Select Your Language

Notifications

webdunia
webdunia
webdunia
webdunia

ಆಡ್ವಾಣಿ ಕೇಸ್ ಓಪನ್; ಕ್ವಟ್ರೋಚಿ ಕೇಸ್ ಕ್ಲೋಸ್

ಕ್ವಟ್ರೋಚಿಯನ್ನು ಗಡೀಪಾರು ಮಾಡಿಸಲಾಗಿಲ್ಲವಂತೆ ಸಿಬಿಐಗೆ

ಒಟ್ಟಾವಿಯೋ ಕ್ವಟ್ರೋಚಿ
ನವದೆಹಲಿ , ಶುಕ್ರವಾರ, 4 ಮಾರ್ಚ್ 2011 (20:07 IST)
ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಖುಲಾಸೆಗೊಳಿಸಿರುವ ಕ್ರಮ ಪ್ರಶ್ನಿಸಿ ಸುಪ್ರೀಂ ಕೋರ್ಟಿನಲ್ಲಿ ಸಿಬಿಐ ಕೇಸನ್ನು ಪುನಃ ತೆರೆದಿದ್ದರೆ, ಇನ್ನೊಂದೆಡೆ, ಬೋಫೋರ್ಸ್ ಹಗರಣಕ್ಕೆ ಸಂಬಂಧಿಸಿ ಇಟಲಿ ಉದ್ಯಮಿ ಒಟ್ಟಾವಿಯೋ ಕ್ವಟ್ರೋಚಿ ವಿರುದ್ಧದ ಕೇಸುಗಳನ್ನು ಮುಚ್ಚಿ ಹಾಕುವಲ್ಲಿ ಯಶಸ್ವಿಯಾಗಿದೆ.

ಶುಕ್ರವಾರ ನಡೆದ ಎರಡು ಪ್ರಕರಣಗಳು ಸಿಬಿಐ ಕಾರ್ಯವೈಖರಿಗೆ ಸಾಕ್ಷಿಯಾದವು.

ಆಡ್ವಾಣಿ ಮತ್ತಿತರ ಸಂಘ ಪರಿವಾರ ನಾಯಕರಿಗೆ ನೋಟೀಸ್...
PTI
ಬಿಜೆಪಿ ಮುಖಂಡರಾದ ಎಲ್.ಕೆ.ಆಡ್ವಾಣಿ, ಮುರಳಿ ಮನೋಹರ ಜೋಶಿ, ಉಮಾ ಭಾರತಿ, ಕಲ್ಯಾಣ್ ಸಿಂಗ್, ಶಿವಸೇನೆಯ ಬಾಳ ಠಾಕ್ರೆ, ಸಂಘ ಪರಿವಾರದ ಅಶೋಕ್ ಸಿಂಘಲ್, ಆಚಾರ್ಯ ಗಿರಿರಾಜ ಕಿಶೋರ್, ವಿನಯ್ ಕಟಿಯಾರ್, ವಿಷ್ಣು ಹರಿ ದಾಲ್ಮಿಯಾ, ಸಾಧ್ವಿ ಋತಂಬರಾ ಮತ್ತು ಮಹಂತ್ ಅವೈದ್ಯ ನಾಥ ಮುಂತಾದವರ ಮೇಲಿದ್ದ ಕ್ರಿಮಿನಲ್ ಒಳಸಂಚು ಪ್ರಕರಣಗಳಲ್ಲಿ, ಈ ಹಿಂದೆ ಸಿಬಿಐಯ ವಿಶೇಷ ನ್ಯಾಯಾಲಯವೇ ಸಮರ್ಪಕ ಸಾಕ್ಷ್ಯಾಧಾರ ಕೊರತೆಯಿಂದಾಗಿ ಖುಲಾಸೆಗೊಳಿಸಿತ್ತು. ಅದನ್ನು ಅಲಹಾಬಾದ್ ಹೈಕೋರ್ಟಿನಲ್ಲಿ ಸಿಬಿಐ ಪ್ರಶ್ನಿಸಿ, ಅಲ್ಲಿಯೂ ಅದಕ್ಕೆ ವಿರುದ್ಧ ತೀರ್ಪೇ ಬಂದಿತ್ತು.

ಈ ಬಗ್ಗೆ ಸಿಬಿಐ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಗೋಪಾಲ ಸುಬ್ರಹ್ಮಣ್ಯಂ ಸುಪ್ರೀಂ ಕೋರ್ಟಿನಲ್ಲಿ ಮೊರೆ ಹೋಗಿದ್ದರು. ಇದರನ್ವಯ ಶುಕ್ರವಾರ ಸುಪ್ರೀಂ ಕೋರ್ಟ್, ಈ ನಾಯಕರಿಗೆಲ್ಲರಿಗೂ ನೋಟೀಸ್ ಜಾರಿಗೊಳಿಸಿದ್ದು, ನಾಲ್ಕು ವಾರಗಳೊಳಗೆ ಅಭಿಪ್ರಾಯ ತಿಳಿಸುವಂತೆ ಸೂಚಿಸಿದೆ.

