Select Your Language

Notifications

webdunia
webdunia
webdunia
webdunia

ಅಕ್ರಮ ಗಣಿಗಾರಿಕೆ; ರೆಡ್ಡಿ ಪರ ಅಧಿಕಾರಿಗೆ ಸಿಬಿಐ ವಿಚಾರಣೆ

ಸಿಬಿಐ
ಹೈದರಾಬಾದ್ , ಭಾನುವಾರ, 27 ಫೆಬ್ರವರಿ 2011 (09:19 IST)
ಬಳ್ಳಾರಿ ಮೀಸಲು ಅರಣ್ಯ ಪ್ರದೇಶದಲ್ಲಿ ಓಬಳಾಪುರಂ ಮೈನಿಂಗ್ ಕಂಪನಿ (ಒಎಂಸಿ) ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದೆ ಎಂಬ ಆರೋಪಗಳ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ, ಬಳ್ಳಾರಿ ರೆಡ್ಡಿಗಳ ಕಂಪನಿಯ ಪರವಾಗಿ ಕೆಲಸ ಮಾಡಿದ್ದಾರೆ ಎಂದು ಶಂಕಿಸಲಾಗಿರುವ ಅಧಿಕಾರಿಗಳನ್ನು ವಿಚಾರಣೆ ನಡೆಸುತ್ತಿದೆ.

ಆ ನಿಟ್ಟಿನಲ್ಲಿ ಆಂಧ್ರಪ್ರದೇಶದ ಹಿರಿಯ ಐಎಎಸ್ ಅಧಿಕಾರಿ ವೈ. ಶ್ರೀಲಕ್ಷ್ಮಿ ಎಂಬವರನ್ನು ಶುಕ್ರವಾರ ಸಿಬಿಐ ವಿಚಾರಣೆಗೊಳಪಡಿಸಿದೆ.

ಪ್ರಸಕ್ತ ಆರೋಗ್ಯ ಇಲಾಖೆಯ ಆಯುಕ್ತರಾಗಿರುವ ಅವರು, ಕೈಗಾರಿಕಾ ಇಲಾಖೆಯ ಕಾರ್ಯದರ್ಶಿಯಾಗಿದ್ದ ಸಂದರ್ಭದಲ್ಲಿ 2005ರಿಂದ 2009ರ ನಡುವೆ ಒಎಂಸಿ ಕಂಪನಿಗೆ ನೀಡಲಾಗಿದ್ದ ಕೆಲವು ಲೀಸ್‌ಗಳು ಕ್ರಮಬದ್ಧವಾಗಿಲ್ಲ ಎಂದು ಸಿಬಿಐ ಗಮನಕ್ಕೆ ಬಂದಿದೆ ಎಂದು ತನಿಖಾ ಸಂಸ್ಥೆಯ ಮೂಲಗಳು ಹೇಳಿವೆ.

ಕರ್ನಾಟಕ ಪ್ರವಾಸೋದ್ಯಮ ಸಚಿವ ಗಾಲಿ ಜನಾರ್ದನ ರೆಡ್ಡಿಯವರ ಮಾಲಕತ್ವದ ಒಎಂಸಿ ಕಂಪನಿಯು, ಆಂಧ್ರಪ್ರದೇಶ ಮತ್ತು ಕರ್ನಾಟಕದ ನಡುವಿನ ಗಡಿ ರೇಖೆಗಳನ್ನು ಬದಲಾಯಿಸಿರುವ ಹಾಗೂ ಕರ್ನಾಟಕದ ಬಳ್ಳಾರಿ ಜಿಲ್ಲೆ ಮತ್ತು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಗಳಲ್ಲಿ ಹರಡಿರುವ ಬಳ್ಳಾರಿ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಆರೋಪವನ್ನು ಎದುರಿಸುತ್ತಿದೆ.

ಒಎಂಸಿಗೆ ಗಣಿಗಾರಿಕೆಯ ಗುತ್ತಿಗೆಗಳನ್ನು ನೀಡುವ ಸಂದರ್ಭದಲ್ಲಿ ರೂಢಿಯಲ್ಲಿರುವ ನಿಯಮಾವಳಿಗಳನ್ನು ಅನುಸರಿಸಲಾಗಿದೆಯೇ ಅಥವಾ ಇಲ್ಲವೇ ಎಂಬ ಕುರಿತು ಐಎಎಸ್ ಅಧಿಕಾರಿ ಶ್ರೀಲಕ್ಷ್ಮಿ ಅವರಲ್ಲಿ ಸಿಬಿಐ ತಂಡವು ಪ್ರಶ್ನಿಸಿತು ಎಂದು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿರುವ ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಿಬಿಐ ಹಾಕಿದ ಬಹುತೇಕ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸುವುದನ್ನು ತಪ್ಪಿಸಿಕೊಂಡ ಅಧಿಕಾರಿ, ಎಲ್ಲವೂ ಕ್ರಮಬದ್ಧವಾಗಿಯೇ ನಡೆದಿದೆ ಎಂಬ ತಮ್ಮ ನಿಲುವಿಗೆ ಅಂಟಿಕೊಂಡರು. ಕೆಲವು ನಿರ್ದಿಷ್ಟ ಪ್ರಶ್ನೆಗಳು ಬಂದಾಗ ಮೌನವಾಗಿ ಉಳಿದುಕೊಂಡರು ಎಂದು ಸಿಬಿಐ ಮೂಲಗಳು ಹೇಳಿವೆ.

ಅಕ್ರಮ ಗಣಿಗಾರಿಕೆ ಕುರಿತು ಕಳೆದ ತಿಂಗಳು ತನಿಖೆ ಆರಂಭಿಸಿರುವ ಸಿಬಿಐ, ಒಎಂಸಿ ಗುತ್ತಿಗೆ ಪಡೆದುಕೊಂಡಿರುವ ಗಣಿಗಾರಿಕೆಯ ಪ್ರದೇಶಗಳಿಗೆ ಇತ್ತೀಚೆಗಷ್ಟೇ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.

Share this Story:

Follow Webdunia kannada