ಉಲ್ಫಾ ಉಗ್ರರ ಜತೆ ಮಾತುಕತೆ ನಡೆಯುತ್ತಿರುವ ಮತ್ತು ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಅಸ್ಸಾಂ ರಾಜ್ಯ ಕಾಂಗ್ರೆಸ್ ಕಚೇರಿಯ ಮೇಲೆ ಗ್ರೆನೇಡ್ ದಾಳಿ ನಡೆಸಲಾಗಿದೆ. ಗುವಾಹತಿಯಲ್ಲಿನ ಕಾಂಗ್ರೆಸ್ ಪ್ರಧಾನ ಕಚೇರಿ ಮೇಲೆ ಸೋಮವಾರ ಸಂಜೆ ಈ ದಾಳಿ ನಡೆಸಲಾಗಿದ್ದು, ಕನಿಷ್ಠ ಐದು ಮಂದಿ ಗಾಯಗೊಂಡಿದ್ದಾರೆ.
ತರುಣ್ ನಗರಜಸ್ಸಿನ ಜಿ.ಎಸ್. ರೋಡ್‌ನಲ್ಲಿನ ರಾಜೀವ್ ಭವನ್ ಕಾಂಗ್ರೆಸ್ ಕಚೇರಿ ಮೇಲೆ ಸಂಜೆ ಸುಮಾರು 6.50ರ ಹೊತ್ತಿಗೆ ಈ ದಾಳಿ ನಡೆದಿದೆ. ಕಚೇರಿಯಲ್ಲಿ ನೂರಾರು ಮಂದಿ ಕಾರ್ಯಕರ್ತರು ಇರುವ ಸಮಯದಲ್ಲಿ ದಾಳಿ ನಡೆದಿದ್ದು, ಕನಿಷ್ಠ ಐದು ಮಂದಿ ಗಾಯಗೊಂಡಿದ್ದಾರೆ.
ಕಾಂಗ್ರೆಸ್ ವಕ್ತಾರ ಮೆಹ್ದಿ ಆಲಮ್ ಬೋರಾ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ರಂಜನ್ ಬೋರಾ ಗಾಯಗೊಂಡವರಲ್ಲಿ ಪ್ರಮುಖರು ಎಂದು ವರದಿಗಳು ಹೇಳಿವೆ.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಸ್ಫೋಟ ಪ್ರಬಲವಾಗಿತ್ತು. ಇಡೀ ಕಟ್ಟಡದ ಒಂದು ಭಾಗ ಸ್ಫೋಟದಿಂದಾಗಿ ಜಖಂಗೊಂಡಿದೆ. ಕಚೇರಿಯ ಗೋಡೆ ಸಂಪೂರ್ಣವಾಗಿ ಧ್ವಂಸಗೊಂಡಿದೆ. ಹೊರಗಿನಿಂದ ಯಾರೋ ಬಂದು ಗ್ರೆನೇಡನ್ನು ಕಚೇರಿಯ ಒಳಗಡೆ ಎಸೆದಿರುವ ಸಾಧ್ಯತೆಗಳಿವೆ.
ಸ್ಫೋಟ ನಡೆಯುತ್ತಿದ್ದಂತೆ ಇಡೀ ಪ್ರದೇಶವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕೃತ್ಯದ ಹಿಂದೆ ಉಲ್ಫಾ ಸಂಘಟನೆಯ ಕೈವಾಡವಿರಬಹುದು ಎಂದು ಶಂಕಿಸಲಾಗಿದೆ.
ಉಲ್ಫಾ ಜತೆ ಕಾಂಗ್ರೆಸ್ ಶಾಂತಿ ಮಾತುಕತೆ ಆರಂಭಿಸಿದ ಬಳಿಕ ನಡೆದಿರುವ ಮೊದಲ ಸ್ಫೋಟವಿದು. ಪರೇಶ್ ಬರುವಾ ಕೃತ್ಯದ ಹಿಂದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಏಪ್ರಿಲ್ 4 ಮತ್ತು 9ರಂದು ರಾಜ್ಯದಲ್ಲಿ ಚುನಾವಣೆ ನಡೆಯಲಿರುವುದರಿಂದ ಘಟನೆ ಭಾರೀ ಮಹತ್ವ ಪಡೆದುಕೊಂಡಿದೆ.