ಕಾಂಗ್ರೆಸ್‌ಗೆ 63 ಸೀಟು: ಕೊನೆಗೂ ಮಣಿಯಿತು ಡಿಎಂಕೆ
ನವದೆಹಲಿ , ಮಂಗಳವಾರ, 8 ಮಾರ್ಚ್ 2011 (18:52 IST)
ತಮಿಳುನಾಡು ವಿಧಾನಸಭೆ ಚುನಾವಣೆಯ ಸ್ಥಾನ ಹೊಂದಾಣಿಕೆಗಾಗಿ ಯುಪಿಎ ಮಂತ್ರಿಮಂಡಲದಿಂದ ಹೊರಬರುವ ಬೆದರಿಕೆಗಳನ್ನೇನೂ ಒಡ್ಡಬೇಕಾಗಿಲ್ಲ ಎಂದು ಕಾಂಗ್ರೆಸ್ ಪಕ್ಷವು ಡಿಎಂಕೆಗೆ ಸಂದೇಶ ರವಾನಿಸಿರುವ ಬೆನ್ನಲ್ಲೇ, ದಿನವಿಡೀ ನಡೆದ ಮಾತುಕತೆಗಳಿಗೆ ಮಂಗಳವಾರ ಸಾಯಂಕಾಲ ಫಲ ಸಿಕ್ಕಿದ್ದು, ಕಾಂಗ್ರೆಸ್ ಬೇಡಿಕೆಗೆ ಕೊನೆಗೂ ಡಿಎಂಕೆ ಮಣಿದಿದೆ.ಕಾಂಗ್ರೆಸ್ ಕೇಳಿದ್ದ 63 ಸೀಟುಗಳನ್ನು ನೀಡಲು ಡಿಎಂಕೆ ಒಪ್ಪಿದ್ದು, ಉಭಯ ಬಣಗಳ ಮಧ್ಯೆ "ಶಾಂತಿ" ಏರ್ಪಟ್ಟಿದೆ. ಈ ಮೈತ್ರಿಕೂಟವು ಮತ್ತೆ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಎಂಬ ವಿಶ್ವಾಸವನ್ನು ಉಭಯ ಬಣಗಳ ನಾಯಕರು ವ್ಯಕ್ತಪಡಿಸಿದ್ದಾರೆ.ಇದಕ್ಕೆ ಮೊದಲು, ಬೆಳಗ್ಗೆ ನಡೆದ ಮಾತುಕತೆ ಸಂದರ್ಭ, ಸ್ಥಾನ ಹಂಚಿಕೆ ಕುರಿತ ವಿವಾದದ ಕುರಿತು ತಮ್ಮ ಪಕ್ಷದ ಅಸಹನೆಯನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಡಿಎಂಕೆಗೆ ತಲುಪಿಸಿದ್ದರು. ಕಾಂಗ್ರೆಸ್ ಜೊತೆಗೆ ಡಿಎಂಕೆ ಮುಖಂಡರಾದ ಕರುಣಾನಿಧಿ ಪುತ್ರ, ಕೇಂದ್ರ ಸಚಿವ ಎಂ.ಕೆ.ಅಳಗಿರಿ, ದಯಾನಿಧಿ ಮಾರನ್ ನಡುವೆ ನಡೆದ ಮಾತುಕತೆ ಅಪೂರ್ಣವಾಗಿತ್ತು. ಅವರಿಬ್ಬರೂ ಕಾಂಗ್ರೆಸ್‌ನ ಪ್ರಮುಖ 'ಟ್ರಬಲ್ ಶೂಟರ್' ಪ್ರಣಬ್ ಮುಖರ್ಜಿ ಜೊತೆಗೆ ಮಾತುಕತೆ ನಡೆಸಿದ್ದರು. ಆದರೆ ಸಾಯಂಕಾಲದ ಹೊತ್ತಿಗೆ ಎರಡೂ ಬಣಗಳು ಒಂದು ಒಪ್ಪಂದಕ್ಕೆ ಬಂದವು.