Select Your Language

Notifications

webdunia
webdunia
webdunia
webdunia

ಕನ್ನಡ ಸಮ್ಮೇಳನದಿಂದ ಬೆಳಗಾವಿ ಕರ್ನಾಟಕದ್ದಾಗದು: ಠಾಕ್ರೆ

ಬೆಳಗಾವಿ
ಮುಂಬೈ , ಶನಿವಾರ, 12 ಮಾರ್ಚ್ 2011 (17:05 IST)
ಮಹಾರಾಷ್ಟ್ರಿಗರನ್ನು ಪ್ರಚೋದಿಸಬೇಡಿ ಎಂದು ಕರ್ನಾಟಕದ ರಾಜಕಾರಣಿಗಳಿಗೆ ಗಂಭೀರ ಎಚ್ಚರಿಗೆ ನೀಡಿರುವ ಶಿವಸೇನೆ ವರಿಷ್ಠ ಬಾಳ್ ಠಾಕ್ರೆ, ವಿಶ್ವ ಕನ್ನಡ ಸಮ್ಮೇಳನ ನಡೆಸಿದ ಕೂಡಲೇ ಬೆಳಗಾವಿಯ ಮೇಲಿನ ಕರ್ನಾಟಕದ ಹಿಡಿತ ಬಲಗೊಳ್ಳುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ಬೆಳಗಾವಿಯಲ್ಲಿ ಕನ್ನಡ ಸಮ್ಮೇಳನ ನಡೆಸಿದ ಮಾತ್ರಕ್ಕೆ ಬೆಳಗಾವಿ ಕರ್ನಾಟಕದ್ದೆಂಬ ಆ ರಾಜ್ಯ ಸರಕಾರದ ವಾದಕ್ಕೆ ಪುಷ್ಠಿ ಬರುವುದಿಲ್ಲ. ಬೆಳಗಾವಿಯಲ್ಲಿ ಮರಾಠಿ ಭಾಷಿಗರ ಮೇಲೆ ಭಾರೀ ದೌರ್ಜನ್ಯ ನಡೆಯುತ್ತಿದೆ ಎಂದು ಪಕ್ಷದ ಮುಖವಾಣಿ 'ಸಾಮ್ನಾ'ದಲ್ಲಿ ಠಾಕ್ರೆ ಸ್ವತಃ ಬರೆದಿರುವ ಸಂಪಾದಕೀಯದಲ್ಲಿ ಹೇಳಿದ್ದಾರೆ.

ಮರಾಠಿ ಭಾಷಿಗರಿಗೆ ಕರ್ನಾಟಕ ಪೊಲೀಸರು ಥಳಿಸಿದ್ದಾರೆ ಎಂಬ ವರದಿಗಳನ್ನು ಸಂಪಾದಕೀಯದಲ್ಲಿ ಉಲ್ಲೇಖಿಸಿರುವ ಠಾಕ್ರೆ, ಬೆಳಗಾವಿಯಲ್ಲಿ ಪ್ರಜಾಪ್ರಭುತ್ವವಿದೆಯೇ ಅಥವಾ ಲಿಬಿಯಾದ ಸರ್ವಾಧಿಕಾರಿ ಗಡಾಫಿಯ ಆಡಳಿತವಿದೆಯೇ ಎಂದು ಪ್ರಶ್ನಿಸಿದ್ದಾರೆ.

ಮರಾಠಿ ಮತ್ತು ಕನ್ನಡ ಭಾಷೆಗಳು ಅವಳಿ ಸಹೋದರಿಯರಿದ್ದಂತೆ. ಹಾಗಾಗಿ ವಿಶ್ವ ಕನ್ನಡ ಸಮ್ಮೇಳನವು ಸರಾಗವಾಗಿ ನಡೆಯಲಿ ಎಂದು ಹಾರೈಸಿರುವ ಅವರು, ಕರ್ನಾಟಕ ಸರಕಾರವು ಸಮ್ಮೇಳನವನ್ನು ಉದ್ದೇಶಪೂರ್ವಕವಾಗಿ ಬೆಳಗಾವಿಯಲ್ಲಿ ನಡೆಸಿದೆ ಎಂದು ಆರೋಪಿಸಿದ್ದಾರೆ.

ವಿಶ್ವ ಕನ್ನಡ ಸಮ್ಮೇಳನವನ್ನು ನಡೆಸಿರುವುದರ ಹಿಂದಿನ ಉದ್ದೇಶ ಕನ್ನಡ ಭಾಷೆಯ ಉದ್ಧಾರವಲ್ಲ. ಬದಲಿಗೆ ಮರಾಠಿ ಭಾಷಿಗರನ್ನು ಪ್ರಚೋದಿಸುವುದು ಎಂದೂ ಅವರು ಆಪಾದಿಸಿದ್ದಾರೆ.

ಕರ್ನಾಟಕ ಮೂಲದ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿರುವುದರ ಕುರಿತು ಕೂಡ ಸಂಪಾದಕೀಯದಲ್ಲಿ ಉಲ್ಲೇಖ ಮಾಡಲಾಗಿದೆ.

'ಐಶ್ವರ್ಯಾ ರೈ ಸಮ್ಮೇಳನದಲ್ಲಿ ಭಾಗವಹಿಸುವುದನ್ನು ನಾವು ವಿರೋಧಿಸುವುದಿಲ್ಲ. ನಮಗೆ ಕನ್ನಡ ಭಾಷೆಯ ಜತೆ ಯಾವುದೇ ರೀತಿಯ ಸಂಘರ್ಷ, ಸಮಸ್ಯೆಯಿಲ್ಲ. ಆದರೆ ಮರಾಠಿಗಳ ವಿರುದ್ಧ ಕರ್ನಾಟಕ ಸರಕಾರವು ಎಸಗುತ್ತಿರುವ ದೌರ್ಜನ್ಯವನ್ನು ನಾವು ಸಹಿಸುವುದಿಲ್ಲ'

'ಐಶ್ವರ್ಯಾ ರೈ ಒಬ್ಬ ಮಹಾರಾಷ್ಟ್ರೀಯಳಾಗಿ ಅಲ್ಲಿಗೆ ಹೋಗಿ, ಮರಾಠಿ ಭಾಷಿಗರಿಗೆ ಸಮಾಧಾನ ಹೇಳಬೇಕು ಎನ್ನುವುದು ನಮ್ಮ ಬಯಕೆ. ಆದರೆ ನಮ್ಮ ಕಲಾವಿದರು ಇಂತಹ ಕಾರ್ಯಕ್ರಮಗಳಿಗೆ ಹೋಗುವುದು ಸಾಮಾಜಿಕ ಕರ್ತವ್ಯ ನೆರವೇರಿಸಲು ಅಲ್ಲ, ಬದಲಿಗೆ ತಮ್ಮ ವ್ಯವಹಾರದ ಭಾಗವಾಗಿ' ಎಂದು ಸಂಪಾದಕೀಯದಲ್ಲಿ ಠಾಕ್ರೆ ಕುಟುಕಿದ್ದಾರೆ.

Share this Story:

Follow Webdunia kannada