ಬಿಜೆಪಿಯ ಪಾಲಿಗೆ ಹಿಂದೂ ರಾಷ್ಟ್ರೀಯತೆ ಎನ್ನುವುದು ಒಂದು ಸರಕು ಮತ್ತು ಅದು ಅವಕಾಶವಾದಿತನಕ್ಕೆ ಸಂಬಂಧಪಟ್ಟದ್ದು ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ ಎಂಬ ವಿಕಿಲೀಕ್ಸ್ ದಾಖಲೆಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ, ಬಿಜೆಪಿ ನಾಯಕನ ಮಾತುಗಳನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ ಎಂದರು.
ಹಿಂದುತ್ವ ವಿಚಾರದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಅರುಣ್ ಜೇಟ್ಲಿ ಒಬ್ಬ ಬದ್ಧ ನಾಯಕ ಮತ್ತು ಇಂತಹ ಮಾತುಗಳು ಅವರ ಬಾಯಿಯಿಂದ ಯಾವತ್ತೂ ಬರುವುದಿಲ್ಲ ಎಂದು ಗಡ್ಕರಿ ಸ್ಪಷ್ಟನೆ ನೀಡಿದರು.
ಹಿಂದುತ್ವದ ಕುರಿತು ಅಮೆರಿಕಾ ರಾಯಭಾರಿ ರಾಬರ್ಟ್ ಬ್ಲೇಕ್ ಜತೆ ಬಿಜೆಪಿ ನಾಯಕ ಅರುಣ್ ಜೇಟ್ಲಿ 2005ರಲ್ಲಿ ನಡೆಸಿದ್ದ ಖಾಸಗಿ ಮಾತುಕತೆ ವಿವಾದಕ್ಕೆ ಕಾರಣವಾಗಿತ್ತು. ಹಿಂದೂ ರಾಷ್ಟ್ರೀಯತೆಯು ಬಿಜೆಪಿಯ ಪಾಲಿಗೆ ಯಾವತ್ತೂ 'ಹಾಲು ಕೊಡುವ ಹಸು' ಎಂಬ ಅರ್ಥದ ಮಾತುಗಳನ್ನಾಡಿದ್ದ ಜೇಟ್ಲಿ, ಇದು ಅವಕಾಶವಾದಿತನಕ್ಕೆ ಸಂಬಂಧಪಟ್ಟ ವಿಚಾರ ಎಂದೂ ಹೇಳಿದ್ದರು. ಇತ್ತೀಚೆಗಷ್ಟೇ ಇದು ವಿಕಿಲೀಕ್ಸ್ ಮೂಲಕ ಬಹಿರಂಗವಾಗಿತ್ತು.
ಆದರೆ ಜೇಟ್ಲಿ ಹಾಗೆ ಹೇಳಿರಲು ಸಾಧ್ಯವೇ ಇಲ್ಲ. ನಾನು ಅವರ ಜತೆ ಮಾತನಾಡಿದ್ದೇನೆ. ಹಾಗೆ ಯಾವತ್ತೂ ಹೇಳಿಲ್ಲ ಎಂದು ಜೇಟ್ಲಿ ನನಗೆ ಹೇಳಿದ್ದಾರೆ ಎಂದು ಗಡ್ಕರಿ ತಿಳಿಸಿದರು.
ವಿಕಿಲೀಕ್ಸ್ ದಾಖಲೆಗಳ ಬಗ್ಗೆ ಕಾಂಗ್ರೆಸ್ಸನ್ನು ಟೀಕಿಸುತ್ತಿರುವ ಬಿಜೆಪಿ ಪಾಲಿಗೆ ಇದು ಇಬ್ಬಂದಿತನ ನೀತಿ ಎನಿಸುವುದಿಲ್ಲವೇ ಎಂದು ಪತ್ರಕರ್ತರು ಪ್ರಶ್ನಿಸಿದರು.
ಕಾಂಗ್ರೆಸ್‌ನದ್ದು 2008ರ ವಿಶ್ವಾಸ ಮತದ ಸಂದರ್ಭದಲ್ಲಿ ಸಂಸದರಿಗೆ ಲಂಚ ನೀಡಿರುವವರ ಮತ್ತು ಪಡೆದುಕೊಂಡಿರುವವರ ಹೆಸರುಗಳನ್ನು ವಿಕಿಲೀಕ್ಸ್ ಬಹಿರಂಗಪಡಿಸಿರುವ ಪ್ರಕರಣ. ಜೇಟ್ಲಿ ಅವರದ್ದು ತಪ್ಪಾಗಿ ಅರ್ಥ ಮಾಡಿಕೊಂಡಿರುವ ಪ್ರಕರಣ ಎಂದು ಉತ್ತರಿಸಿದರು.
ಅತ್ತ ಬಿಜೆಪಿ ಉಪಾಧ್ಯಕ್ಷ ಮುಖ್ತಾರ್ ಅಬ್ಬಾಸ್ ನಖ್ವಿ ಕಾಂಗ್ರೆಸ್ ಟೀಕೆಗಳಿಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿಯ ರಾಷ್ಟ್ರೀಯತೆ ಮತ್ತು ಸೈದ್ಧಾಂತಿಕ ಬದ್ಧತೆ ಬಗ್ಗೆ ಕಾಂಗ್ರಸ್ ಅಥವಾ ಅದರ ಸರಕಾರದಿಂದ ಪ್ರಮಾಣಪತ್ರ ನಮಗೆ ಬೇಕಾಗಿಲ್ಲ. ಆ ಪಕ್ಷದಲ್ಲಿರುವುದು ಈಗ ಅವಧಿ ಮುಗಿದಿರುವ ಕ್ಷಿಪಣಿಗಳ ಆರೋಪ ಮತ್ತು ಭ್ರಷ್ಟಾಚಾರದ ಮುಳುಗುತ್ತಿರುವ ಹಡಗು ಎಂದು ಟೀಕಿಸಿದರು.