ಮಾರ್ಚ್ 19ರ 'ಸೂಪರ್ ಮೂನ್' ಭೀತಿಗಳ ಬೆನ್ನಿಗೆ ಭೂಕಂಪ ಮತ್ತು ಸುನಾಮಿ ಸುಳಿಗೆ ಸಿಲುಕಿ ಜಪಾನ್ ನಲುಗುತ್ತಿರುವ ನಡುವೆ ಭಾರತದಲ್ಲೂ ಲಘು ಭೂಕಂಪನವಾಗಿರುವ ವರದಿ ಬಂದಿದೆ. ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಭೂಮಿಯು ಲಘುವಾಗಿ ಕಂಪಿಸಿದೆ.
ಜಪಾನ್ ಮೇಲೆ ಶುಕ್ರವಾರ ಸುನಾಮಿ ಅಪ್ಪಳಿಸಿದ ಮೇಲೆ ಸ್ಪಷ್ಟನೆ ನೀಡಿದ್ದ ಭಾರತೀಯ ಸುನಾಮಿ ಕೇಂದ್ರದ ಅಧಿಕಾರಿಗಳು (India Tsunami Centre), ಅಂತಹ ಸಾಧ್ಯತೆಗಳು ಇಲ್ಲ; ಭಾರತಕ್ಕೆ ಯಾವುದೇ ರೀತಿಯ ಅಪಾಯ ಇಲ್ಲ ಎಂದು ಹೇಳಿಕೆ ನೀಡಿದ್ದರು.
ಉತ್ತರಾಖಂಡದ ಚಮೋಲಿ ಮತ್ತು ರುದ್ರಪ್ರಯಾಗ ಜಿಲ್ಲೆಗಳಲ್ಲಿ ಭೂಕಂಪನದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 3.3ರ ತೀವ್ರತೆಯನ್ನು ಇದು ದಾಖಲಿಸಿದೆ.
ಭೂಕಂಪನದ ಅನುಭವವಾಗುತ್ತಿದ್ದಂತೆ ಭೀತಿಯಿಂದ ಜನತೆ ಮನೆಯಿಂದ ಹೊರಗೋಡಿದರು. ಅಪರಾಹ್ನ 2.31ಕ್ಕೆ ಭೂಕಂಪನ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಮೋಲಿ, ಗೋಪೇಶ್ವರ್, ಕರ್ಣಪ್ರಯಾಗ್, ರುದ್ರಪ್ರಯಾಗ್ ಮತ್ತು ಉಖಿಮತ್ ಪ್ರದೇಶಗಳಲ್ಲಿನ ಜನತೆ ಘಟನೆಯಿಂದ ತೀವ್ರ ಗಾಬರಿಗೊಳಗಾಗಿದ್ದಾರೆ. ಯಾವುದೇ ಆಸ್ತಿ-ಪಾಸ್ತಿ ಅಥವಾ ಜೀವಹಾನಿಯಾಗಿರುವ ಬಗ್ಗೆ ವರದಿಗಳು ಬಂದಿಲ್ಲ.
ಈ ಪ್ರದೇಶಗಳಲ್ಲಿ 1999ರಲ್ಲಿ ಪ್ರಬಲ ಭೂಕಂಪಗಳು ನಡೆದಿದ್ದವು. ಘಟನೆಗಳಲ್ಲಿ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ನೂರಾರು ಮಂದಿ ನಿರಾಶ್ರಿತರಾಗಿದ್ದರು.