ಯುವ ಜನಾಂಗ ಟಿವಿ ಮತ್ತು ಸಿನಿಮಾಗಳಿಂದ ದೂರವಿದ್ದು, ಕಾಂಡೋಂ ಬಳಕೆಯೇ ಲೈಂಗಿಕ ಅರಾಜಕತೆಗೆ ಕಾರಣ ಎಂಬ ಜಮೀಯತ್ ಉಲೇಮಾ ಇ ಹಿಂದ್‌ನ ಆಡಳಿತ ಮಂಡಳಿ ನಿರ್ಣಯ ಕೈಗೊಂಡಿರುವುದನ್ನು ಮುಸ್ಲಿಂ ಬುದ್ಧಿಜೀವಿಗಳು ಬಲವಾಗಿ ಖಂಡಿಸಿದ್ದಾರೆ.
ಯುವ ಜನತೆ ಧಾರ್ಮಿಕ ಕಟ್ಟುಪಾಡುಗಳಿಗೆ ಬದ್ಧವಾಗುವಂತೆ ಹಾಗೂ ಟಿವಿ, ಸಿನಿಮಾ ಮುಂತಾದ "ನೈತಿಕವಾಗಿ ಭ್ರಷ್ಟ ಪ್ರಭಾವಗಳಿಂದ" ದೂರವಿರುವಂತೆ ಮನವೊಲಿಸುವ ನಿಟ್ಟಿನಲ್ಲಿ ನಗರಗಳಲ್ಲಿ ಮತ್ತು ಹಳ್ಳಿಗಳಲ್ಲಿ ಸುಧಾರಣಾ ಮಂಡಳಿಗಳನ್ನು ರಚಿಸಬೇಕು ಎಂದು ಜಮೀಯತ್ ಹೇಳಿತ್ತು. ಮುಸ್ಲಿಂ ಜೀವನ ಶೈಲಿಯನ್ನು ಪ್ರಚುರಪಡಿಸುವ ಪೀಸ್ ಟೀವಿ ಮತ್ತು ವಿನ್ ಟೀವಿ ಮುಂತಾದ ಚಾನೆಲ್‌ಗಳು ಕೂಡ ನಿಷೇಧದ ವ್ಯಾಪ್ತಿಗೆ ಬರುವುದರಿಂದ, ಇದನ್ನು ಹಲವರು ವಿರೋಧಿಸುತ್ತಿದ್ದಾರೆ.
ಏಡ್ಸ್ ತಡೆಗೆ ಕಾಂಡೋಂ ಬಳಸಬೇಕೆಂಬ ಪ್ರಚಾರವೇ ಲೈಂಗಿಕ ಅನಾಚಾರಗಳ ಮೂಲ ಕಾರಣ ಎಂದೂ ಹೇಳಿದೆ ಈ ನಿರ್ಣಯ. ಈ ಕುರಿತು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಗೆ ಹಲವಾರು ಸಂದರ್ಭದಲ್ಲಿ ನೆರವಾಗಿರುವ ಮುಂಬೈ ವಕೀಲ ವೈ.ಎಚ್. ಮುಚ್ಚಾಲ ಅವರು ಹೇಳುವುದು ಹೀಗೆ: "ಕಾಂಡೋಂಗಳು ಮತ್ತು ಗರ್ಭನಿರೋಧಕ ಮಾತ್ರೆಗಳನ್ನು ಜನಪ್ರಿಯಗೊಳಿಸುವ ಪ್ರಯತ್ನಗಳ ಹಿಂದೆ ಅವುಗಳ ತಯಾರಿಕಾ ಸಂಸ್ಥೆಗಳ ಕೈವಾಡವಿದೆ. ಕೆಲವೊಮ್ಮೆ ನಮ್ಮ ಪ್ರಾಚೀನ ಧಾರ್ಮಿಕ ಮೌಲ್ಯಗಳು ನಶಿಸಿಹೋಗಲು ವಾಣಿಜ್ಯಾತ್ಮಕ ಹಿತಾಸಕ್ತಿಗಳೂ ಕಾರಣವಾಗುತ್ತವೆ" ಎನ್ನುತ್ತಾರೆ.
ಆದರೆ ಇದಕ್ಕೆ ಜಾಮಿಯಾದ ದಲಿತ ಮತ್ತು ಅಲ್ಪಸಂಖ್ಯಾತ ಅಧ್ಯಯನ ಕೇಂದ್ರದ ಪ್ರೊ.ಮುಜ್ತಬಾ ಖಾನ್ ವಿರೋಧವಿದೆ. ಕಾಂಡೋಂ ಬಗ್ಗೆ ಜಾಗೃತಿ ಮೂಡಿಸುವ ಸರಕಾರದ ಪ್ರಯತ್ನದ ಹಿಂದೆ ವೈಜ್ಞಾನಿಕ ಕಾರಣಗಳಿವೆ. ಇದನ್ನು ಎಲ್ಲ ಸಮುದಾಯಗಳಿಗೆ ಉತ್ತೇಜಿಸಲಾಗುತ್ತದೆಯೇ ಹೊರತು, ಕೇವಲ ಮುಸಲ್ಮಾನರಿಗೆ ಮಾತ್ರ ಅಲ್ಲ. ಇದು ಸಾಮಾನ್ಯ ಜನಜಾಗೃತಿಯಷ್ಟೇ ಎಂದಿದ್ದಾರೆ ಅವರು.
ಜಮೀಯತ್ ನಿರ್ಣಯದಲ್ಲಿ ಮುಸ್ಲಿಂ ಯುವಕರು ದಾರಿ ತಪ್ಪುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿದೆ. ಮಾದಕ ದ್ರವ್ಯಕ್ಕೆ ದಾಸರಾಗುತ್ತಿದ್ದಾರೆ ಮತ್ತು ಅಶ್ಲೀಲತೆ, ಲೈಂಗಿಕ ಸ್ವೇಚ್ಛಾಚಾರ ಹೆಚ್ಚಾಗುತ್ತಿದೆ. ಇದು ತೀರಾ ಕಳವಳಕಾರಿ. ಮುಸ್ಲಿಮರು ಪಾಶ್ಚಾತ್ಯ ಸಂಸ್ಕೃತಿಯತ್ತ ಸೆಳೆಯಲ್ಪಡುತ್ತಿದ್ದಾರೆ. ಇದು ಇಸ್ಲಾಮಿಕ್ ಅನನ್ಯತೆಗೆ ಬಿಕ್ಕಟ್ಟು ತಂದಿತ್ತಿದೆ ಎಂದು ಈ ನಿರ್ಣಯದಲ್ಲಿ ಎಚ್ಚರಿಕೆ ನೀಡಲಾಗಿದೆ.
ಇದಲ್ಲದೆ ಆಡಂಬರದ ಮದುವೆ ಮತ್ತು ವರದಕ್ಷಿಣೆಯ ಪಿಡುಗನ್ನೂ ನಿವಾರಿಸಬೇಕಾಗಿದೆ ಎಂದು ನಿರ್ಣಯದಲ್ಲಿ ಹೇಳಲಾಗಿದೆ.