ಐತಿಹಾಸಿಕ ಪುರಿ ಜಗನ್ನಾಥ ದೇವಾಲಯದ ಮುಂಭಾಗ ಇರುವ ಏಮರ್ ಮಠದಲ್ಲಿ ಸುಮಾರು 17 ಟನ್‌ಗಳಷ್ಟು ಬೆಳ್ಳಿಗಟ್ಟಿಗಳು ಶನಿವಾರ ಪತ್ತೆಯಾಗಿದ್ದು, ಪ್ರಸಕ್ತ ಮಾರುಕಟ್ಟೆ ದರದಂತೆ 84 ಕೋಟಿ ರೂಪಾಯಿ ಮೌಲ್ಯದ್ದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಚ್ಚರಿ ಏನಪ್ಪಾ ಅಂದರೆ, ಸುಮಾರು 200 ವರ್ಷಗಳಷ್ಟು ಹಳೆಯದಾದ ಈ ಮಠಕ್ಕೆ ಸಾವಿರಾರು ಮಂದಿ ಭೇಟಿ ನೀಡುತ್ತಿದ್ದರು ಕೂಡ ಈ ಬೆಳ್ಳಿ ರಹಸ್ಯ ಹೊರಬಿದ್ದಿರಲಿಲ್ಲವಾಗಿತ್ತು. ಏತನ್ಮಧ್ಯೆ, ಬೆಳ್ಳಿಗಟ್ಟಿಗಳನ್ನು ಮಾರಾಟ ಮಾಡುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಕಳ್ಳರು ನೀಡಿದ ಮಾಹಿತಿ ಮೇರೆಗೆ 17 ಟನ್ ಬೆಳ್ಳಿಗಟ್ಟಿ ಪುರಾಣ ಬಯಲಾಗಿದೆ.
ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, 17 ಟನ್ ಬೆಳ್ಳಿ ಗಟ್ಟಿಯ ಮೌಲ್ಯ 85 ಕೋಟಿ ರೂಪಾಯಿ. ಇದರಲ್ಲಿ 533 ಬೆಳ್ಳಿ ಗಟ್ಟಿ ತುಂಡುಗಳಿವೆ. ಪ್ರತಿ ಗಟ್ಟಿಯೂ 35ರಿಂದ 40ಕೆಜಿ ತೂಕವಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ. ಇಷ್ಟೊಂದು ಪ್ರಮಾಣದ ಬೆಳ್ಳಿಗಟ್ಟಿಯನ್ನು ನಾಲ್ಕು ಮರದ ಪೆಟ್ಟಿಗೆಯಲ್ಲಿ ಹಾಕಿ ರೂಮಿನಲ್ಲಿ ಇಡಲಾಗಿತ್ತು.
ಕುತ್ತುಂ ಗ್ರಾಮದ ಬರುನ್ ಬರಾಲ್ ಮತ್ತು ಅಕ್ಷಯದಾಸ್ ಎಂಬವರು ಬೆಳ್ಳಿಗಟ್ಟಿ ಕಳವು ಮಾಡಿ ಮಾರಾಟ ಮಾಡಲು ಯತ್ನಿಸಿದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವುದಾಗಿ ಪುರಿ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಕುಮಾರ್ ತಿಳಿಸಿದ್ದಾರೆ.
ಒರಿಸ್ಸಾ ಸರಕಾರದ ಪ್ರಾಚ್ಯ ವಸ್ತು ಇಲಾಖೆಯಿಂದ ಮಠದ ನವೀಕರಣ ಕಾರ್ಯದ ಕಾರ್ಮಿಕರಾಗಿದ್ದ ಬರಾಲ್ ಮತ್ತು ದಾಸ್ ಕೆಲಸ ಮಾಡಲು ಬಂದ ಸಂದರ್ಭದಲ್ಲಿ ಮಠದೊಳಗಿನ ಮರದ ಪೆಟ್ಟಿಗೆಯಲ್ಲಿ ಇರಿಸಲಾಗಿದ್ದ ಬೆಳ್ಳಿಯ ಗಟ್ಟಿಗಳನ್ನು ನೋಡಿದ್ದರು. ನಂತರ ಆ ಕೋಣೆಗೆ ಕನ್ನ ಹಾಕಿದ ಈ ಕಳ್ಳರು ಕೆಲವು ಬೆಳ್ಳಿಗಟ್ಟಿಯನ್ನು ಕೆಲವರ ನೆರವಿನಿಂದ ತೆಗೆದು ಮಾರಾಟ ಮಾಡಲು ಮುಂದಾಗಿದ್ದರು ಎಂದು ಎಸ್ಪಿ ವಿವರಿಸಿದ್ದಾರೆ.
ಇದೀಗ ಬೆಳ್ಳಿಗಟ್ಟಿ ತುಂಬಿಟ್ಟಿರುವ ಕೊಠಡಿಯನ್ನು ಸೀಲ್ಡ್ ಮಾಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಎಸ್ಪಿ ಸಂಜಯ್ ಕುಮಾರ್ ಹೇಳಿದ್ದಾರೆ.