ಅರುಣಾ ಶಾನಭಾಗಳನ್ನು ಮತ್ತೆ ನೋಡಲಾರೆ: ಶಾಂತಾ ಶಾನಭಾಗ
ಮುಂಬೈ , ಭಾನುವಾರ, 13 ಮಾರ್ಚ್ 2011 (09:35 IST)
ಕಳೆದ 37 ವರ್ಷಗಳಿಂದ ಮುಂಬೈಯ ಕೆಇಎಂ ಆಸ್ಪತ್ರೆಯ ಕೋಣೆಯೊಂದರಲ್ಲಿ ಜೀವಚ್ಛವವಾಗಿ ಮಲಗಿರುವ ಅರುಣಾ ರಾಮಚಂದ್ರ ಶಾನಭಾಗ್ ಬಗ್ಗೆ ಅವರ ಸಹೋದರಿ ಶಾಂತಾ ನಾಯಕ್ ಹೇಳಿರುವ ಮಾತಿದು. ತೀರಾ ಗದ್ಗದಿತರಾಗಿಯೇ ಮಾತು ಆರಂಭಿಸಿದ ಅವರು, ಈ ಸ್ಥಿತಿಯಲ್ಲಿ ಆಕೆಯನ್ನು ಮತ್ತೆ ನೋಡಲಾರೆ ಎಂದು ದಯಾಮರಣ ನಿರಾಕರಿಸಿದ ನಂತರ ಪ್ರತಿಕ್ರಿಯಿಸಿದ್ದಾರೆ.ಆಕೆಯನ್ನು ನಾನು ಮತ್ತೆ ನೋಡಲಾರೆ. ಕೆಇಎಂ ಆಸ್ಪತ್ರೆಯ ದಾದಿಯರು ಅರುಣಾಳನ್ನು ನೋಡಿಕೊಳ್ಳುತ್ತಾರೆ. ಅಲ್ಲಿಗೆ ಹೋಗುವ ವಯಸ್ಸೂ ನನ್ನದಲ್ಲ ಎಂದು ಮುಂಬೈಯ ಲೋವರ್ ಪರೇಲ್ ನಿವಾಸಿ 75 ದಾಟಿರುವ ಶಾಂತಾ ನಾಯಕ್ ತ್ರಾಸದಿಂದಲೇ ಹಜಾರದಲ್ಲಿ ಅಡ್ಡಾಡುತ್ತಾ ಮಾತಿಗಿಳಿದರು.'
ನಾನು ಆಕೆಯನ್ನು ಕೊನೆಯ ಬಾರಿ ನೋಡಿದ್ದು, ಟಿವಿಯಲ್ಲಿ, ಕೆಲವು ತಿಂಗಳ ಹಿಂದೆ. ನನ್ನ ಕಣ್ಣಲ್ಲಿ ನೀರು ಬಂದದ್ದನ್ನು ನೋಡಿ ಅಳಿಯ ತಕ್ಷಣವೇ ಟಿವಿ ಆಫ್ ಮಾಡಿದ. ಈ ಸ್ಥಿತಿಯಲ್ಲಿ ಆಕೆಯನ್ನು ನೋಡುವುದು ತೀರಾ ಹಿಂಸೆಯೆನಿಸುತ್ತದೆ' ಎಂದು ಭಾವುಕರಾಗಿ ನುಡಿದರು.ಅತ್ಯಾಚಾರಕ್ಕೊಳಗಾಗಿ ಮುಂಬೈಯ ಕೆಇಎಂ ಆಸ್ಪತ್ರೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿರುವ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಅರುಣಾ ಶಾನಭಾಗ (60) ಅವರಿಗೆ ದಯಾಮರಣ ಕರುಣಿಸಬೇಕು ಎಂದು ಪತ್ರಕರ್ತೆ ಪಿಂಕಿ ವಿನಾನಿ ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಇದನ್ನು ಕೋರ್ಟ್ ಕೆಲ ದಿನಗಳ ಹಿಂದಷ್ಟೇ ತಿರಸ್ಕರಿಸಿತ್ತು. ಅರುಣಾರಿಗೆ ದಯಾಮರಣ ಸಾಧ್ಯವಿಲ್ಲ ಎಂದು ತೀರ್ಪು ನೀಡಿತ್ತು.ಈ ಬಗ್ಗೆ ರಾಷ್ಟ್ರವ್ಯಾಪಿ ಭಾರೀ ಚರ್ಚೆಗಳು ನಡೆದಿದ್ದವು. ಆದರೆ ಇವ್ಯಾವುದರ ಗೊಡವೆಯೂ ಶಾಂತಾ ನಾಯಕ್ ಅವರಿಗಿಲ್ಲ. 'ಅರುಣಾ ಕುರಿತ ಸುದ್ದಿ ಅಥವಾ ಚರ್ಚೆಗಳನ್ನು ನಾನು ವೀಕ್ಷಿಸಿಲ್ಲ. ಆದರೆ ಅದರ ಬಗ್ಗೆ ನನಗೆ ಗೊತ್ತು' ಎನ್ನುವ ಅವರ ಪ್ರಕಾರ, ಅರುಣಾಗೆ ದಯಾಮರಣ ಕರುಣಿಸಬೇಕಾಗಿಲ್ಲ.