Select Your Language

Notifications

webdunia
webdunia
webdunia
webdunia

ಉಪ ಚುನಾವಣೆ ಈಗ್ಲೇ ಮಾಡ್ಬೇಡಿ: ಅನರ್ಹ ಶಾಸಕರು

ಉಪಚುನಾವಣೆ
ನವದೆಹಲಿ , ಶುಕ್ರವಾರ, 4 ಮಾರ್ಚ್ 2011 (09:24 IST)
ಈಗಾಗಲೇ ಐದು ರಾಜ್ಯಗಳಿಗೆ ಚುನಾವಣೆ ಘೋಷಣೆ ಮಾಡಿರುವ ಚುನಾವಣಾ ಆಯೋಗದ ಕ್ರಮದಿಂದ ಬೆದರಿರುವ ರಾಜ್ಯದ ಅನರ್ಹ ಶಾಸಕರು, ತಮ್ಮ ಅನರ್ಹತೆಯ ಪ್ರಶ್ನೆಯು ಇನ್ನೂ ಸುಪ್ರೀಂ ಕೋರ್ಟಿನಲ್ಲಿರುವುದರಿಂದ ರಾಜ್ಯದಲ್ಲಿ ತಾವು ಪ್ರತಿನಿಧಿಸುವ ಸ್ಥಾನಗಳಿಗೆ ಉಪಚುನಾವಣೆ ನಡೆಸಲು ಆತುರ ಮಾಡಬೇಡಿ ಎಂದು ಚುನಾವಣಾ ಆಯೋಗವನ್ನು ಗುರುವಾರ ಕೋರಿದ್ದಾರೆ.

ದೆಹಲಿಯಲ್ಲಿ ಗುರುವಾರ ಸುದ್ದಿಗಾರರಿಗೆ ಈ ಕುರಿತ ಮಾಹಿತಿ ನೀಡಿದ ಅನರ್ಹ ಶಾಸಕರ ವಕೀಲರು, ಸ್ಪೀಕರ್ ಅವರು ಶಾಸಕರನ್ನು ಅನರ್ಹ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯು ಇನ್ನೂ ಸುಪ್ರೀಂ ಕೋರ್ಟಿನಲ್ಲಿದೆ. ಹೀಗಾಗಿ ಅವಸರದಿಂದ ಚುನಾವಣೆ ಘೋಷಣೆ ಮಾಡಬಾರದು ಎಂದು ಚುನಾವಣಾ ಆಯೋಗವನ್ನು ಕೇಳಿಕೊಳ್ಳಲಾಗಿದೆ ಎಂದಿದ್ದಾರೆ.

ಬುಧವಾರ ಐದು ರಾಜ್ಯಗಳಿಗೆ ಚುನಾವಣೆಗಳನ್ನು ಘೋಷಣೆ ಮಾಡುವ ಸಂದರ್ಭ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ.ಖುರೇಷಿ ಅವರು, ಉಪ ಚುನಾವಣೆಗಳನ್ನು ಇನ್ನೆರಡು ದಿನಗಳಲ್ಲಿ ಘೋಷಿಸಲಾಗುತ್ತದೆ ಎಂದಿದ್ದರು. ಗುರುವಾರ ನಡೆದ ರಾಜ್ಯಸಭೆ ಚುನಾವಣೆಯಲ್ಲಿಯೂ ಈ ಅನರ್ಹ ಶಾಸಕರಿಗೆ ಮತದಾನ ಮಾಡುವ ಅರ್ಹತೆ ಇರಲಿಲ್ಲ.

ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನೆರವಿನೊಂದಿಗೆ ಮುಖ್ಯಮಂತ್ರಿ ವಿರುದ್ಧ ಬಂಡಾಯವೆದ್ದು, ರಾಜ್ಯ ಸರಕಾರವನ್ನು ಪತನದಂಚಿಗೆ ತಳ್ಳಿದ್ದ ಬಿಜೆಪಿಯ 11 ಮತ್ತು 5 ಮಂದಿ ಪಕ್ಷೇತರ ಶಾಸಕರನ್ನು ಸ್ಪೀಕರ್ ಬೋಪಯ್ಯ ಅವರ ಶಾಸಕತ್ವವನ್ನು ಅನರ್ಹಗೊಳಿಸಿ ಆದೇಶ ನೀಡಿದ್ದರು. ಬಂಡಾಯವೆದ್ದು ಶಾಸಕತ್ವವನ್ನು ಕಳೆದುಕೊಂಡು, ಸರಕಾರದಿಂದ ಬರುವ ಸವಲತ್ತುಗಳನ್ನೂ ಕಳೆದುಕೊಂಡಿರುವ ಈ ಶಾಸಕರು ಇದೀಗ ಅಲ್ಲೂ ಇಲ್ಲ, ಇಲ್ಲೂ ಸಲ್ಲ ಎಂಬಂತಾಗಿದ್ದಾರೆ.

Share this Story:

Follow Webdunia kannada