Select Your Language

Notifications

webdunia
webdunia
webdunia
webdunia

ಕಾಶ್ಮೀರದಲ್ಲಿ ಮಾಡಿದಂತೆ ಲಿಬಿಯಾದಲ್ಲೂ ಮಾಡ್ತಿದ್ದೇವೆ!: ಗಡಾಫಿ

ಕಾಶ್ಮೀರ
ನವದೆಹಲಿ , ಶನಿವಾರ, 5 ಮಾರ್ಚ್ 2011 (16:44 IST)
ಭಾರತ ಸರಕಾರ ಕಾಶ್ಮೀರಿಗಳ ಮೇಲೆ ಕೈಗೊಳ್ಳುತ್ತಿರುವ ಕ್ರಮಗಳು ಹಾಗೂ ಲಿಬಿಯಾದಲ್ಲಿ ತನ್ನ ಜನಗಳ ವಿರುದ್ಧ ಕೈಗೊಂಡಿರುವ ಕ್ರಮಗಳು ಎರಡೂ ಒಂದೇ ಎಂದು ಲಿಬಿಯಾ ಅಧ್ಯಕ್ಷ ಮೊಮ್ಮರ್ ಗಡಾಫಿ ಕಳೆದ ವಾರ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗೆ ಹೇಳುವ ಮೂಲಕ ತನ್ನ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.!

ಲಿಬಿಯಾದಲ್ಲಿ ಸಿವಿಲ್ ಯುದ್ಧ ಆರಂಭವಾಗುತ್ತಿದ್ದಂತೆಯೇ ತನ್ನ ಕ್ರಮಗಳನ್ನು ಬೆಂಬಲಿಸುವಂತೆ ಕೋರಿ ವಿಶ್ವಸಂಸ್ಥೆ ಸಭೆಗೂ ಮುನ್ನ ಗಡಾಫಿ ಭಾರತದ ಪ್ರಧಾನಿ ಸಿಂಗ್ ಅವರಲ್ಲಿ ಈ ರೀತಿ ವಿನಂತಿಸಿಕೊಂಡಿದ್ದರು. ಲಿಬಿಯಾದಲ್ಲಿನ ಬೆಳವಣಿಗೆ ಕುರಿತು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಫೆಬ್ರುವರಿ 26ರಂದು ಚರ್ಚೆ ನಡೆದಿತ್ತು.

ಗಡಾಫಿಯನ್ನು ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಲ್ಲಿ ಹಾಜರುಪಡಿಸುವಂತೆ ಆಫ್ರಿಕನ್ ಮತ್ತು ಯುರೋಪಿಯನ್ ದೇಶಗಳು ಆಗ್ರಹಿಸಿದ್ದು, ವಿಶ್ವಸಂಸ್ಥೆಯಲ್ಲಿ ಲಿಬಿಯಾ ರಾಯಭಾರಿ ಕೂಡ ಪ್ರತಿಭಟನಾಕಾರರ ಜೊತೆ ಕೈಜೋಡಿಸಿದ ನಂತರ ಗಡಾಫಿ ಅವರು ಲಿಬಿಯಾವನ್ನು ಬೆಂಬಲಿಸುವಂತೆ ಭಾರತಕ್ಕೆ ಮನವಿ ಮಾಡಿಕೊಂಡಿದ್ದರು.

ಲಿಬಿಯಾ ವಿರುದ್ಧ ದಿಗ್ಬಂಧನ ವಿಧಿಸಲು ವಿಶ್ವಸಂಸ್ಥೆ ಭದ್ರತಾ ಮಂಡಳಿ ನಿರ್ಧರಿಸಿದ್ದು, ಈ ಸಂದರ್ಭದಲ್ಲಿ ಭಾರತ ಲಿಬಿಯಾ ಪರ ಮತ ಚಲಾಯಿಸುವಂತೆ ಗಡಾಫಿ ಕೋರಿದ್ದರು. ಆದರೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸದಸ್ಯರು ಸಾಮೂಹಿಕ ನಿರ್ಧಾರದೊಂದಿಗೆ ಲಿಬಿಯಾ ಮೇಲೆ ನಿರ್ಬಂಧ ಹೇರಿದ್ದನ್ನು ಇಲ್ಲಿ ಸ್ಮರಿಸಬಹುದು.

ಕಳೆದ 41ವರ್ಷದಿಂದಲೂ ಲಿಬಿಯಾದ ಅಧ್ಯಕ್ಷಗಾದಿಯಲ್ಲಿರುವ ಸರ್ವಾಧಿಕಾರಿ ಮೊಮ್ಮರ್ ಗಡಾಫಿ ಪದತ್ಯಾಗ ಮಾಡುವಂತೆ ಆಗ್ರಹಿಸಿ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ತಾನು ಯಾವುದೇ ಕಾರಣಕ್ಕೂ ಅಧ್ಯಕ್ಷಪಟ್ಟದಿಂದ ಕೆಳಗಿಳಿಯಲಾರೆ ಎಂದು ಪಟ್ಟು ಹಿಡಿದಿದ್ದಾರೆ. ಏತನ್ಮಧ್ಯೆ ಗಡಾಫಿ ನೇತೃತ್ವದ ಪಡೆ ಪ್ರತಿಭಟನಾಕಾರರನ್ನು ಹತ್ತಿಕ್ಕಲು ಗುಂಡಿನ ದಾಳಿ ನಡೆಸುತ್ತಿದೆ.

Share this Story:

Follow Webdunia kannada