Select Your Language

Notifications

webdunia
webdunia
webdunia
webdunia

ಕಾಸಿಗಾಗಿ ಓಟು; ಪ್ರಧಾನಿ ವಿರುದ್ಧ ಬಿಜೆಪಿಯಿಂದ ಹಕ್ಕುಚ್ಯುತಿ

ಬಿಜೆಪಿ
ನವದೆಹಲಿ , ಮಂಗಳವಾರ, 22 ಮಾರ್ಚ್ 2011 (13:39 IST)
ಕಾಸಿಗಾಗಿ ಓಟು ಪ್ರಕರಣದ ಕುರಿತು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಸಂಸತ್ತಿನ ದಾರಿ ತಪ್ಪಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಿರುವ ಪ್ರಮುಖ ಪ್ರತಿಪಕ್ಷ ಬಿಜೆಪಿ, ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸಿದೆ.

2008ರ ಜುಲೈ ತಿಂಗಳಲ್ಲಿನ ನಡೆದ ವಿಶ್ವಾಸ ಮತದ ಸಂದರ್ಭದಲ್ಲಿ ಯಾವುದೇ ಸಂಸದರಿಗೆ ಲಂಚ ನೀಡಿರಲಿಲ್ಲ ಎಂದು ಪ್ರಧಾನಿಯವರು ಕಳೆದ ವಾರ ಸದನಕ್ಕೆ ಹೇಳಿಕೆ ನೀಡಿದ್ದರು.

ಇದರಿಂದ ಕುಪಿತಗೊಂಡಿದ್ದ ಬಿಜೆಪಿ, ಇಂದು ಪ್ರಧಾನಿ ವಿರುದ್ಧ ಹಕ್ಕುಚ್ಯುತಿ ಮಂಡಿಸಿತು. ಲೋಕಸಭೆಯ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರು ಹಕ್ಕುಚ್ಯುತಿ ಮಂಡನೆಯ ನೊಟೀಸನ್ನು ನೀಡಿದರು. ಇದನ್ನು ತಾನು ಪರಿಶೀಲನೆ ನಡೆಸುವುದಾಗಿ ಸ್ಪೀಕರ್ ಮೀರಾ ಕುಮಾರ್ ಸದನಕ್ಕೆ ತಿಳಿಸಿದರು.

ಬಿಜೆಪಿಯ ಹಕ್ಕುಚ್ಯುತಿ ಮಂಡನೆಯನ್ನು ಎಡಪಕ್ಷಗಳು ಕೂಡ ಬೆಂಬಲಿಸಿವೆ. ಬಿಜೆಪಿ ಹಕ್ಕುಚ್ಯುತಿ ನಿರ್ಣಯವನ್ನು ಕಾಂಗ್ರೆಸ್ ಸದಸ್ಯರು ತೀವ್ರವಾಗಿ ವಿರೋಧಿಸಿದರು. ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಲೋಕಸಭೆಯಲ್ಲಿ ಭಾರೀ ಕೋಲಾಹಲ ಸೃಷ್ಟಿಯಾಯಿತು.

ಈ ವಿಚಾರದ ಕುರಿತು ಸದನದಲ್ಲಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಬಿಜೆಪಿ ಮತ್ತು ಎಡಪಕ್ಷಗಳು ಪಟ್ಟು ಹಿಡಿದಾಗ ಭಾರೀ ಗದ್ದಲ ಉಂಟಾಯಿತು. ಹಣಕಾಸು ಮಸೂದೆಗೆ ತಾವು ಅಡ್ಡಿ ಮಾಡುವುದಿಲ್ಲ, ಆದರೆ ಪ್ರಧಾನಿ ಹೇಳಿಕೆಯ ಕುರಿತು ಚರ್ಚೆ ನಡೆಯಬೇಕು ಎಂದು ಬಿಜೆಪಿ ಪಟ್ಟು ಹಿಡಿಯಿತು.

ಇದೇ ವೇಳೆ ಸುಷ್ಮಾ ಸ್ವರಾಜ್ ವಿರುದ್ಧ ಹಕ್ಕುಚ್ಯುತಿ ಮಂಡಿಸುವ ನಿರ್ಧಾರವನ್ನು ಕಾಂಗ್ರೆಸ್ ಪ್ರಕಟಿಸಿದೆ. ವಿಕಿಲೀಕ್ಸ್ ರಹಸ್ಯ ದಾಖಲೆ ಕುರಿತು ಪ್ರಧಾನಿ ಹೇಳಿಕೆ ನೀಡಿದ ನಂತರ ಸ್ಪೀಕರ್ ಮೀರಾ ಕುಮಾರ್ ಅವರ ಆದೇಶವನ್ನು ಧಿಕ್ಕರಿಸಿ ಪ್ರಧಾನಿಯವರಿಂದ ಸ್ಪಷ್ಟನೆ ಕೇಳಿದ್ದಕ್ಕಾಗಿ ಹಕ್ಕುಚ್ಯುತಿ ಮಂಡಿಸುವುದಾಗಿ ಹೇಳಿದೆ.

ಸಂಸತ್ತಿನ ನಿಯಮಗಳ ಪ್ರಕಾರ, ಪ್ರತಿಪಕ್ಷಗಳ ಒತ್ತಾಯದ ಮೇರೆಗೆ ಲೋಕಸಭೆಯಲ್ಲಿ ಸಚಿವರು ಅಥವಾ ಪ್ರಧಾನ ಮಂತ್ರಿ ಹೇಳಿಕೆ ನೀಡಿದ ನಂತರ ಅವರಿಂದ ಸ್ಪಷ್ಟನೆಯನ್ನು ಕೇಳುವಂತಿಲ್ಲ. ಇದಕ್ಕೆ ಅವಕಾಶ ಇರುವುದು ರಾಜ್ಯಸಭೆಯಲ್ಲಿ ಮಾತ್ರ.

ಪ್ರಧಾನಿ ಹೇಳಿಕೆ ಕುರಿತು ರಾಜ್ಯಸಭೆಯಲ್ಲಿ ಕೂಡ ಭಾರೀ ಕೋಲಾಹಲ ಸೃಷ್ಟಿಯಾಗಿತ್ತು. ಇದರಿಂದ ಕಲಾಪವನ್ನು ಕೆಲ ಕಾಲ ಮುಂದೂಡಲಾಯಿತು.

Share this Story:

Follow Webdunia kannada