ಈಗ ಕರಾಟೆಯಲ್ಲಿ ಸಮಯ 'ಕೊಲ್ಲು'ತ್ತಿದ್ದಾನೆ ಹಂತಕ ಕಸಬ್!
ಮುಂಬೈ , ಗುರುವಾರ, 10 ಮಾರ್ಚ್ 2011 (08:17 IST)
26
/11ರ ಮುಂಬೈ ಮೇಲಿನ ದಾಳಿಗೆ ಸಂಬಂಧಿಸಿ ಮರಣ ದಂಡನೆಗೆ ಗುರಿಯಾಗಿರುವ ಪಾಕಿಸ್ತಾನದ ಉಗ್ರಗಾಮಿ ಮೊಹಮದ್ ಅಜ್ಮಲ್ ಅಮೀರ್ ಕಸಬ್ ಈಗ ಆತ್ಮರಕ್ಷಣಾ ಕಲೆಯಾದ ಕರಾಟೆ ಅಭ್ಯಾಸ ಮಾಡುತ್ತಿದ್ದಾನೆ. ಈಗಾಗಲೇ ಮುಗ್ಧ ಜನರ ಮಾರಣ ಹೋಮ ಮಾಡಿರುವ ಈತ ಈ ಆತ್ಮರಕ್ಷಣಾ ಕಲೆಯೊಂದಿಗೆ, ವ್ಯಾಯಾಮವನ್ನೂ ಮಾಡುತ್ತಿದ್ದಾನಂತೆ.ಇದುವರೆಗೆ ಜನರನ್ನು ಕೊಂದಿದ್ದ ಆತ, ಈಗ ಸಮಯ ಕೊಲ್ಲಲು ಈ ರೀತಿ ಮಾಡುತ್ತಿದ್ದಾನೆ ಎನ್ನುತ್ತಾರೆ ಆತನಿರುವ ಆರ್ಥರ್ ರೋಡ್ ಜೈಲಧಿಕಾರಿಗಳು. ಈಗಾಗಲೇ ಆತನ ರಕ್ಷಣೆಗಾಗಿ ಭಾರೀ ಭದ್ರತೆಯ ಈ ಜೈಲಿನಲ್ಲಿ ಇಪ್ಪತ್ತನಾಲ್ಕು ಗಂಟೆಯೂ ಭದ್ರತಾ ಜವಾನರು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿರುವುದರಿಂದ, ಆತ್ಮರಕ್ಷಣೆಯ ಕಲೆ ಅವನಿಗೆ ಅಗತ್ಯವಿಲ್ಲ.ಆದರೆ, ಈತನಿಗೆ ಕರಾಟೆ ಚೆನ್ನಾಗಿ ಗೊತ್ತಿರುವಂತಿದೆ ಎಂದೂ ಹೇಳುತ್ತಿದ್ದಾರೆ ಜೈಲಿನ ಅಧಿಕಾರಿ.ಮುಗ್ಧರ ಮಾರಣಹೋಮ ಮಾಡಿದ ಉಗ್ರಗಾಮಿಗಳಲ್ಲಿ ಬದುಕುಳಿದಿರುವ ಏಕೈಕ ವ್ಯಕ್ತಿಯಾದ ಈತ ಇರುವುದು ಜೈಲಿನೊಳಗಿರುವ ಬಾಂಬ್-ಪ್ರೂಫ್ ಅಂಡಾ (ಮೊಟ್ಟೆಯಾಕಾರದ) ಸೆಲ್‌ನಲ್ಲಿ. ಆತನನ್ನು ಪುಣೆಯ ಯರವಾಡ ಜೈಲಿಗೆ ವರ್ಗಾಯಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ.ಕಸಬ್ ವಾಚಾಳಿಯಂತೆ ಮಾತನಾಡುತ್ತಿದ್ದಾನಂತೆ. ಆದರೆ ಭದ್ರತಾ ಗಾರ್ಡುಗಳು ಆತನಲ್ಲಿ ಮಾತನಾಡುವುದನ್ನು ತಪ್ಪಿಸಿಕೊಳ್ಳುತ್ತಿದ್ದಾರೆ. ನೀವೆಲ್ಲಾ ಎಲ್ಲಿಯವರು, ಎಷ್ಟು ಸಮಯದಿಂದ ಇಲ್ಲಿದ್ದೀರಿ ಎಂಬಿತ್ಯಾದಿ ಪ್ರಶ್ನೆಗಳನ್ನು ಆತ ಕೇಳುತ್ತಲೇ ಇರುತ್ತಾನೆ ಎಂದಿದ್ದಾರೆ ಅಧಿಕಾರಿ.ಭಯೋತ್ಪಾದನಾ ದಾಳಿಗೆ ಸಂಬಂಧಿಸಿ ಭಾರತೀಯ ಪಿತೂರಿಕೋರರಾದ ಫಾಹಿಂ ಅನ್ಸಾರಿ ಮತ್ತು ಸಬಾವುದ್ದೀನ್ ಅಹ್ಮದ್ ಅವರ ಖುಲಾಸೆಯನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರಕಾರ ಸಲ್ಲಿಸಿದ್ದ ಅರ್ಜಿಯನ್ನು ತಳ್ಳಿ ಹಾಕಿದ್ದ ಹೈಕೋರ್ಟು, ಕಸಬ್‌ಗೆ ವಿಧಿಸಲಾಗಿದ್ದ ಮರಣ ದಂಡನೆಯನ್ನು ಎತ್ತಿ ಹಿಡಿದಿತ್ತು. ಬಾಂಬೇ ಹೈಕೋರ್ಟ್ ಈ ತೀರ್ಪನ್ನು ಆತ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲು ನಿರ್ಧರಿಸಿದ್ದಾನೆ.