ಅರುಣಾ ಮತ್ತು ಶಾಂತಾ ಅವರದ್ದು ವಯಸ್ಸಿನಲ್ಲಿ 15 ವರ್ಷಗಳ ಅಂತರ. 'ನಾನು ಮದುವೆಯಾಗಿ ಹಳದೀಪುರದಿಂದ ಮುಂಬೈಗೆ ಸ್ಥಳಾಂತರಗೊಂಡಾಗ ಆಕೆಗೆ ಕೇವಲ ಒಂದು ವರ್ಷ. ಆಕೆ ನರ್ಸಿಂಗ್ ಕಲಿಯಲು ಮುಂಬೈಗೆ ಬಂದಾಗ ಹಾಸ್ಟೆಲ್ ಒಂದರಲ್ಲಿ ತಂಗಿದ್ದಳು. ಆಗಾಗ ನಮ್ಮ ಮನೆಗೆ ಊಟಕ್ಕೆ ಬರುತ್ತಿದ್ದಳು' ಎಂದು ಶಾಂತಾ ಈಗ ನೆನಪಿಸಿಕೊಳ್ಳುತ್ತಾರೆ.ಕ್ಲಿನಿಕ್ ಒಂದನ್ನು ತೆರೆಯುವ ಸಲುವಾಗಿ ಹಣ ಹೊಂದಿಸುತ್ತಿದ್ದ ಅರುಣಾ ಶಾನಭಾಗ ಅವರು ಕೆಇಎಂ ಆಸ್ಪತ್ರೆಯ ವೈದ್ಯರೊಬ್ಬರನ್ನು ಮದುವೆಯಾಗುವ ತಿಂಗಳ ಮೊದಲು ತನ್ನ ಸಹೋದರಿ ಶಾಂತಾ ಜತೆಗೆ ನೆಲೆಸಿದ್ದರು.ಆದರೂ ಕೆಇಎಂ ಆಸ್ಪತ್ರೆ ಅಥವಾ ನಿಮ್ಮ ಸಹೋದರಿ ಜತೆ ನೀವು ಯಾಕೆ ಸಂಪರ್ಕ ಇಟ್ಟುಕೊಂಡಿಲ್ಲ ಎಂದು ಪ್ರಶ್ನಿಸಿದರೆ, 'ಅರುಣಾರನ್ನು ಮನೆಗೆ ಕರೆದುಕೊಂಡು ಹೋಗುವಂತೆ ಆಸ್ಪತ್ರೆಯವರು ನನಗೆ ಹೇಳಿದರು. ಆದರೆ ಹಾಗೆ ಮಾಡಲು ನಾನು ಆರ್ಥಿಕವಾಗಿ ಶಕ್ತಳಾಗಿರಲಿಲ್ಲ. ನಾಲ್ಕು ಮಕ್ಕಳು ಮತ್ತು ಅನಾರೋಗ್ಯ ಪೀಡಿತ ಗಂಡ ಜತೆಗಿದ್ದರು' ಎಂದು ತನ್ನ ಕಷ್ಟವನ್ನು ವಿವರಿಸಿದರು.ಸ್ಫುರದ್ರೂಪಿಯಾಗಿದ್ದ ಅರುಣಾ ಶಾನಭಾಗರು ಒಂದು ದಿನ ಆಸ್ಪತ್ರೆಯ ವಿಶ್ರಾಂತಿ ಕೊಠಡಿಯಲ್ಲಿ ಬಟ್ಟೆ ಬದಲಾಯಿಸುತ್ತಿದ್ದಾಗ ದುರುಳ ವಾರ್ಡ್ ಬಾಯ್ ಅತ್ಯಾಚಾರ ಎಸಗಿದ್ದ. ಪ್ರತಿರೋಧ ತೋರಿದಾಗ ನಾಯಿ ಕಟ್ಟುವ ಚೈನಿನಿಂದ ಕತ್ತು ಬಿಗಿದಿದ್ದ. ಇದರಿಂದ ಮೆದುಳಿಗೆ ರಕ್ತ ಸಂಪರ್ಕ ಕಡಿತಗೊಂಡಿತ್ತು. ಪರಿಣಾಮ ಅರುಣಾ ಪ್ರಜ್ಞೆ ಕಳೆದುಕೊಂಡಿದ್ದರು.ಯೌವನದಲ್ಲಿ ಅರುಣಾ ಸುಂದರಿಯಾಗಿದ್ದರು ಎಂಬುದನ್ನು ಒಪ್ಪಿಕೊಂಡಿರುವ ಶಾಂತಾ, ನನ್ನ ಎಲ್ಲಾ ಸಹೋದರಿಯರು ಮತ್ತು ಸಹೋದರರು ಪ್ರಕೃತಿದತ್ತ ಚೆಲುವನ್ನು ಹೊಂದಿದ್ದರು. ಇದರಿಂದ ಅರುಣಾ ಹೊರತಲ್ಲ. ಆದರೆ ಹಣೆಬರಹ ಎಲ್ಲವನ್ನೂ ಬದಲಾಯಿಸುತ್ತದೆ. ನಮ್ಮಲ್ಲಿ ಆಗ ಹಣವೇ ಇರಲಿಲ್ಲ. ಅರುಣಾಗೆ ಹೊಟ್ಟೆಗೆ ಇಲ್ಲದಾಗ ನನಗೂ ತಿನ್ನಲೇನೂ ಇರಲಿಲ್ಲ ಎಂದು ದಾಟಿ ಬಂದ ಬದುಕನ್ನು ಮೆಲುಕು ಹಾಕಿದರು.