ಕಳೆದ ವರ್ಷ ಕಳಂಕಿತ ವ್ಯಕ್ತಿಯೊಬ್ಬನಿಗೆ ಪದ್ಮಭೂಷಣ ಗೌರವವನ್ನು ನೀಡುವ ಸಂದರ್ಭದಲ್ಲೇ ಭಾರೀ ವಿವಾದ ಸೃಷ್ಟಿಯಾಗಿತ್ತು. ಪ್ರತಿಪಕ್ಷಗಳು ಸರಕಾರದ ನಿರ್ಧಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದವು. ಅಚ್ಚರಿಯೆನ್ನುವಂತೆ ಅದೇ ವ್ಯಕ್ತಿಯ ಹೆಸರು ಕಾಂಗ್ರೆಸ್‌ನ 'ಕಾಸಿಗಾಗಿ ಓಟು' ಹಗರಣದಲ್ಲೂ ಕೇಳಿ ಬಂದಿದೆ. ಆ ವ್ಯಕ್ತಿಯ ಹೆಸರು ಸಂತಾ ಸಿಂಗ್ ಛತ್ವಾಲ್!
ಭಾರತೀಯ ಸ್ಟೇಟ್ ಬ್ಯಾಂಕ್‌ಗೆ ಸುಮಾರು 41 ಕೋಟಿ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ಸಿಬಿಐಯಿಂದ ಬಂಧನಕ್ಕೊಳಗಾಗಿದ್ದ ಅನಿವಾಸಿ ಭಾರತೀಯ ಛತ್ವಾಲ್ ಕ್ರಿಮಿನಲ್ ಕೇಸು ಎದುರಿಸಿದವರು. ಅಂತಹ ವ್ಯಕ್ತಿಗೆ 2010ರಲ್ಲಿ ರಾಷ್ಟ್ರಪತಿ ಪ್ರತಿಭಾ ಸಿಂಗ್ ಪಾಟೀಲ್ ದೇಶದ ಮೂರನೇ ಅತ್ಯುನ್ನತ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದರು.
ಈಗ ಬಂದಿರುವ ಆರೋಪವೇನು?
2008ರ ಜುಲೈ 17ರಂದು ಅಮೆರಿಕಾ ರಾಯಭಾರ ಕಚೇರಿಯ ಅಧಿಕಾರಿ ಸ್ಟೀವನ್ ವೈಟ್ ಅಮೆರಿಕಾಕ್ಕೆ ಕಳುಹಿಸಿದ್ದ ದಾಖಲೆಗೆ ಸಂಬಂಧಪಟ್ಟ ವಿವಾದವಿದು. ಅದರ ಪ್ರಕಾರ ಕಾಂಗ್ರೆಸ್ ನಾಯಕ ಸತೀಶ್ ಶರ್ಮಾ, ಓಟಿಗಾಗಿ ಕಾಸು ಕೊಡುತ್ತಿರುವುದನ್ನು ಒಪ್ಪಿಕೊಂಡಿದ್ದರು. ಈ ಪ್ರಕರಣದಲ್ಲಿ ಸತೀಶ್ ಶರ್ಮಾ ಅವರು ಸಂತಾ ಛತ್ವಾಲ್ ಹೆಸರನ್ನೂ ಉಲ್ಲೇಖಿಸಿದ್ದರು.
ಎರಡು ಹಣದ ಪೆಟ್ಟಿಗೆಗಳನ್ನು ಅಮೆರಿಕಾ ರಾಯಭಾರ ಕಚೇರಿಯ ನೌಕರನಿಗೆ ತೋರಿಸಿದ್ದ ಸೋನಿಯಾ ಗಾಂಧಿ ಆಪ್ತ ಸತೀಶ್ ಶರ್ಮಾ, ಭಾರತ-ಅಮೆರಿಕಾ ನಡುವಿನ ಅಣು ಒಪ್ಪಂದದ ಸಂಬಂಧ ಯುಪಿಎ ಸರಕಾರ ಎದುರಿಸುತ್ತಿರುವ ವಿಶ್ವಾಸ ಮತ ಗೆಲ್ಲಲು ಕೆಲವು ಸಂಸದರಿಗೆ 50ರಿಂದ 60 ಕೋಟಿ ರೂಪಾಯಿಗಳನ್ನು ಪಾವತಿ ಮಾಡಲು ಸಿದ್ಧವಾಗಿದೆ ಎಂದಿದ್ದರು.
