ಪಾಕಿಸ್ತಾನಿ ಭಯೋತ್ಪಾದಕರಿಂದ ನೂರಾರು ಭಾರತೀಯರಿದ್ದ ವಿಮಾನವು ಅಪಹರಣವಾದ ಬಳಿಕ 'ದಯವಿಟ್ಟು ಸಹಾಯ ಮಾಡಿ' ಎಂದು ಅಮೆರಿಕಾಕ್ಕೆ ಭಾರತ ಗೋಗರೆದಾಗ, ಆ ದೇಶವು ನಿರಾಕರಿಸಿತ್ತು ಎಂಬ ಆಘಾತಕಾರಿ ಅಂಶ ವಿಕಿಲೀಕ್ಸ್ ದಾಖಲೆಯಿಂದ ಬಹಿರಂಗವಾಗಿದೆ.
ನೇಪಾಳದಿಂದ ದೆಹಲಿಗೆ ಬರುತ್ತಿದ್ದ ಇಂಡಿಯನ್ ಏರ್ಲೈನ್ಸ್ ಐಸಿ 814 ವಿಮಾನವನ್ನು 1999ರ ಡಿಸೆಂಬರ್ 24ರಂದು ಪಾಕಿಸ್ತಾನ ಮೂಲದ ಹರ್ಕತ್ ಉಲ್ ಮುಜಾಹಿದೀನ್ ಉಗ್ರರು ಅಪಹರಿಸಿದ ನಂತರ, ತಾಲಿಬಾನ್ ಕುರಿತು ಮಾಹಿತಿಯನ್ನು ಅಮೆರಿಕಾದಲ್ಲಿ ಕೇಳಿದ್ದಕ್ಕೆ ಅದು ನಿರಾಕರಿಸಿತ್ತು. ಇದು 'ಮಾಹಿತಿ ಹೆಕ್ಕುವ ಕಾರ್ಯ' ಎಂದು ಭಾರತದ ಮನವಿಯನ್ನು ವಾಷಿಂಗ್ಟನ್ ತಿರಸ್ಕರಿಸಿತ್ತು.
ವಿಕಿಲೀಕ್ಸ್ಗೆ ಈ ಸಂಬಂಧ ಸಿಕ್ಕಿರುವ ಹಲವು ದಾಖಲೆಗಳನ್ನು 'ದಿ ಹಿಂದೂ' ಆಂಗ್ಲ ಪತ್ರಿಕೆ ಬಹಿರಂಗಪಡಿಸಿದೆ.
ಅಮೆರಿಕಾ ವಶದಲ್ಲಿದ್ದ ತಾಲಿಬಾನ್ ಕುರಿತ ಮಾಹಿತಿಗಳನ್ನು ಭಾರತ ಬಯಸಿತ್ತು. ಎಷ್ಟೇ ಮನವಿಗಳನ್ನು ಮಾಡಿದರೂ ಅಮೆರಿಕಾ ಈ ಮಾಹಿತಿಗಳನ್ನು ಭಾರತಕ್ಕೆ ನೀಡಿರಲಿಲ್ಲ. 2008ರ ಮುಂಬೈ ದಾಳಿಯವರೆಗೆ ಭಾರತದ ಜತೆ ಮಹತ್ವದ ಮಾಹಿತಿಗಳನ್ನು, ಅದರಲ್ಲೂ ಪಾಕಿಸ್ತಾನಕ್ಕೆ ಸಂಬಂಧಿಸಿದ ವಿಚಾರಗಳನ್ನು ಹಂಚಿಕೊಳ್ಳಲು ಅಮೆರಿಕಾ ಹಿಂದೇಟು ಹಾಕಿತ್ತು ಎಂಬ ಅಂಶಗಳು 2005ರ ರಹಸ್ಯ ದಾಖಲೆಗಳಿಂದ ಹೊರ ಬಂದಿವೆ.
ಭಾರತ ಸರಕಾರವು ಮಾಡುತ್ತಿರುವ ನಿರಂತರ ಮನವಿಗಳ ಸಂಬಂಧ 'ಅನವಶ್ಯಕ ಮಾತುಕತೆ' ನಡೆಸುವ ಬದಲು ಒಂದು ಸ್ಪಷ್ಟವಾದ 'ನಕಾರಾತ್ಮಕ ಪ್ರತಿಕ್ರಿಯೆ'ಯನ್ನು ನೀಡಿ ಅದಕ್ಕೊಂದು ತೆರೆ ಎಳೆದು ಬಿಡಿ ಎಂದು ನವದೆಹಲಿಯಲ್ಲಿನ ಅಮೆರಿಕಾ ರಾಯಭಾರಿಯೊಬ್ಬರು ತನ್ನ ದೇಶಕ್ಕೆ ಕೇಳಿಕೊಂಡಿರುವುದು ದಾಖಲೆಯಲ್ಲಿ ಕಂಡು ಬಂದಿದೆ.
ಆದರೆ ನಂತರ ಮತ್ತೊಮ್ಮೆ ರವಾನಿಸಿದ ವರದಿಯಲ್ಲಿ ಬೇರೆಯದೇ ಅಂಶವಿದೆ. ಭಾರತ-ಅಮೆರಿಕಾ ನಡುವಿನ ವ್ಯೂಹಾತ್ಮಕ ದ್ವಿಪಕ್ಷೀಯ ಸಂಬಂಧವನ್ನು ವೃದ್ಧಿಪಡಿಸುವ ಹಿತಾಸಕ್ತಿಯ ನಿಟ್ಟಿನಲ್ಲಿ ಭಾರತದ ತನಿಖಾ ಸಂಸ್ಥೆಗಳ ಜತೆ ಅಮೆರಿಕಾವು ಸಹಕರಿಸಬೇಕು ಎಂದು ಒತ್ತಾಯಿಸಲಾಗಿತ್ತು.
178 ಪ್ರಯಾಣಿಕರಿದ್ದ ವಿಮಾನವನ್ನು ತಾಲಿಬಾನ್ ಸಹಕಾರದಿಂದ ಅಪಹರಿಸಿದ್ದ ಉಗ್ರರು, ಭಾರತದ ವಶದಲ್ಲಿದ್ದ ಮೌಲಾನಾ ಮಸೂದ್ ಅಜರ್ (ನಂತರ ಜೈಶ್ ಇ ಮೊಹಮ್ಮದ್ ಸ್ಥಾಪಿಸಿದವನು) ಸೇರಿದಂತೆ ಮೂವರು ಭಯೋತ್ಪಾದಕರನ್ನು ಬಿಡಿಸಿಕೊಂಡಿದ್ದರು. ಘಟನೆಯಲ್ಲಿ ಒಬ್ಬ ಪ್ರಯಾಣಿಕನನ್ನು ಬಿಟ್ಟರೆ, ಉಳಿದವರನ್ನು ಸುರಕ್ಷಿತವಾಗಿ ಬಿಡಿಸಿಕೊಳ್ಳುವಲ್ಲಿ ಆಗಿನ ಭಾರತ ಸರಕಾರ ಯಶಸ್ವಿಯಾಗಿತ್ತು.