Select Your Language

Notifications

webdunia
webdunia
webdunia
webdunia

ಉಚಿತ ಲ್ಯಾಪ್‌ಟಾಪ್ ಬೇಕೇ?; ಕರುಣಾನಿಧಿಗೆ ಓಟು ಹಾಕಿ!

ಉಚಿತ ಲ್ಯಾಪ್ಟಾಪ್
ಚೆನ್ನೈ , ಗುರುವಾರ, 24 ಮಾರ್ಚ್ 2011 (12:49 IST)
ತಮಿಳುನಾಡು ರಾಜಕೀಯವೆಂದರೆ ಅದು ಒಂದು ರೀತಿಯ ರಂಗಿನಾಟ. ಒಬ್ಬರಿಗಿಂತ ಇನ್ನೊಬ್ಬರು ಹೆಚ್ಚು 'ಕೊಡುವ' ವೇದಿಕೆ. ಈ ಹಿಂದೆ ಉಚಿತ ಕಲರ್ ಟಿವಿ, ಒಂದು ರೂಪಾಯಿಗೆ ಒಂದು ಕೇಜಿ ಅಕ್ಕಿ ಎಂದೆಲ್ಲ ಹೇಳಿ ಅಧಿಕಾರಕ್ಕೆ ಬಂದಿದ್ದ ಕರುಣಾನಿಧಿ, ಈ ಬಾರಿಯೂ ಗೆಲ್ಲಿಸಿದರೆ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಲ್ಯಾಪ್‌ಟಾಪ್ ಕೊಡುವುದಾಗಿ ಘೋಷಿಸಿದ್ದಾರೆ.

ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಡಿಎಂಕೆ ಪ್ರಣಾಳಿಕೆಯಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡಲಾಗಿತ್ತು. ಆದರೆ ಅದರಲ್ಲಿ ಇತರ ಹಿಂದುಳಿದ ವರ್ಗ (ಒಬಿಸಿ), ಪರಿಶಿಷ್ಟ ಜಾತಿ ಮತ್ತು ವರ್ಗದ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಲ್ಯಾಪ್‌ಟಾಪ್ ಎಂದು ಆಶ್ವಾಸನೆ ನೀಡಲಾಗಿತ್ತು.

ಅದನ್ನೀಗ ಪ್ರತಿಯೊಬ್ಬರಿಗೂ ವಿಸ್ತರಿಸುವುದಾಗಿ ಈ ಬಾರಿ ತಿರುವಾರೂರ್ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಹೇಳಿದ್ದಾರೆ. ಚೆನ್ನೈಯ ಚೆಪಾಕ್‌‌ನಿಂದ ಪ್ರಸಕ್ತ ಆರಿಸಿ ಬಂದಿರುವ ಅವರು, ಮತ್ತೆ ನಮ್ಮದೇ ಸರಕಾರವನ್ನು ಅಧಿಕಾರಕ್ಕೆ ತಂದರೆ ನೀಡಿದ ಭರವಸೆಯನ್ನು ಈಡೇರಿಸುತ್ತೇನೆ ಎಂದಿದ್ದಾರೆ.

ಡಿಎಂಕೆ ಆಶ್ವಾಸನೆಗಳು:
* ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಲ್ಯಾಪ್‌ಟಾಪ್.
* ಮಹಿಳೆಯರಿಗೆ ಉಚಿತ ಮಿಕ್ಸಿ ಅಥವಾ ಗ್ರೈಂಡರ್.
* ಬಿಪಿಎಲ್ ಕುಟುಂಬಕ್ಕೆ ತಿಂಗಳಿಗೆ 35 ಕೇಜಿ ಅಕ್ಕಿ ಉಚಿತ.
* 58ರ ನಂತರದವರು ಹಿರಿಯ ನಾಗರಿಕರು, ಅವರಿಗೆ ಬಸ್ ಪ್ರಯಾಣ ಉಚಿತ.
* ಎಲ್ಲಾ ಗುಡಿಸಲು ತೆಗೆದು, ಕಾಂಕ್ರೀಟ್ ಮನೆ ನಿರ್ಮಾಣ.
* ಉಚಿತ ಕಲರ್ ಟಿವಿ ಯೋಜನೆ ಮುಂದುವರಿಕೆ.
* ಒಂದು ರೂಪಾಯಿಗೆ ಒಂದು ಕೇಜಿ ಅಕ್ಕಿ ಯಥಾ ಸ್ಥಿತಿಯಲ್ಲಿ.

