Select Your Language

Notifications

webdunia
webdunia
webdunia
webdunia

ಕೇಂದ್ರ ಸಚಿವೆ ಬ್ಯಾನರ್ಜಿಯನ್ನು ಬಂಧಿಸುವುದಿಲ್ಲ: ಬುದ್ಧದೇವ್

ಪಶ್ಚಿಮ ಬಂಗಾಲ
ಕೊಲ್ಕತ್ತಾ , ಗುರುವಾರ, 24 ಮಾರ್ಚ್ 2011 (13:34 IST)
ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿಯವರ 17 ವರ್ಷದ ಹಿಂದಿನ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಸಿಪಿಐಎಂ ಮತ್ತು ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಅವರ ನಡುವೆ ಅಭಿಪ್ರಾಯ ಭೇದ ಕಾಣಿಸಿಕೊಂಡಿದೆ. ಕೇಂದ್ರ ರೈಲ್ವೆ ಸಚಿವೆಯನ್ನು ಬಂಧಿಸುವ ಅಥವಾ ಪೀಡಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶ್ಚಿಮ ಬಂಗಾಲ ವಿಧಾನಸಭಾ ಚುನಾವಣೆಗೂ ಮೊದಲು ಅವರನ್ನು ಬಂಧಿಸುವುದು ಅಥವಾ ಯಾವುದೇ ರೀತಿಯ ಕಿರುಕುಳ ನೀಡುವ ಪ್ರಶ್ನೆಯೇ ಇಲ್ಲ ಎಂದರು.

17 ವರ್ಷಗಳ ಹಳೆಯ ಪ್ರಕರಣವೊಂದರಲ್ಲಿ ಬ್ಯಾನರ್ಜಿ ವಿರುದ್ಧದ ಬಂಧನ ವಾರೆಂಟ್ ಜಾರಿಗೆ ತರುವಲ್ಲಿ ತಾರತಮ್ಯ ಅನುಸರಿಸಲಾಗುತ್ತಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೇಷಿ ಅವರಿಗೆ ಉತ್ತರ 24 ಪರಗಣ ಜಿಲ್ಲೆಯ ಸಿಪಿಎಂ ಸದಸ್ಯ ಅಮಿತಾವ ನಂದಿ ದೂರು ಸಲ್ಲಿಸಿದ್ದರು.

1994ರಲ್ಲಿ ಬರಾಸತ್‌ನಲ್ಲಿ ನಡೆದಿದ್ದ ಗಲಭೆಯಲ್ಲಿ ಬ್ಯಾನರ್ಜಿ ಮತ್ತು ಇತರರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಈ ಸಂಬಂಧ ಬಂಧನ ವಾರೆಂಟ್ ಇದ್ದರೂ ಅದನ್ನು ಜಾರಿಗೆ ತರಲಾಗುತ್ತಿಲ್ಲ. ಇತರ ಹಲವು ಜಾಮೀನು ರಹಿತ ಬಂಧನ ವಾರೆಂಟುಗಳು ಕೂಡ ಇವೆ. ಇವೆಲ್ಲವನ್ನೂ ತಕ್ಷಣವೇ ಜಾರಿಗೆ ತರುವಂತೆ ಆದೇಶ ನೀಡಬೇಕು ಎಂದು ಸಿಪಿಎಂ ಮನವಿ ಮಾಡಿಕೊಂಡಿತ್ತು.

ಸಿಪಿಎಂ ದೂರಿಗೆ ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುಕುಲ್ ರಾಯ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. 17 ವರ್ಷಗಳಿಂದ ಯಾವುದೇ ಕ್ರಮ ಕೈಗೊಳ್ಳದಂತೆ ಪೊಲೀಸರನ್ನು ತಡೆದಿರುವುದಾದರೂ ಯಾರು ಎಂದು ಅವರು ಪ್ರಶ್ನಿಸಿದ್ದಾರೆ.

ಪಶ್ಚಿಮ ಬಂಗಾಲ ವಿಧಾನಸಭೆಯ ಪ್ರತಿಪಕ್ಷದ ನಾಯಕ ಪಾರ್ಥ ಚಟರ್ಜಿ ಸರಕಾರಕ್ಕೆ ಸವಾಲು ಹಾಕಿದ್ದಾರೆ.

ಮಮತಾ ಬ್ಯಾನರ್ಜಿಯವರನ್ನು ಬುದ್ಧದೇವ್ ಭಟ್ಟಾಚಾರ್ಯ ಅವರ ಪೊಲೀಸರು ಯಾಕೆ ಬಂಧಿಸಿಲ್ಲ? ಅವರಿಗೆ ನಿಜವಾಗಿಯೂ ಧೈರ್ಯ ಇರುವುದೇ ಆದರೆ ಬ್ಯಾನರ್ಜಿಯವರನ್ನು ಬಂಧಿಸಲಿ ಎಂದು ಹೇಳಿದ್ದಾರೆ.

Share this Story:

Follow Webdunia kannada