Select Your Language

Notifications

webdunia
webdunia
webdunia
webdunia

ಕುಡುಕ ಅಪ್ಪನ ವಿರುದ್ಧ 12ರ ಹುಡುಗಿಯಿಂದ ದೂರು, ಬಂಧನ

ಕುಡುಕ ತಂದೆ
ಕೆವಾಡಿಯಾ , ಭಾನುವಾರ, 20 ಮಾರ್ಚ್ 2011 (17:30 IST)
ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ಹೆತ್ತವರದ್ದು. ಆದರೆ ಹೆತ್ತವರೇ ಕಿರಿಕಿರಿ ವಾತಾವರಣವನ್ನು ಸೃಷ್ಟಿಸಿದರೆ..? ಅದಕ್ಕೆ ಗುಜರಾತ್ ಬಾಲೆಯೊಬ್ಬಳು ಕಂಡುಕೊಂಡ ಮಾರ್ಗ ಪೊಲೀಸರಿಗೆ ದೂರು ನೀಡುವುದು.

ಹೌದು, ಗುಜರಾತಿನ ಕೆವಾಡಿಯಾ ಎಂಬಲ್ಲಿನ ಧಮಾದ್ರ ಗ್ರಾಮದ 12ರ ಹರೆಯದ ಬಾಲಕಿ ತನ್ನ ತಂದೆಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ಕುಡುಕ ತಂದೆ ವಿದ್ಯಾಭ್ಯಾಸಕ್ಕೆ ತೊಂದರೆಯನ್ನುಂಟು ಮಾಡುತ್ತಿದ್ದಾನೆ, ಪರೀಕ್ಷೆಗೆ ಓದಲು ಸಮಸ್ಯೆಯಾಗುತ್ತಿದೆ ಎಂದು ದೂರಿದ್ದಾಳೆ.

ಎಫ್ಐಆರ್ ದಾಖಲಿಸಿರುವ ಪೊಲೀಸರು, ಕುಡುಕ ಅಪ್ಪನನ್ನು ಬಂಧಿಸಿದ್ದಾರೆ.

ಏಳನೇ ತರಗತಿಯಲ್ಲಿ ಓದುತ್ತಿರುವ ಈ ವಿದ್ಯಾರ್ಥಿನಿಯ ಹೆಸರು ಶೋಭನಾ. ಸುಮಾರು 12 ಕಿಲೋ ಮೀಟರ್ ದೂರ ಸೈಕಲ್ ತುಳಿದುಕೊಂಡು ಏಕಾಂಗಿಯಾಗಿ ಶನಿವಾರ ಕೆವಾಡಿಯಾ ಪೊಲೀಸ್ ಠಾಣೆಗೆ ಬಂದ ಹುಡುಗಿ, ತಂದೆಯ ವಿರುದ್ಧ ದೂರು ದಾಖಲಿಸಿದಳು.

ನನ್ನ ಪರೀಕ್ಷೆಗಳು ಹತ್ತಿರ ಬರುತ್ತಿವೆ. ಆದರೆ ತಂದೆ ಕುಡಿದು ಮನೆಯವರ ಜತೆ ಗಲಾಟೆ ಮಾಡುವುದರಿಂದ ನನಗೆ ಓದಲು ಸಾಧ್ಯವಾಗುತ್ತಿಲ್ಲ. ತೊಂದರೆಯಾಗುತ್ತಿದೆ. ತಂದೆ ಪ್ರತಿದಿನ ಕುಡಿಯುತ್ತಾರೆ. ಬಳಿಕ ಗಲಾಟೆ ಮಾಡುತ್ತಾರೆ ಎಂದು ದೂರಿನಲ್ಲಿ ಶೋಭನಾ ನಮೂದಿಸಿದ್ದಾಳೆ.

ಪ್ರಕರಣ ದಾಖಲಿಸಿರುವ ಪೊಲೀಸರು, ಅಪ್ಪ ಚಂದು ತದ್ವಿಯನ್ನು ಬಂಧಿಸಿದ್ದಾರೆ. ಹುಡುಗಿಯ ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣ ಸೃಷ್ಟಿಸುವಂತೆ ಮನೆಯವರಿಗೆ ಸೂಚನೆ ನೀಡಿದ್ದಾರೆ.

Share this Story:

Follow Webdunia kannada