Select Your Language

Notifications

webdunia
webdunia
webdunia
webdunia

ಕಪ್ಪುಹಣ ಮೂಲ ಹುಡುಕದ ಕೇಂದ್ರಕ್ಕೆ ಸುಪ್ರೀಂ ತಪರಾಕಿ

ಕಪ್ಪುಹಣ
ನವದೆಹಲಿ , ಸೋಮವಾರ, 28 ಮಾರ್ಚ್ 2011 (16:37 IST)
ವಿದೇಶಿ ಬ್ಯಾಂಕುಗಳಲ್ಲಿ ಅಕ್ರಮವಾಗಿ ಕೂಡಿಟ್ಟಿರುವ ಕಪ್ಪುಹಣದ ನಿರ್ದಿಷ್ಟ ಮೂಲಗಳನ್ನು ತನಿಖೆ ನಡೆಸದ ಕೇಂದ್ರ ಸರಕಾರಕ್ಕೆ ಮತ್ತೆ ಚಾಟಿ ಬೀಸಿರುವ ಸುಪ್ರೀಂ ಕೋರ್ಟ್, ರಾಷ್ಟ್ರದ ಭದ್ರತೆಗೆ ಬೆದರಿಕೆಯಾಗಿ ಪರಿಣಮಿಸಿರುವ ಪ್ರಕರಣದ ತನಿಖೆಯನ್ನು ಚುರುಕುಗೊಳಿಸುವಂತೆ ಸೂಚಿಸಿದೆ.

ಅದೇ ಹೊತ್ತಿಗೆ ಕಪ್ಪುಹಣ ಪ್ರಕರಣದಲ್ಲಿ ಸರಕಾರವು ಪುಣೆಯ ಕುದುರೆ ಲಾಯದ ಮಾಲಕ ಹಸನ್ ಆಲಿ ಖಾನ್ ಒಬ್ಬನನ್ನೇ ಗುರಿ ಮಾಡುತ್ತಿರುವುದು ಮತ್ತು ವಿದೇಶಿ ಬ್ಯಾಂಕುಗಳಲ್ಲಿ ಶೇಖರಿಸಿಟ್ಟಿರುವ ಇತರ ಯಾವುದೇ ಹೆಸರುಗಳು ಹೊರಗೆ ಬರದೇ ಇರುವುದಕ್ಕೂ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.

ಹೆಚ್ಚಿನ ಮಾಹಿತಿಗಳು ಹೊರಗೆ ಬರುವುದೇ ಇಲ್ಲ. ಕೇವಲ ಒಬ್ಬ ವ್ಯಕ್ತಿ ಬಗ್ಗೆ ಮಾತ್ರ ಇಲ್ಲಿದ್ದಾರೆ. ಇತರರ ಬಗ್ಗೆ ಏನಾಗಿದೆ ಎಂದು ಪ್ರಕರಣದ ತನಿಖೆ ಕುರಿತ ಜಾರಿ ನಿರ್ದೇಶನಾಲಯದ ಸ್ಟೇಟಸ್ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಾಲಿಸಿಟರ್ ಜನರಲ್ ಗೋಪಾಲ ಸುಬ್ರಮಣ್ಯಂ ಸಲ್ಲಿಸಿದ ಸಂದರ್ಭದಲ್ಲಿ ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ ಮತ್ತು ಎಸ್.ಎಸ್. ನಿಜ್ಜಾರ್ ಅವರನ್ನೊಳಗೊಂಡ ಪೀಠವು ಪ್ರಶ್ನಿಸಿತು.

ಸ್ಟೇಟಸ್ ವರದಿಯನ್ನು ಸ್ವೀಕರಿಸಿದ ಬಳಿಕವೂ ಸರಕಾರವನ್ನು ಪೀಠವು ತರಾಟೆಗೆ ತೆಗೆದುಕೊಂಡಿತು. ಹಸನ್ ಆಲಿಖಾನ್ ಪಾಸ್‌ಪೋರ್ಟ್ ಸಂಬಂಧದ ವಿಚಾರ ಸೇರಿದಂತೆ ಸರಕಾರವು ಈ ಪ್ರಕರಣದ ತನಿಖೆಯಲ್ಲಿ ತೆಗೆದುಕೊಂಡಿರುವ ಹೆಜ್ಜೆಗಳನ್ನು ಟೀಕಿಸಿತು.

'ಜಾರಿ ನಿರ್ದೇಶನಾಲಯದ ಸ್ಟೇಟಸ್ ವರದಿಯನ್ನು ನೋಡಿದ ನಂತರ ಸುಮ್ಮನೆ ಕೂರುವುದು ಸಾಧ್ಯವೇ ಇಲ್ಲ. ಈ ಎಲ್ಲಾ ತನಿಖಾ ದಳಗಳು 2008ರಿಂದ ಇದುವರೆಗೆ ಯಾಕೆ ನಿದ್ದೆಯಲ್ಲಿದ್ದವು? ನಾವು ಕ್ರಮಕ್ಕೆ ಮುಂದಾದ ನಂತರ ಯಾಕೆ ಅವುಗಳು ಚಲನೆ ಪಡೆದುಕೊಂಡವು? ರಿಟ್ ಅರ್ಜಿ ಕೋರ್ಟಿಗೆ ಸಲ್ಲಿಕೆಯಾಗದೇ ಇರುತ್ತಿದ್ದರೆ, ಏನೂ ಆಗುತ್ತಿರಲಿಲ್ಲ' ಎಂದು ತೀವ್ರ ಅತೃಪ್ತಿ ವ್ಯಕ್ತಪಡಿಸಿತು.

ಭಾರತೀಯ ಪ್ರಜೆಗಳು ವಿದೇಶಿ ಬ್ಯಾಂಕುಗಳಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿರುವ ಕಪ್ಪುಹಣವನ್ನು ವಾಪಸ್ ತರಬೇಕು ಎಂದು ಮಾಜಿ ಕಾನೂನು ಸಚಿವ ರಾಮ್ ಜೇಠ್ಮಲಾನಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ಕೋರ್ಟ್ ಮೇಲಿನಂತೆ ನುಡಿಯಿತು.

ವಿದೇಶಗಳಲ್ಲಿನ ಬ್ಯಾಂಕುಗಳಲ್ಲಿನ ಕಪ್ಪುಹಣಕ್ಕೆ ಸಂಬಂಧಪಟ್ಟ ಪ್ರಕರಣಗಳ ಸಂಪೂರ್ಣ ತನಿಖೆಗಾಗಿ ಗುಪ್ತಚರ ಇಲಾಖೆ, ರಾ, ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳನ್ನೊಳಗೊಂಡ ವಿಶೇಷ ತನಿಖಾ ದಳವನ್ನು (ಸಿಟ್) ಅಸ್ತಿತ್ವಕ್ಕೆ ತರುವ ತನ್ನ ಸಲಹೆಯನ್ನು ಇದೇ ಸಂದರ್ಭದಲ್ಲಿ ನ್ಯಾಯಾಲಯ ಪುನರುಚ್ಛರಿಸಿದೆ.

Share this Story:

Follow Webdunia kannada