ಕೇಂದ್ರ ಬಜೆಟ್ ಮಂಡನೆಗೆ ಕ್ಷಣಗಣನೆ; ಜನಪರವಾಗಲಿದೆಯೇ?
ನವದೆಹಲಿ , ಸೋಮವಾರ, 28 ಫೆಬ್ರವರಿ 2011 (09:23 IST)
ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಕೇಂದ್ರ ಸರಕಾರ ಸೋಮವಾರ 2011-12ನೇ ಸಾಲಿನ ಚುನಾವಣಾ ಬಜೆಟ್ ಮಂಡಿಸಲು ಕ್ಷಣಗಣನೆ ಆರಂಭಗೊಂಡಿದ್ದು, ವಿತ್ತ ಸಚಿವ ಪ್ರಣಬ್ ಮುಖರ್ಜಿ 6ನೇ ಬಾರಿ ಕೇಂದ್ರ ಬಜೆಟ್ ಮಂಡಿಸಲು ಸಜ್ಜಾಗಿದ್ದಾರೆ.ಕರ ಭಾರದಿಂದ ಸ್ವಲ್ಪ ಇಳಿಕೆ, ವೇತನ ತೆರಿಗೆಯಲ್ಲಿ ಕಡಿತ, ರೈತರಿಗೆ ವಿಶೇಷ ಆದ್ಯತೆ, ಬೆಲೆ ಏರಿಕೆಗೆ ಕಡಿವಾಣ ಇವು ಈ ಸಲದ ಕೇಂದ್ರ ಬಜೆಟ್‌ನ ಪ್ರಮುಖ ಅಂಶಗಳಾಗಲಿವೆ ಎಂದು ಮೂಲಗಳು ತಿಳಿಸಿವೆ.ಇಂದು ಲೋಕಸಭೆಯಲ್ಲಿ ವಿತ್ತ ಸಚಿವ ಪ್ರಣಬ್ ಮುಖರ್ಜಿ 2011-12ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಹೊರೆಯಾಗದಂತಹ ಬಜೆಟ್ ಕೇಂದ್ರ ಮಂಡಿಸಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.ಕೇರಳ, ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು ಹಾಗೂ ಪುದುಚೇರಿ ರಾಜ್ಯ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಕೇಂದ್ರ ಸರಕಾರ ಯಾವ ಗಿಮಿಕ್ ಅನುಸರಿಸಲಿದೆ ಎಂಬ ಕುತೂಹಲ ಹುಟ್ಟು ಹಾಕಿದೆ. ಆದಾಯ ತೆರಿಗೆ ಮಿತಿಯನ್ನು 1.60 ಲಕ್ಷದಿಂದ 2ಲಕ್ಷಕ್ಕೆ ಏರಿಸುವ ಸಾಧ್ಯತೆ ಇದ್ದು, ನೇರ ತೆರಿಗೆದಾರರ ಆದಾಯ ಮಿತಿಯನ್ನು ಹೆಚ್ಚಿಸುವ ಸಾಧ್ಯತೆಯೂ ಇದೆ.ಉದ್ಯಮದಾರರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಸಲುವಾಗಿ ಬಾಂಡ್ ಮಾದರಿಯ ತೆರಿಗೆ ಮುಕ್ತ ಯೋಜನೆ ಜಾರಿಯೂ ಈ ಬಜೆಟ್‌ನಲ್ಲಿ ಮಂಡನೆಯಾಗಬಹುದು.ಆರ್ಥಿಕ ಹಿಂಜರಿತ, ಹಣದುಬ್ಬರ, ಆಹಾರ ಪದಾರ್ಥಗಳ ಬೆಲೆ ಏರಿಕೆ, ಕೈಗಾರಿಕಾ ಬೆಳವಣಿಗೆ, ಮೂಲ ಸೌಕರ್ಯಗಳನ್ನು ಗಮನದಲ್ಲಿಟ್ಟುಕೊಂಡು ಪ್ರಣಬ್ ಮುಖರ್ಜಿ ಬಜೆಟ್ ಮಂಡಿಸಲಿದ್ದಾರೆ. ಸಕಾಲದಲ್ಲಿ ಸಾಲ ಹಿಂದಿರುಗಿಸುವ ರೈತರಿಗೆ ಇನ್ನು ಮುಂದೆ ಶೇ.4ರ ಬಡ್ಡಿ ದರದಲ್ಲಿ ಸಾಲ ನೀಡಲು ಕೇಂದ್ರ ಸರಕಾರ ನಿರ್ಧರಿಸುವ ಸಾಧ್ಯತೆ ಇದೆ.