ಅನಿವಾಸಿ ಉದ್ಯಮಿ ಸಂತಾ ಛತ್ವಾಲ್ ಮತ್ತು ಇತರರ ಮೂಲಕ ಅಕಾಲಿದಳದ (8 ಸಂಸದರು) ಜತೆ ಕೆಲಸ ಕುದುರಿಸಲು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಮತ್ತು ಇತರರು ಯತ್ನಿಸಿದ್ದರು. ಆದರೆ ಅದು ಕೈಗೊಡಲಿಲ್ಲ ಎಂದೂ ಸತೀಶ್ ಶರ್ಮಾ ಹೇಳಿದ್ದರು.
ನಾನು ಭಾರತದಲ್ಲಿ ಇರಲೇ ಇಲ್ಲ: ಛತ್ವಾಲ್
ನಿರೀಕ್ಷೆಯಂತೆ ಅನಿವಾಸಿ ಭಾರತೀಯ ಹೊಟೇಲ್ ಉದ್ಯಮಿ ಸಂತಾ ಸಿಂಗ್ ಛತ್ವಾಲ್ ತದ್ವಿರುದ್ಧ ಹೇಳಿಕೆ ನೀಡಿದ್ದಾರೆ. ವಿಕಿಲೀಕ್ಸ್ ಆರೋಪಗಳಿಂದ ನುಣುಚಿಕೊಂಡಿದ್ದಾರೆ. ನಾನು ವಿಶ್ವಾಸ ಮತದ ಸಂದರ್ಭದಲ್ಲಿ ಭಾರತದಲ್ಲಿ ಇರಲೇ ಇಲ್ಲ, ಆಗ ನಾನು ಅಮೆರಿಕಾದಲ್ಲಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ (ಅಣು ಒಪ್ಪಂದ ವಿವಾದ ತಾರಕಕ್ಕೇರಿದ ಸಂದರ್ಭ) ನಾನು ಭಾರತದಲ್ಲಿ ಇರಲೇ ಇಲ್ಲ. ನಾನು ಅಮೆರಿಕಾದಲ್ಲೇ ಇದ್ದೆ. ನಾನು ಪ್ರಧಾನ ಮಂತ್ರಿಯವರ ಕಚೇರಿ, ಅಕಾಲಿದಳ ಸೇರಿದಂತೆ ಯಾರ ಜತೆಗೂ ಸಂಪರ್ಕ ಹೊಂದಿರಲಿಲ್ಲ. ವಿಕಿಲೀಕ್ಸ್ ಆರೋಪ ನನಗೆ ದೊಡ್ಡ ಅಚ್ಚರಿ ತಂದಿದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿಯ ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನ ಮಂತ್ರಿಯಾಗಿದ್ದಾಗ ನಾನು ಬಿಲ್ ಕ್ಲಿಂಟನ್ ಅವರಲ್ಲಿ ಭಾರತದ ಪರವಾಗಿ ಕೆಲಸ ಮಾಡಿದ್ದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಭಾರತ-ಅಮೆರಿಕಾ ಪರಮಾಣು ಒಪ್ಪಂದದ ಪರವಾಗಿ ನಿರಂತರ ಶ್ರಮವಹಿಸಿದ್ದೆ. ಎಲ್ಲಾ ರಾಜಕೀಯ ಪಕ್ಷಗಳು ಮತ್ತು ನಾಯಕರುಗಳು ನನಗೆ ಗೊತ್ತು. ಆದರೆ ಭಾರತದ ಆಂತರಿಕ ರಾಜಕೀಯದಲ್ಲಿ ನಾನು ಆಸಕ್ತಿ ಹೊಂದಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಬಹುದು ಎಂದಿದ್ದಾರೆ.