdunia

ಗಲ್ಲು ತೀರ್ಪು ಪ್ರಶ್ನಿಸಿ ಸುಪ್ರೀಂಗೆ ಜೈಲಿಂದಲೇ ಕಸಬ್ ಪತ್ರ

ಸುಪ್ರೀಂ ಕೋರ್ಟ್
ಮುಂಬೈ , ಬುಧವಾರ, 23 ಮಾರ್ಚ್ 2011 (16:10 IST)
2008ರ ಮುಂಬೈ ಉಗ್ರರ ದಾಳಿಯಲ್ಲಿ ಜೀವಂತ ಸೆರೆ ಸಿಕ್ಕಿರುವ ಪಾಕಿಸ್ತಾನದ ಏಕೈಕ ಭಯೋತ್ಪಾದಕ ಮೊಹಮ್ಮದ್ ಅಜ್ಮಲ್ ಕಸಬ್, ತನಗೆ ಬಾಂಬೆ ಹೈಕೋರ್ಟ್ ವಿಧಿಸಿರುವ ಮರಣ ದಂಡನೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಪತ್ರ ಬರೆದಿದ್ದಾನೆ.

ಕಸಬ್ ಜೈಲಿನಿಂದ ಬರೆದಿರುವ ಪತ್ರವನ್ನು ಸುಪ್ರೀಂ ಕೋರ್ಟಿಗೆ ಕಳುಹಿಸಲಾಗಿದೆ. ಈ ಪತ್ರಕ್ಕೆ ಉತ್ತರ ಬಂದ ನಂತರ ಕಸಬ್ ತನ್ನ ಮೇಲ್ಮನವಿಯನ್ನು ಸುಪ್ರೀಂ ಕೋರ್ಟಿಗೆ ಸಲ್ಲಿಸಲಿದ್ದಾನೆ.

ಶನಿವಾರವಷ್ಟೇ ಕಸಬ್‌ ಇರುವ ಮುಂಬೈಯ ಆರ್ಥರ್ ರೋಡ್ ಜೈಲಿಗೆ ಆತನ ವಕೀಲೆ ಫರ್ಹಾನಾ ಶಾ ಭೇಟಿ ನೀಡಿದ್ದರು. ಬಾಂಬೆ ಹೈಕೋರ್ಟ್ ತೀರ್ಪಿನ ಪ್ರತಿಯನ್ನು ಜೈಲರ್‌ಗೆ ಈ ಸಂದರ್ಭದಲ್ಲಿ ಅವರು ಸಲ್ಲಿಸಿದ್ದರು.

'ಶನಿವಾರ ನಾವು ಜೈಲರ್ ಅವರನ್ನು ಭೇಟಿ ಮಾಡಿ, ತೀರ್ಪಿನ ಪ್ರತಿ ಹಸ್ತಾಂತರಿಸಿದ್ದೇವೆ. ತೀರ್ಪಿನ ವಿರುದ್ಧ ಕಸಬ್ ಮೇಲ್ಮನವಿ ಸಲ್ಲಿಸಲು ಬಯಸುತ್ತಿದ್ದಾನೆ ಎಂದು ಆತನ ಪರವಾಗಿ ಸುಪ್ರೀಂ ಕೋರ್ಟಿಗೆ ಪತ್ರವೊಂದನ್ನು ಈಗಾಗಲೇ ಕಳುಹಿಸಿರುವ ಬಗ್ಗೆ ಜೈಲು ಅಧಿಕಾರಿಗಳು ನಮಗೆ ಮಾಹಿತಿ ನೀಡಿದರು' ಎಂದು ಈ ಬಗ್ಗೆ ಶಾ ವಿವರಣೆ ನೀಡಿದರು.

ನಾವು ಜೈಲರ್‌ಗೆ ನೀಡಿದ ಹೈಕೋರ್ಟ್ ತೀರ್ಪಿನ ಪ್ರತಿಯನ್ನು ಕೂಡ ಕಸಬ್ ಸುಪ್ರೀಂ ಕೋರ್ಟಿಗೆ ಸಲ್ಲಿಸಲಿದ್ದಾನೆ ಎಂದು ಜೈಲರ್ ತಿಳಿಸಿದ್ದಾರೆ. ಶನಿವಾರ ನಾವು ಕಸಬ್‌ನಲ್ಲಿ ಭೇಟಿ ಮಾಡಿಲ್ಲ ಎಂದರು.

ಕಸಬ್ ಮೇಲ್ಮನವಿ ಪ್ರಸ್ತಾವನೆಯನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಕಳೆದ ವಾರವೇ ರವಾನಿಸಲಾಗಿರುವುದನ್ನು ಜೈಲು ಅಧೀಕ್ಷಕ ರಾಜೇಂದ್ರ ದಾಮನೆ ಖಚಿತಪಡಿಸಿದ್ದಾರೆ.

ಕಸಬ್ ಪರವಾಗಿ ಜೈಲರ್ ಕಳುಹಿಸಿರುವ ಪ್ರಸ್ತಾವನೆಗೆ ಸುಪ್ರೀಂ ಕೋರ್ಟ್ ಶೀಘ್ರದಲ್ಲೇ ಪ್ರತಿಕ್ರಿಯಿಸುವ ನಿರೀಕ್ಷೆಗಳಿವೆ. ಆತನ ಪರವಾಗಿ ವಾದಿಸಲು ವಕೀಲರೊಬ್ಬರನ್ನು ಕೂಡ ಸುಪ್ರೀಂ ನೇಮಕ ಮಾಡುವ ಸಾಧ್ಯತೆಗಳಿವೆ. ಅದರ ಬಳಿಕವಷ್ಟೇ ಕಸಬ್ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ.

ಮುಂಬೈ ದಾಳಿ ಸಂಬಂಧ ಫೆಬ್ರವರಿ 21ರಂದು ಬಾಂಬೆ ಹೈಕೋರ್ಟ್, ವಿಶೇಷ ನ್ಯಾಯಾಲಯವು ನೀಡಿದ್ದ ಮರಣ ದಂಡನೆ ಶಿಕ್ಷೆಯನ್ನು ಖಚಿತಪಡಿಸಿತ್ತು.

Share this Story:

Follow Webdunia kannada