ಮೈತ್ರಿಕೂಟದಿಂದ ಹೊರಬರುತ್ತೇನೆಂದು ಬೆದರಿಸುವ ಮತ್ತು ತಮ್ಮ ಬೇಡಿಕೆಗಳ ಬಗ್ಗೆ ಬಹಿರಂಗ ಹೇಳಿಕೆ ನೀಡುವ ಮೂಲಕ ಡಿಎಂಕೆಯು ಸಮ್ಮಿಶ್ರ ರಾಜಕೀಯ ಧರ್ಮವನ್ನು ಉಲ್ಲಂಘಿಸಿದೆ ಎಂದು ಸೋನಿಯಾ ಗಾಂಧಿ ಆಕ್ಷೇಪಿಸಿದರು ಎಂದು ಮೂಲಗಳು ತಿಳಿಸಿವೆ.ಕೇಂದ್ರದ ಮೈತ್ರಿಕೂಟದಿಂದ ಹೊರಬರುವುದು ಸಮಸ್ಯೆಗೆ ಪರಿಹಾರ ಅಲ್ಲ. ಡಿಎಂಕೆಯ ಬೆದರಿಕೆ ತಂತ್ರಗಳಿಗೆ ಮಣಿಯುವುದೂ ಇಲ್ಲ. ಮೈತ್ರಿ ಪಕ್ಷಗಳನ್ನು ತಾನು ಗೌರವಿಸುತ್ತೇನಾದರೂ, ಅಲ್ಲಿ ಪರಸ್ಪರ ಗೌರವ ಭಾವನೆ ಇರಬೇಕು ಎಂಬುದನ್ನು ಕಾಂಗ್ರೆಸ್ ಬಯಸುತ್ತಿದೆ ಎಂದಿವೆ ಕಾಂಗ್ರೆಸ್ ಮೂಲಗಳು.ಆರು ಡಿಎಂಕೆ ಸಚಿವರೆಂದರೆ, ಜವಳಿ ಸಚಿವ ದಯಾನಿಧಿ ಮಾರನ್, ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅಳಗಿರಿ, ವಿತ್ತ ರಾಜ್ಯ ಸಚಿವ ಎಸ್.ಪಳನಿಮಣಿಕ್ಕಮ್, ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ ಇಲಾಖೆಯ ರಾಜ್ಯ ಸಚಿವ ಡಿ.ನೆಪೋಲಿಯನ್, ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಎಸ್.ಜಗತ್ ರಕ್ಷಕನ್ ಹಾಗೂ ಆರೋಗ್ಯ ಇಲಾಖೆ ರಾಜ್ಯ ಸಚಿವ ಎಸ್.ಗಂಧಿಸೆಲ್ವನ್.ತಮಿಳುನಾಡಿನಲ್ಲಿ ಸ್ಪರ್ಧಿಸಲು ತಾನು ನೀಡಿದ 60ರ ಬದಲು 63 ಸೀಟು ಕೇಳಿದ ಕಾಂಗ್ರೆಸ್ ವರ್ತನೆಯಿಂದ ರೋಸಿ ಹೋಗಿ ಡಿಎಂಕೆಯು ಯುಪಿಎಯಿಂದ ಹೊರಬರಲು ಮತ್ತು ಕೇಂದ್ರಕ್ಕೆ ವಿಷಯಾಧಾರಿತ ಬೆಂಬಲ ನೀಡಲು ಕಳೆದ ಶನಿವಾರ ನಿರ್ಧರಿಸಿತ್ತು.ಡಿಎಂಕೆಯೊಳಗಿನ ಈ ಗೊಂದಲಕ್ಕೆ ಕರುಣಾನಿಧಿ ಪುತ್ರರಾದ, ತಮಿಳುನಾಡಿನ ದಕ್ಷಿಣದಲ್ಲಿ ಬಿಗಿ ಹಿಡಿತವಿರುವ ಅಳಗಿರಿ ಹಾಗೂ ಚೆನ್ನೈ ಮತ್ತು ಸುತ್ತಮುತ್ತ ಪ್ರಭಾವ ಹೊಂದಿರುವ ಸ್ಟಾಲಿನ್ ನಡುವಿನ ವೈಮನಸ್ಸು ಕಾರಣ ಎಂದು ಕಾಂಗ್ರೆಸ್ ಶಂಕಿಸುತ್ತಿದೆ.