ನಮ್ಮನ್ನು ಮರಳಿ ಅಧಿಕಾರಕ್ಕೆ ತಂದರೆ ನಾವು ಆಶ್ವಾಸನೆ ನೀಡಿರುವುದಕ್ಕಿಂತ ಹೆಚ್ಚಿನದ್ದನ್ನು ಈಡೇರಿಸುತ್ತಿವೆ. ಈಗಾಗಲೇ ನಡೆಯುತ್ತಿರುವ ಗುಡಿಸಲುಗಳ ಬದಲಿಗೆ ಕಾಂಕ್ರೀಟು ಮನೆಗಳ ನಿರ್ಮಾಣ ಯೋಜನೆಯನ್ನು ನಾವು 2006ರ ಚುನಾವಣೆಯಲ್ಲಿ ಹೇಳಿರಲಿಲ್ಲ. ಆದರೆ ಅಧಿಕಾರಕ್ಕೆ ಬಂದ ನಂತರ ಹೇಳಿದ್ದಷ್ಟೇ ಅಲ್ಲದೆ, ಹೆಚ್ಚುವರಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ ಎಂದು ಕರುಣಾನಿಧಿ ಇದೇ ಸಂದರ್ಭದಲ್ಲಿ ಹೇಳಿದರು.

1957ರಿಂದ ತಮಿಳುನಾಡು ವಿಧಾನಸಭೆಗೆ ಸ್ಪರ್ಧಿಸುತ್ತಿರುವ ಕರುಣಾನಿಧಿ ಇದುವರೆಗೂ ಚುನಾವಣೆಯಲ್ಲಿ ಸೋತಿಲ್ಲ. ಅವರು ಮೊದಲು ಸ್ಪರ್ಧಿಸಿದ್ದು ಕುಲಿತಾಳಿ ಕ್ಷೇತ್ರದಿಂದ. ತಾನು ಬಾಲ್ಯವನ್ನು ಕಳೆದಿದ್ದ ತಿರುವಾರೂರ್ ಕ್ಷೇತ್ರದಿಂದ ಈ ಬಾರಿ ಮೊದಲ ಬಾರಿಗೆ ಸ್ಪರ್ಧಿಸುತ್ತಿದ್ದಾರೆ.

86ರ ಹರೆಯದ ಹಿರಿಯ ರಾಜಕಾರಣಿ ರಾಜಕೀಯದಿಂದ ನಿವೃತ್ತಿಯಾಗುವ ಕುರಿತು ಆಗೀಗ ಹೇಳಿಕೆ ನೀಡುತ್ತಿದ್ದಾರಾದರೂ, ಮಕ್ಕಳ ಗಲಾಟೆಯಿಂದಾಗಿ ಅದನ್ನು ಮುಂದೂಡುತ್ತಾ ಬರುತ್ತಿದ್ದಾರೆ. ಈ ಬಾರಿ ಗೆದ್ದರೆ ಮತ್ತೆ ಮುಖ್ಯಮಂತ್ರಿ ನಾನೇ ಎಂದು ಅವರು ಇತ್ತೀಚೆಗಷ್ಟೇ ಹೇಳಿದ್ದನ್ನು ಸ್ಮರಿಸಬಹುದಾಗಿದೆ.

Share this Story:

Follow Webdunia kannada