ಕೇಂದ್ರ ಮತ್ತು ಅಸ್ಸಾಂನಲ್ಲಿನ ಆಡಳಿತ ಪಕ್ಷ ಕಾಂಗ್ರೆಸ್ ಒಂದು ಮುಳುಗುತ್ತಿರುವ ಹಡಗು. ಹೊರ ಜಿಗಿಯಲು ಬಯಸುತ್ತಿರುವ ಸಂಸದರು ಮತ್ತು ಶಾಸಕರನ್ನು ಹೊಂದಿರುವ ಮುಳುಗುತ್ತಿರುವ ಹಡಗು ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮುಖ್ತಾರ್ ಅಬ್ಬಾಸ್ ನಖ್ವಿ ಬಣ್ಣಿಸಿದರು.
ಅಸ್ಸಾಂ ರಾಜಧಾನಿ ಗುವಾಹತಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ಸಂಸದರು ಮತ್ತು ಶಾಸಕರು ಪಕ್ಷದಿಂದ ಹೊರ ಬರಲು ಯತ್ನಿಸುತ್ತಿರುವ, ಭ್ರಷ್ಟಾಚಾರದಿಂದ ಮುಳುಗಿ ಹೋಗುತ್ತಿರುವ ಹಡಗಿನ ಸ್ಥಿತಿ ರಾಜ್ಯ ಮತ್ತು ಕೇಂದ್ರದಲ್ಲಿನ ಕಾಂಗ್ರೆಸ್ ಪಕ್ಷದ್ದು ಎಂದರು.
ಅಸ್ಸಾಂ ಕಾಂಗ್ರೆಸ್ ಘಟಕವು ಐಸಿಯುವಿನಲ್ಲಿದೆ. ಐಸಿಯು (Infiltration-Corruption-Unemployment) ಎಂದರೆ ಒಳ ನುಸುಳುವಿಕೆ, ಭ್ರಷ್ಟಾಚಾರ ಮತ್ತು ನಿರುದ್ಯೋಗ. ಇಂತಹ ಗಂಭೀರ ಅನಾರೋಗ್ಯದಿಂದ ಬಳಲುತ್ತಿರುವ ಪಕ್ಷಕ್ಕೆ ಮದ್ದು ಕೊಡಲು ಒಬ್ಬ ವೈದ್ಯರ ಅಗತ್ಯವಿದೆ ಎಂದೂ ಅವರು ಲೇವಡಿ ಮಾಡಿದರು.
ಅಸ್ಸಾಂ ಜನತೆಗೆ ಬಿಜೆಪಿಯೊಂದೇ ಪರ್ಯಾಯ ಎಂದು ಪ್ರತಿಪಾದಿಸಿದ ನಖ್ವಿ, ಅತ್ಯುತ್ತಮ ಆಡಳಿತ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತವೇ ನಮ್ಮ ಚುನಾವಣಾ ಆಶ್ವಾಸನೆ ಎಂದರು.
ನಮ್ಮನ್ನು ಆರಿಸಿ ಅಧಿಕಾರಕ್ಕೆ ಬರುವಂತೆ ಮಾಡಿದಲ್ಲಿ ಭದ್ರತೆ ಮತ್ತು ಕಾನೂನು-ಸುವ್ಯವಸ್ಥೆಯಲ್ಲಿ ಸ್ಥಿರತೆಯನ್ನು ಖಚಿತಪಡಿಸುತ್ತೇವೆ ಎಂದು ಭರವಸೆ ನೀಡಿದರು.
ಕೇಂದ್ರದ ನಿಧಿಯ ಶೇ.80ಕ್ಕೂ ಹೆಚ್ಚು ಇಲ್ಲಿಗೆ ಬರದೆ ಗುಳುಂ ಆಗುತ್ತಿದೆ ಎಂದೂ ಅವರು ಆರೋಪಿಸಿದರು. ಈ ಕುರಿತು ತನಿಖೆ ನಡೆಯುವ ಅಗತ್ಯವಿದೆ ಎಂದರು.
ಯಾವುದೇ ಚುನಾವಣಾ ಪೂರ್ವ ಮೈತ್ರಿಯನ್ನು ಇದೇ ಸಂದರ್ಭದಲ್ಲಿ ಬಿಜೆಪಿ ನಾಯಕ ತಳ್ಳಿ ಹಾಕಿದರು. ಅಲ್ಲದೆ, ಪಕ್ಷದ ಆಂತರಿಕ ವರದಿಗಳ ಪ್ರಕಾರ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ 126 ಸ್ಥಾನಗಳಲ್ಲಿ 78 ಸ್ಥಾನಗಳಲ್ಲಿ ಜಯ ಗಳಿಸಲಿದೆ ಮತ್ತು ಅಸ್ಸಾಂನಲ್ಲಿ ಸ್ವಂತ ಬಲದಿಂದ ಸರಕಾರ ರಚಿಸಲಿದೆ ಎಂದು ತಿಳಿಸಿದರು.