ಕ್ವಟ್ರೋಚಿ ಕೇಸು ಕ್ಲೋಸ್....
webdunia
PTI
ಇನ್ನೊಂದೆಡೆ, ಇದೇ ದಿನ ನಡೆದ ಮತ್ತೊಂದು ಬೆಳವಣಿಗೆಯಲ್ಲಿ, ಬೋಫೋರ್ಸ್ ಫಿರಂಗಿ ಖರೀದಿ ಹಗರಣಕ್ಕೆ ಸಂಬಂಧಿಸಿ ಇಟಲಿಯ ಉದ್ಯಮಿ, ಸೋನಿಯಾ ಗಾಂಧಿ ಕುಟುಂಬದ ಆಪ್ತರೆಂದು ಹೇಳಲಾಗುತ್ತಿರುವ ಒಟ್ಟಾವಿಯೋ ಕ್ವಟ್ರೋಚಿ ವಿರುದ್ಧದ ಕ್ರಿಮಿನಲ್ ಕೇಸುಗಳನ್ನು ಹಿಂತೆಗೆದುಕೊಳ್ಳುವಂತೆ ಸಿಬಿಐ ಮಾಡಿದ ಮನವಿಯನ್ನು ದೆಹಲಿಯ ನ್ಯಾಯಾಲಯವೊಂದು ಪುರಸ್ಕರಿಸಿದೆ. ಇದರೊಂದಿಗೆ ಕೇಸು ಮುಚ್ಚಿ ಹಾಕಿದಂತಾಗಿದೆ.

ಕೈಗೆ ಸಿಗದ ಕ್ವಟ್ರೋಚಿ ವಿರುದ್ಧದ ಪ್ರಾಸಿಕ್ಯೂಶನ್ ಹಿಂತೆಗೆತಕ್ಕೆ ಸಿಬಿಐ ಸಲ್ಲಿಸಿದ ಅರ್ಜಿಗೆ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ವಿನೋದ್ ಯಾದವ್ ಅವರು ಅಸ್ತು ಎಂದಿದ್ದಾರೆ.

ಕ್ವಟ್ರೋಚಿಯನ್ನು ಭಾರತಕ್ಕೆ ಗಡೀಪಾರು ಮಾಡಿಸುವಲ್ಲಿ ತಾವು ಕೈಗೊಂಡ ಎಲ್ಲ ಪ್ರಯತ್ನಗಳು ವಿಫಲವಾಗಿದ್ದರಿಂದ, ಈ ಕೇಸನ್ನು ಮುಚ್ಚುವಂತೆ ನ್ಯಾಯಾಲಯವನ್ನು ಕೋರಲಾಗಿತ್ತು. ಕ್ವಟ್ರೋಚಿ ಇಷ್ಟು ವರ್ಷಗಳಲ್ಲಿ ಇದುವರೆಗೆ ಭಾರತದ ಯಾವುದೇ ನ್ಯಾಯಾಲಯದ ಎದುರು ವಿಚಾರಣೆಗೆ ಹಾಜರಾಗಿರಲಿಲ್ಲ. ಮತ್ತು ಭಾರತದಲ್ಲಿದ್ದಾಗಲೇ ಅವರಿಗೆ ದೇಶ ಬಿಟ್ಟು ಹೋಗಲು ಅವಕಾಶ ನೀಡಿರುವುದು ಬಿಜೆಪಿ ಸೇರಿದಂತೆ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿತ್ತು.

ಭಾರತದ ಕಾನೂನಿನ ಪ್ರಕಾರ, ಯಾವುದೇ ರಕ್ಷಣಾ ಒಪ್ಪಂದಗಳಿಗೆ ಮಧ್ಯವರ್ತಿ ಇರುವುದೇ ಅಕ್ರಮ. ಹೀಗಾಗಿ ಬೋಫೋರ್ಸ್ ಫಿರಂಗಿಗಳನ್ನು ಖರೀದಿಸಲೆಂದು ಅಂದಿನ ರಾಜೀವ್ ಗಾಂಧಿ ಸರಕಾರದಿಂದ ಕ್ವಟ್ರೋಚಿ ಮತ್ತು ವಿನ್ ಛಡ್ಡಾ ಪಡೆದ ಲಂಚದ ಹಣಕ್ಕೆ ಆದಾಯ ತೆರಿಗೆ ಕೊಡಬೇಕೆಂದು ಈ ಮೊದಲು ಆದಾಯ ತೆರಿಗೆ ಮಂಡಳಿಯೊಂದು ಆದೇಶ ಹೊರಡಿಸಿತ್ತು. ಈ ಮಧ್ಯವರ್ತಿತನದಿಂದಾಗಿ ಭಾರತ ಸರಕಾರವು ಫಿರಂಗಿಗಳಿಗಾಗಿ 160 ಕೋಟಿ ರೂಪಾಯಿ ಹೆಚ್ಚುವರಿ ನೀಡಬೇಕಾಯಿತು ಎನ್ನಲಾಗುತ್ತಿದೆ.

ಬೋಫೋರ್ಸ್ ಹಗರಣವು 80ರ ದಶಕದ ಮತ್ತು ಈ ದೇಶದ ಮೊದಲ ಮಹತ್ವದ ಹಗರಣಗಳಲ್ಲೊಂದು. 155ಎಂಎಂ ಹೌರಿಟ್ಜರ್ ಗನ್‌ಗಳನ್ನು ಭಾರತಕ್ಕೆ ಪೂರೈಸುವಲ್ಲಿ ಬೋಫೋರ್ಸ್ ಎಬಿ ಎಂಬ ಕಂಪನಿಯಿಂದ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಮತ್ತಿತರ ಅನೇಕರು ಲಂಚ ಪಡೆದಿದ್ದರು ಎಂಬ ಆರೋಪವು ಭಾರೀ ದೊಡ್ಡ ರಾಜಕೀಯ ಬಿರುಗಾಳಿಗೆ ಕಾರಣವಾಗಿತ್ತು.

Share this Story:

Follow Webdunia kannada