Select Your Language

Notifications

webdunia
webdunia
webdunia
webdunia

ಇ.ಡಿ.ಗೆ ತೀವ್ರ ಮುಖಭಂಗ; 'ಮಹಾನ್ ಕಳ್ಳ'ನಿಗೆ ಜಾಮೀನು

ಕಪ್ಪುಹಣ
ಮುಂಬೈ , ಶುಕ್ರವಾರ, 11 ಮಾರ್ಚ್ 2011 (18:22 IST)
ಜಾರಿ ನಿರ್ದೇಶನಲಾಯಕ್ಕೆ ತೀವ್ರ ಮುಖಭಂಗವಾಗಿದೆ. ಕಪ್ಪುಹಣ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ 'ಉದ್ಯಮಿ' ಹಸನ್ ಆಲಿ ಖಾನ್‌‌ನನ್ನು ವಶಕ್ಕೆ ಒಪ್ಪಿಸಬೇಕು ಎಂಬ ಜಾರಿ ನಿರ್ದೇಶನಾಲಯದ ಮನವಿಯನ್ನು ತಿರಸ್ಕರಿಸಿರುವ ನ್ಯಾಯಾಲಯವೊಂದು, ಆರೋಪಿಗೆ ಜಾಮೀನು ನೀಡಿದೆ.

ಹಸನ್ ಆಲಿ ಖಾನ್ ಯಾವುದೇ ನಿರ್ದಿಷ್ಟ ಅಪರಾಧಗಳನ್ನು ಎಸಗಿರುವ ಬಗ್ಗೆ ಜಾರಿ ನಿರ್ದೇಶನಾಲಯವು (ಇ.ಡಿ.) ಮಹತ್ವದ ಪುರಾವೆಗಳನ್ನು ಒದಗಿಸಿಲ್ಲ ಎಂದು ಮನವಿಯನ್ನು ತಿರಸ್ಕರಿಸಿದ ಪ್ರಿನ್ಸಿಪಲ್ ಸೆಷನ್ಸ್ ಕೋರ್ಟ್ ನ್ಯಾಯಮೂರ್ತಿ ಎಂ.ಎಲ್. ತಲಹಿಯಾನಿ ಆದೇಶ ನೀಡಿದರು.

ಖಾನ್‌ಗೆ ಜಾಮೀನು ಒದಗಿಸುವಾಗ ನ್ಯಾಯಮೂರ್ತಿಗಳು ಕೆಲವು ಷರತ್ತುಗಳನ್ನು ವಿಧಿಸಿದ್ದಾರೆ. ಪುಣೆ ಮೂಲದ ಕುದುರೆ ತಳಿ ಕೇಂದ್ರದ ಮಾಲಕ ಮುಂದಿನ ಐದು ದಿನಗಳ ಕಾಲ ಮುಂಬೈಯಿಂದ ನಿರ್ಗಮಿಸಬಾರದು ಮತ್ತು ಪ್ರತಿದಿನ ಜಾರಿ ನಿರ್ದೇಶನಾಲಯದ ಕಚೇರಿಗೆ ವಿಚಾರಣೆಗೆ ಆಗಮಿಸಬೇಕು ಎಂದು ನ್ಯಾಯಾಲಯ ಆದೇಶ ನೀಡಿದೆ.

ನ್ಯಾಯಾಲಯದ ಆದೇಶದಿಂದ ಅಸಮಾಧಾನಗೊಂಡಿರುವ ಜಾರಿ ನಿರ್ದೇಶನಾಲಯದ, ಮೇಲಿನ ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಹೇಳಿದೆ.

ಸ್ವಿಜರ್ಲಂಡಿನ ಯುಬಿಎಸ್ ಬ್ಯಾಂಕಿನಲ್ಲಿ 8 ಬಿಲಿಯನ್ ಅಮೆರಿಕನ್ ಡಾಲರ್ ಹಣವನ್ನು ಅಕ್ರಮವಾಗಿ ಇಟ್ಟಿದ್ದಾನೆ ಮತ್ತು ವಿದೇಶಗಳಲ್ಲಿ ಅಕ್ರಮ ವ್ಯವಹಾರಗಳನ್ನು ನಡೆಸಿದ್ದಾನೆ ಎಂದು ಹೇಳಲಾಗಿರುವ ಖಾನ್‌ನನ್ನು ಅಕ್ರಮ ವ್ಯವಹಾರ ತಡೆ ಕಾಯ್ದೆಯಡಿ ಜಾರಿ ನಿರ್ದೇಶನಾಲಯವು ಸೋಮವಾರ ಮಧ್ಯರಾತ್ರಿ ಬಂಧಿಸಿತ್ತು. ಇಂದಿನವರೆಗೂ ಆತ ಜಾರಿ ನಿರ್ದೇಶನಾಲಯದ ವಶದಲ್ಲೇ ಇದ್ದ.

ಆದರೆ ಇದೀಗ ಜಾರಿ ನಿರ್ದೇಶನಾಲಯದ ಮನವಿಯನ್ನು ನ್ಯಾಯಾಲಯ ವಜಾಗೊಳಿಸಿ, ಖಾನ್‌ನನ್ನು ಬಿಡುಗಡೆ ಮಾಡುವಂತೆ ಆದೇಶ ನೀಡಿದೆ. ನ್ಯಾಯಾಲಯದ ತೀರ್ಪನ್ನು ಸಂಪೂರ್ಣವಾಗಿ ಓದಿದ ನಂತರ ಆದೇಶದ ವಿರುದ್ಧ ತಾವು ಉನ್ನತ ನ್ಯಾಯಾಲಯದ ಮೊರೆ ಹೋಗುವುದಾಗಿ ತನಿಖಾ ಸಂಸ್ಥೆಯ ವಕೀಲ ರಾಜೀವ್ ಆವಸ್ಥಿ ತಿಳಿಸಿದ್ದಾರೆ.

ಕಪ್ಪುಹಣ ವ್ಯವಹಾರದಲ್ಲಿ ಖಾನ್ ಭಾಗವಹಿಸಿರುವ ಕುರಿತು ನಮ್ಮಲ್ಲಿ ಸಾಕಷ್ಟು ಪುರಾವೆಗಳಿವೆ. ಆದರೆ ಇವುಗಳನ್ನು ಗುರುತಿಸುವಲ್ಲಿ ಬಹುಶಃ ಆಧೀನ ನ್ಯಾಯಾಲಯ ವಿಫಲವಾಗಿದೆ. ಇದನ್ನು ನಾವು ಪ್ರಶ್ನಿಸುತ್ತೇವೆ. ಪ್ರಕರಣ ಸರಿಯಾದ ದಾರಿಯಲ್ಲೇ ಸಾಗುತ್ತಿದೆ. ನಮಗೆ ಹಲವು ಮಾಹಿತಿಗಳು ಲಭಿಸಿವೆ. ತನಿಖೆಯಲ್ಲಿನ ಕೆಲವು ಲೋಪಗಳನ್ನು ಸರಿಪಡಿಸಲು ಖಾನ್ ಕಸ್ಟಡಿ ನಮಗೆ ಅಗತ್ಯವಿತ್ತು. ಆದರೂ ಅದನ್ನು ಮುಂದಿನ ದಿನಗಳಲ್ಲಿ ಪಡೆದುಕೊಳ್ಳುತ್ತೇವೆ ಎಂದರು.

Share this Story:

Follow Webdunia kannada